Advertisement
ರೇಡಿಯಲ್ ಗೇಟ್ ಶಾಶ್ವತ ಪರಿಹಾರಮುಳ್ಳಿಕಟ್ಟೆ, ಬಂಟ್ವಾಡಿ, ಸೇನಾಪುರ, ಗುಡ್ಡಮ್ಮಾಡಿ, ಕುಂಬಾರಮಕ್ಕಿ ಪ್ರದೇಶದ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುತ್ತಿದ್ದರಿಂದ ಆಗುತ್ತಿದ್ದ ಸಮಸ್ಯೆಗೆ ಪರಿಹಾರ ಎನ್ನುವಂತೆ 6 ಕೋ.ರೂ. ವೆಚ್ಚದಲ್ಲಿ ಬಂಟ್ವಾಡಿಯಲ್ಲಿ ಡ್ಯಾಂ ನಿರ್ಮಿಸಲಾಗಿತ್ತು. ಆದರೆ ಡ್ಯಾಂನಲ್ಲಿ ಹಲಗೆ ಅಳವಡಿಸಿದ್ದರೂ, ಕೆಲವೊಮ್ಮೆ ನೀರು ಹೊರ ಹೋಗಿ ಕೃಷಿಗೆ ಹಾನಿಯಾಗುತ್ತಿದ್ದರಿಂದ ಶಾಶ್ವತ ಪರಿಹಾರವಾಗಿ ಈ ರೇಡಿಯಲ್ ಗೇಟ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಹಿಂದಿನ ಶಾಸಕ ಗೋಪಾಲ ಪೂಜಾರಿಯವರ ಮುತುವರ್ಜಿಯಲ್ಲಿ ರೇಡಿಯಲ್ ಗೇಟ್ ಯೋಜನೆಗೆ 3.39 ಕೋ.ರೂ. ಅನುದಾನ ಬಿಡುಗಡೆಗೊಂಡಿತ್ತು.
ಬಂಟ್ವಾಡಿ ಡ್ಯಾಂನಲ್ಲಿ ಒಟ್ಟು 116 ಕಿಂಡಿಗಳಿವೆ. ಆ ಪೈಕಿ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 14 ಕಿಂಡಿಗಳಿಗೆ ಈ ರೇಡಿಯಲ್ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಇದು ಉಪ್ಪು ನೀರಿನ ಸಮಸ್ಯೆಯನ್ನು ಪರಿ ಹರಿಸುವ ನಿಟ್ಟಿನಲ್ಲಿ ಯಶ ಕಂಡರೆ, ಮುಂದಿನ ಹಂತದಲ್ಲಿ ಎಲ್ಲ ಕಿಂಡಿಗಳಿಗೂ ಇದೇ ಮಾದರಿಯ ಗೇಟ್ ಅಳವಡಿಸಲಾಗುವುದು. ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲಿರುವ ಸುಮಾರು 400 ಕಿಂಡಿ ಅಣೆಕಟ್ಟುಗಳಿಗೂ ಇದೇ ರೀತಿಯ ಯಂತ್ರ ಚಾಲಿತ ಗೇಟ್ ಅಳವಡಿಕೆಗೆ ಚಿಂತಿಸಲಾಗುವುದು ಎನ್ನುವ ಮಾಹಿತಿ ನೀಡುತ್ತಾರೆ ಇಲಾಖೆಯ ಅಧಿಕಾರಿಗಳು. ಇದರಿಂದ ಪ್ರಯೋಜನವೇನು?
ಈ ರೇಡಿಯಲ್ ಗೇಟ್ ನಿರ್ಮಾಣದ ಬಳಿಕ ಡ್ಯಾಂ ವ್ಯಾಪ್ತಿಯ ಸುಮಾರು 20 ಕಿ.ಮೀ. ಉದ್ದದಲ್ಲಿ ನೀರು ಸಂಗ್ರಹವಾಗಲಿದೆ. ಇದು ಇಲ್ಲಿನ ಸುಮಾರು 450 ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಪ್ರಯೋಜನವಾಗಲಿದೆ. ಅದಲ್ಲದೆ ಉಪ್ಪು ನೀರಿನ ಸಮಸ್ಯೆಗೂ ಪ್ರಯೋಜನವಾಗಲಿದೆ. ಹಲಗೆ ಅಳವಡಿಸಿದರೆ, ಡ್ಯಾಂನಲ್ಲಿ ನೀರು ತುಂಬಿದರೆ ಹೊರ ಬಿಡಲು ಕಷ್ಟವಾಗುತ್ತದೆ. ಆದರೆ ಇದು ಸ್ವಯಂಚಾಲಿತ ಗೇಟ್ ಆಗಿರುವುದರಿಂದ ಅನುಕೂಲವಾಗಲಿದೆ.
Related Articles
ಈ ವರ್ಷದ ಫೆಬ್ರವರಿಯಲ್ಲಿ ಈ ರೇಡಿಯಲ್ ಗೇಟ್ ಅಳವಡಿಕೆ ಕಾರ್ಯ ಆರಂಭಗೊಂಡಿದೆ. ಈಗ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದರಿಂದ ನೂರಾರು ರೈತರಿಗೆ ಅನುಕೂಲವಾಗಲಿದೆ.
– ಸುರೇಂದ್ರ ಎಸ್., ಎಇಇ, ಸಣ್ಣ ನೀರಾವರಿ ಇಲಾಖೆ
Advertisement