Advertisement

ವಾತ್ಸಲ್ಯ ತೋರಿದ ಬಂಟರ ಸಂಘ ಅಮ್ಮನ ಮನೆಯಂತೆ

06:22 AM Mar 10, 2019 | |

ಬೆಂಗಳೂರು: ಬಂಟರ ಸಂಘ ನನಗೆ ಮಾತೃ ವಾತ್ಸಲ್ಯ ತೋರಿದ್ದು, ನಾನು ಸಂಘಕ್ಕೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌ ಹೇಳಿದರು.

Advertisement

ಬೆಂಗಳೂರು ಬಂಟರ ಸಂಘದ ಮಹಿಳಾ ವಿಭಾಗದಿಂದ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ನಾನು ಸುಮಾರು 25 ವರ್ಷಗಳಿಂದ ಸಂಘದ ಜತೆ ನಂಟು ಹೊಂದಿದ್ದು, ಸಂಘ ನನಗೆ ತಾಯಿಯ ವಾತ್ಸಲ್ಯ ತೋರಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

“ಬಂಟರ ಸಂಘಕ್ಕೆ ಬಂದರೆ ನನಗೆ ತಾಯಿಯ ಮನೆಗೆ ಬಂದಂತೆ ಅನಿಸುತ್ತದೆ. ನಾನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನ ಪಡೆಯಬೇಕಾದರೆ ಸಂಘ ನೀಡಿದ ಪ್ರೋತ್ಸಾಹವೇ ಕಾರಣ. ಹಿಂದೆ ಸಂಘದ “ಸ್ನೇಹ ಚಿಂತನೆ’ ಪತ್ರಿಕೆಗೆ ಕವಿತೆಗಳನ್ನು ಬರೆಯುತ್ತಿದ್ದೆ,’ ಎಂದು ಸಂಘದೊಂದಿಗಿನ ಒಡನಾಟ ಮೆಲುಕು ಹಾಕಿದರು.

ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್‌.ಉಪೇಂದ್ರ ಶೆಟ್ಟಿ ಮಾತನಾಡಿ, ನಮ್ಮದು ಮಾತೃಪ್ರಧಾನ ದೇಶವಾಗಿದೆ. ಹೀಗಾಗಿಯೇ ಬಂಟರ ಸಮಿತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. 

ಸಿಟಿ ಸಿವಿಲ್ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿನೀತಾ ಪಿ. ಶೆಟ್ಟಿ ಮಾತನಾಡಿ, ಸ್ತ್ರೀಯರನ್ನು ವಕ್ರ ದೃಷ್ಟಿಯಿಂದ ನೋಡುವ ಮನಸ್ಥಿತಿ ಬದಲಾಗಬೇಕು. ಮಹಿಳೆಯರು ಕೂಡ ತಮ್ಮ ರಕ್ಷಣೆಗಾಗಿ ಸ್ವತಃ ವ್ಯಕ್ತಿತ್ವ ಹಾಗೂ ಆತ್ಮ ರಕ್ಷಣೆ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

Advertisement

ಮಹಿಳಾ ದಿನಾಚರಣೆ ಅಂಗವಾಗಿ ಬೆಳಗ್ಗೆಯಿಂದ ಸಂಜೆವರೆಗೂ ಮಹಿಳೆಯರಿಗೆ ಸಂಬಂಧಿಸಿದ ವಿಚಾರಗೋಷ್ಠಿಗಳು ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉದಯೋನ್ಮುಖ ಪ್ರತಿಭೆಗಳನ್ನು ಸನ್ಮಾನಿಸಲಾಯಿತು.

ಈ ವೇಳೆ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್‌ ನಿರ್ದೇಶಕಿ ಡಾ.ಮಮತಾ, ದೇಹದಾಡ್ಯì ತಜ್ಞೆ ವನಿತಾ ಅಶೋಕ್‌, ಬಂಟರ ಸಂಘದ ಮಹಿಳಾ ವಿಭಾಗದ ಸಂಚಾಲಕಿ ಯೋಗ್ಯಾ ಎಲ್. ರೈ, ಜಯಶ್ರೀ ರೈ ಸೇರಿ ಪ್ರಮುಖರು ಹಾಜರಿದ್ದರು.

ಮೋಹಕ ಬೆಡಗು ಅನಾವರಣ: ಮಹಿಳಾ ದಿನಾಚರಣೆ ಅಂಗವಾಗಿ ಬಂಟರ ಸಂಘದ ಆವರಣದಲ್ಲಿ ಮಾನಿನಿಯರ ಮೋಹಕ ಬೆಡಗು ಮೈದೆಳೆದ್ದಿತ್ತು. ಬಣ್ಣ ಬಣ್ಣದ ಸೀರೆಯಲ್ಲಿ ಮಹಿಳೆಯರು ಕಂಗೊಳಿಸಿ ಸಮಾರಂಭಕ್ಕೆ ಮೆರುಗು ನೀಡಿದರು. ಮಹಿಳಾ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿದವು. ಪ್ರತಿ ಗಂಟೆಗೆ ಒಂದು ಲಕ್ಕಿ ಲೇಡಿ ಹಾಗೂ ವಿಶೇಷ ಬಹುಮಾನ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next