ಮೂಲತಃ ರಾಜ್ಯದ ಕರಾವಳಿ ಭಾಗದ ಬಂಟರು ಇಂದು ರಾಜ್ಯ, ದೇಶ-ವಿದೇಶಗಳ ಯಾವುದೇ ಭಾಗಕ್ಕೆ ಹೋದರೂ ಸಿಗುವ ಕಾಯಕ ಜೀವಿಗಳು. ವಿಶಿಷ್ಟ ಸಂಸ್ಕೃತಿ-ಪರಂಪರೆ ಹೊಂದಿರುವ ಬಂಟರು ಕೃಷಿ, ಹೊಟೇಲ್ ಉದ್ಯಮ, ಹಾಗೂ ಸಮಾಜ ಸೇವೆ ಮೂಲಕ ಇಂದು ಸಾಮಾಜಿಕವಾಗಿ ತಮ್ಮದೇ ಆದ ಛಾಪು ಮೂಡಿಸಿ ಖ್ಯಾತಿ ಗಳಿಸಿದ್ದಾರೆ. ಹಲವು ದಶಕಗಳ ಹಿಂದೆಯೇ ಹುಬ್ಬಳ್ಳಿ-ಧಾರವಾಡಕ್ಕೂ ಆಗಮಿಸಿ ಹೊಟೇಲ್ ಇನ್ನಿತರ ಉದ್ಯಮ ಆರಂಭಿಸಿದ್ದ ಬಂಟರು, ಸುಮಾರು 49 ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಆರಂಭಿಸಿದ್ದು, ಸಂಘದ ಮೂಲಕ ಸಮಾಜ, ನಾಡು-ನುಡಿ, ಶೈಕ್ಷಣಿಕ, ಧಾರ್ಮಿಕ ಸೇವೆ ಸಲ್ಲಿಸಿದ್ದು, ಆಹಾರ ಸಂಸ್ಕೃತಿಗೆ ಮೆರುಗು ನೀಡಿದ್ದು ಇತಿಹಾಸ. ತನ್ನ ಸಮಾಜದ ಹಿತ ಹಾಗೂ ಇತರೆ ಸಮಾಜಗಳೊಂದಿಗೂ ಅನ್ಯೋನ್ಯತೆ, ಪ್ರೀತಿ-ಸ್ನೇಹ ಹೊಂದಿರುವ ಬಂಟರ ಸಂಘ ಇದೀಗ ಸಮಾಜದೊಳಗಿನ ಸಂಬಂಧ, ವಾತ್ಸಲ್ಯ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಲು, ಯುವಕರಿಗೆ ಪರಂಪರೆಯ ಪ್ರೇರಣೆ ನೀಡಲು ಬಂಟರ ಭಾವೈಕ್ಯ ಸಮಾರಂಭಕ್ಕೆ ಮುಂದಾಗಿದೆ…
ಹೊಟೇಲ್, ಕಟ್ಟಡ ಸೇರಿದಂತೆ ವಿವಿಧ ನಿರ್ಮಾಣ ಕಾರ್ಯ, ಧಾರ್ಮಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಇತಿಹಾಸ ಬರೆದು ಖ್ಯಾತಿ ಗಳಿಸಿದ್ದ, ಸಮಾಜಮುಖೀ ಚಿಂತಕ ಡಾ| ಆರ್.ಎನ್. ಶೆಟ್ಟಿ ಅವರ ಪ್ರೇರಣೆ ಹಾಗೂ ನೇತೃತ್ವದಲ್ಲಿ 1974 ರಲ್ಲಿ ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಜನ್ಮ ತಳೆದಿತ್ತು.
ಅಲ್ಲಿಂದ ಈ ವರೆಗೂ ಸಮಾಜದ ಒಗ್ಗೂಡಿಸುವಿಕೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಘ, ಇನ್ನೊಂದು ವರ್ಷಕ್ಕೆ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಪಾದಾರ್ಪಣೆ ಮಾಡಲಿದೆ. ಸಂಘದ ಅಡಿಯಲ್ಲಿ ಹತ್ತು ಕಾರ್ಯಗಳು ನಡೆಯುತ್ತಿದ್ದು, ಅದರ ಭಾಗವಾಗಿಯೇ ಜು.23ರಂದು ಬಂಟರ ಭಾವೈಕ್ಯ ಭವ್ಯ ಸಮಾರಂಭಕ್ಕೆ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣಮಂಟಪ ಸಾಕ್ಷಿಯಾಗಲಿದೆ. ಸಮಾಜದ ಭಾವನೆಗಳ ಸಂಗಮವಾಗಲಿದೆ.
ಹೊಟೇಲ್ ಸೇರಿದಂತೆ ವಿವಿಧ ಉದ್ಯಮದಲ್ಲಿ ತೊಡಗಿರುವ ಸುಮಾರು 10 ಸಾವಿರಕ್ಕೂ ಅಧಿಕ ಬಂಟ ಸಮುದಾಯದವರು ಧಾರವಾಡ ಜಿಲ್ಲೆಯಲ್ಲಿದ್ದು, ಇದರಲ್ಲಿ ಅಂದಾಜು 6 ಸಾವಿರ ಜನ ಹು.ಧಾ. ಮಹಾನಗರದಲ್ಲಿ ನೆಲೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಕೇವಲ ಹೆಸರು, ಪದಾಧಿಕಾರಿಗಳ ಪಟ್ಟಿಗೆ ಮಾತ್ರ ಸೀಮಿತವಾಗಿರದೆ ಹಲವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವೆಗಳ ಮೂಲಕ ಕಳೆದ 49 ವರ್ಷಗಳಿಂದಲೂ ತನ್ನ ಸಕ್ರಿಯತೆ ಉಳಿಸಿಕೊಂಡು ಇತರರಿಗೆ ಮಾದರಿಯಾಗಿದೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ, ಕರಾವಳಿಯ ಸಾಂಸ್ಕೃತಿಕ ಸೊಬಗು ಯಕ್ಷಗಾನಕ್ಕೆ ಉತ್ತೇಜನ, ಕಲಾವಿದರಿಗೆ ಪ್ರೋತ್ಸಾಹ, ಸಮಾಜದ ಸಾಧಕರಿಗೆ ಸನ್ಮಾನ, ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಶಿಸ್ತುಬದ್ಧ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದೆ.
ಹುಬ್ಬಳ್ಳಿ-ಧಾರವಾಡ ಬಂಟರ ಸಂಘದಿಂದ ಈಗಾಗಲೇ ಹುಬ್ಬಳ್ಳಿಯಲ್ಲಿ ಆರ್.ಎನ್.ಎಸ್.ಶಾಲೆ ಆರಂಭವಾಗಿದ್ದು, ಎಸ್‌ಎಸ್‌ಎಲ್‌ಸಿ ವರೆಗೆ ವ್ಯಾಸಂಗ ಸೌಲಭ್ಯ ಹೊಂದಿದೆ. ಇದೀಗ ಸಂಘ ಶೈಕ್ಷಣಿಕ ಸೇವೆ ವಿಸ್ತರಣೆ ನಿಟ್ಟಿನಲ್ಲಿ ಸುಮಾರು 4 ಎಕರೆ ಜಾಗದಲ್ಲಿ ಕಾಲೇಜು ಆರಂಭಿಸಲು ಮುಂದಾಗಿದೆ. ಬಂಟರ ಸಮುದಾಯದ ಯುವಕ-ಯುವತಿಯರಿಗೆ ಯಪಿಎಸ್‌ಸಿ, ಕೆಪಿಎಸ್‌ಸಿ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗುವ ತರಬೇತಿ ಹಾಗೂ ಪ್ರೋತ್ಸಾಹ ಕಾರ್ಯಗಳ ಕುರಿತು ಚಿಂತನೆ ನಡೆದಿದೆ. ಇತರೆ ಎಲ್ಲ ಸಮಾಜಗಳಿಗೆ ಒಳಿತನ್ನೇ ಬಯಸುವ ಬಂಟರ ಸಂಘ, ಸಮಾಜದಲ್ಲಿ ನೊಂದವರ ಕಣ್ಣೀರು ಒರೆಸುವ ಕಾರ್ಯದ ಮೂಲಕ ತಾಯಿ ಹೃದಯದ ಮಮತೆ ತೋರುತ್ತಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸಂಭ್ರಮದಲ್ಲಿ ಹು.ಧಾ. ಬಂಟರ ಸಂಘ ಆ.15ರಂದು ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸುವ ಕಾರ್ಯದ ಮೂಲಕ ಸ್ವಾತಂತ್ರÂ ಅಮೃತ ಮಹೋತ್ಸವಕ್ಕೆ ನೈಜ ಗೌರವ ಸಲ್ಲಿಸಲು ಮುಂದಾಗಿದೆ.
ಬಂಟರ ಸಮಾಜದ ಬಯಕೆ ಹಾಗೂ ಡಾ| ಆರ್.ಎನ್. ಶೆಟ್ಟಿ ಅವರ ಮುಂದಾಲೋಚನೆ ಮತ್ತು ಮುತುವರ್ಜಿಯೊಂದಿಗೆ ಆರಂಭಗೊಂಡ ಹುಬ್ಬಳ್ಳಿ-ಧಾರವಾಡ ಬಂಟರ ಸಂಘ ಕಳೆದ 49 ವರ್ಷಗಳ ಚಿಂತನೆ, ಸೇವೆ-ಸಾಧನೆಗಳ ಮೆಲುಕು ಹಾಕುವುದರ ಜತೆಗೆ ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿ ದೃಷ್ಟಿಕೋನದ ಯೋಜನೆಗಳೊಂದಿಗೆ ಸುವರ್ಣ ಸಂಭ್ರಮಕ್ಕೆ ಮುಂದಡಿ ಇಡುತ್ತಿದೆ.
ಬಂಟರ ಭಾವೈಕ್ಯ ಸಮಾರಂಭ ಜು.23ರಂದು ಆರ್. ಎನ್.ಶೆಟ್ಟಿ ಕಲ್ಯಾಣಮಂಟಪದಲ್ಲಿ ನಡೆಯಲಿದೆ. ಹೆಸರೇ ಸೂಚಿಸುವಂತೆ ಸಮಾಜದ ಭಾವೈಕ್ಯ ಬೆಸೆಯುವ, ಸಮಾಜದ ಸಾಧಕರನ್ನು ಸನ್ಮಾನಿಸುವ ಮೂಲಕ, ಸಮಾಜದ ಯುವಕರಿಗೆ ಸಾಧನೆ ಪ್ರೇರಣೆ ದೀಕ್ಷೆ ನೀಡುವ ಕಾರ್ಯ ಇದಾಗಿದೆ. ಬಂಟರ ಸಮಾಜದ ಸಾಧಕರಾದ ವಿಠuಲ ಹೆಗ್ಡೆ, ಜಯಪ್ರಕಾಶ ಹೆಗ್ಡೆ, ಮಟ್ಟಾರು ರತ್ನಾಕರ ಹೆಗ್ಡೆ, ಚಂದ್ರಹಾಸ ಶೆಟ್ಟಿ, ಅನಿಶ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತಿದೆ. ರಾಜ್ಯಪ್ರಶಸ್ತಿ ವಿಜೇತ ಗಂಗಾವತಿ ಪ್ರಾಣೇಶ ಹಾಗೂ ಬಳಗದಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ.
ಅವಿರೋಧ ಆಯ್ಕೆ ಪರಂಪರೆ
ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಮತ್ತೂಂದು ವಿಶೇಷ ಹಾಗೂ ಒಗ್ಗಟ್ಟಿನ ಬಲದ ಪ್ರತೀಕವೆಂದರೆ ಸಂಘ ಸ್ಥಾಪನೆಯಾದ 1974 ರಿಂದ ಇಲ್ಲಿಯವರೆಗೆ ಅಂದರೆ ಸುಮಾರು 49 ವರ್ಷಗಳಿಂದ ಸಂಘದ ಪದಾಧಿಕಾರಿಗಳ ಆಯ್ಕೆ ಕಗ್ಗಂಟಾಗಿಲ್ಲ. ಇಲ್ಲಿ ಎಲೆಕ್ಷನ್ ಬದಲು ಸೆಲೆಕ್ಷನ್‌ಗೆ ಒತ್ತು ನೀಡಿದ್ದರಿಂದ ಇಲ್ಲಿಯವರೆಗೆ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಅವಿರೋಧ ಆಯ್ಕೆ ಯಾಗುತ್ತಲೇ ಬಂದಿದ್ದಾರೆ. ಸಂಘಕ್ಕೆ ಆಯ್ಕೆಯಾದವರು ಸಮಾಜದ ಹಿತ ವೃದ್ಧಿಸುವ, ಸಮಾಜ ಬಾಂಧವರ ಒಗ್ಗಟ್ಟು ಹಾಗೂ ಸಂಕಷ್ಟ ಕಾಲದಲ್ಲಿ ನೆರವು ನೀಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತ ಬಂದಿರುವುದೇ ಸಂಘದಲ್ಲಿ ಇಂದಿಗೂ ಚುನಾವಣೆ ಪೈಪೋಟಿ ಛಾಯೆಯ ಸಣ್ಣ ಸುಳಿವೂ ಇಲ್ಲವಾಗಿದೆ.
50 ಲಕ್ಷ ರೂ.ವೆಚ್ಚದಲ್ಲಿ ಕಲ್ಯಾಣ ಮಂಟಪ ನವೀಕರಣ..
ಬ್ರಹ್ಮ ಕಲಶೋತ್ಸವ..
ಹು.ಧಾ. ಬಂಟರ ಸಂಘದ ಸುವರ್ಣ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಆರ್.ಎನ್. ಶೆಟ್ಟಿ ಕಲ್ಯಾಣಮಂಟಪದ ನವೀಕರಣ ಕಾರ್ಯಕ್ಕೆ ಮುಂದಡಿ ಇರಿಸಲಾಗಿದೆ. ಅಂದಾಜು 50 ಲಕ್ಷ ರೂ.ವೆಚ್ಚದಲ್ಲಿ ಕಲ್ಯಾಣಮಂಟಪದ ನವೀಕರಣ ನಡೆಯಲಿದೆ. ನವೀಕರಣದ ನೀಲನಕ್ಷೆ ಸಿದ್ಧಗೊಂಡಿದೆ. ಹು.ಧಾ.ಬಂಟರ ಸಂಘದ ಕಚೇರಿ ವಿಸ್ತರಣೆ, ಇರುವ ಜಾಗದ ವ್ಯವಸ್ಥಿತ ಬಳಕೆ, ಇನ್ನಿತರ ಸೌಲಭ್ಯಗಳ ಸುಧಾರಣೆಗಳಿಗೆ ಸಂಘ ಯೋಜಿಸಿದೆ. ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪ ಅನೇಕ ಶುಭ ಸಮಾರಂಭ, ಹಲವು ಸಭೆ-ಕಾರ್ಯಕ್ರಮಗಳಿಗೆ ಬಳಕೆ ಆಗುತ್ತಿದೆ. ಬಡವರಿಗೆ ರಿಯಾಯಿತಿ ದರಲ್ಲಿಯೂ ಕಲ್ಯಾಣ ಮಂಟಪವನ್ನು ನೀಡುತ್ತಿರುವುದು ವಿಶೇಷ ಹಾಗೂ ಬಂಟರ ಸಂಘದ ಸಹಾಯ ಮಾಡುವ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಕಲ್ಯಾಣ ಮಂಟಪದ ಆವರಣದಲ್ಲಿ ಕಳೆದ 12 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾದ ಮಹಾಗಣಪತಿ ದೇವಸ್ಥಾನಕ್ಕೆ ಮುಂದಿನ ವರ್ಷ ಬ್ರಹ್ಮ ಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ. 2023 ಕ್ಕೆ ದೇವಸ್ಥಾನ ಸ್ಥಾಪನೆಗೊಂಡು 13ನೇ ವರ್ಷದ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವ ಕೈಗೊಳ್ಳಲಾಗುತ್ತಿದೆ. ಮಹಾಗಣಪತಿ ದೇವಸ್ಥಾನ ಕೇವಲ ಬಂಟ ಸಮುದಾಯದವರಿಗಷ್ಟೇ ಸೀಮಿತವಾಗದೆ ಇತರೆ ಸಮಾಜದವರೂ ಸಹ ಪೂಜೆ, ಹರಕೆ, ಧಾರ್ಮಿಕ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸಂಕಷ್ಠಿ ಸಂದರ್ಭದಲ್ಲಿ ಗಣಹೋಮ, ವಿಶೇಷ ಪೂಜೆಗೆ ಎಲ್ಲ ಸಮಾಜದವರೂ ಮುಂಚಿತವಾಗಿ ತಿಳಿಸುವ ಮೂಲಕ ಹೋಮ, ವಿಶೇಷ ಧಾರ್ಮಿಕ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಣೆಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿಯೇ ಕಲ್ಯಾಣ ಮಂಟಪದ ನವೀಕರಣ ಸಂದರ್ಭದಲ್ಲಿ ದೇವಸ್ಥಾನ ಎದುರಿಗೆ ಗಣಹೋಮಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡುವ ಯೋಜನೆ ಹೊಂದಲಾಗಿದೆ.
ಬಂಟರ ಸಂಘಕ್ಕೀಗ “ಸುಗ್ಗಿ ‘ ಕಾಲ..
ಬಂಟರ ಸಮಾಜ ಇನ್ನಷ್ಟು ಒಗ್ಗೂಡಬೇಕು. ಮತ್ತಷ್ಟು ಸಮುದಾಯದ ಹಾಗೂ ಸಾಮಾಜಿಕ ಸೇವೆಗೆ ಮುಂದಾಗಬೇಕು. ಮುಖ್ಯವಾಗಿ ಸಮಾಜದ ಯುವ ಸಮೂಹಕ್ಕೆ, ಮಕ್ಕಳಿಗೆ ನಮ್ಮ ಪೂರ್ವಜರು ಮಹತ್ವದ ಬಳುವಳಿಯಾಗಿ ನೀಡಿದ ಬಂಟರ ವಿಶಿಷ್ಟ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕತೆ, ಆಚರಣೆಗಳ ಪರಿಚಯವಾಗಿ ಅದು ಮುಂದಿನ ಪೀಳಿಗೆಗೂ ಕುಂದಿಲ್ಲದಂತೆ ಸಾಗಬೇಕೆಂಬುದು ನನ್ನ ಪ್ರಬಲ ಬಯಕೆ.ಇದು, ಕೇವಲ 18 ನೇ ವಯಸ್ಸಿಗೆ ಹುಟ್ಟೂರು ಬಿಟ್ಟು ಬಂದು ಹೊಟೇಲ್ ಮಾಣಿಯಾಗಿ ಕಾಯಕ ಆರಂಭಿಸಿ ಇಂದು ಪ್ರತಿಷ್ಠಿತ ಹೊಟೇಲ್ ಉದ್ಯಮಿಗಳಲ್ಲಿ ಒಬ್ಬರಾಗಿರುವ, ಸಮಾಜ-ಧಾರ್ಮಿಕ ಸೇವೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಅವರ ಮನದಾಳದ ಅನಿಸಿಕೆ. ಬಂಟ ಸಮುದಾಯ ಬಾಂಧವರು, ಹಿರಿಯರು, ಹಿತೈಷಿಗಳೆಲ್ಲ ಸೇರಿ ಹು.ಧಾ.ಬಂಟರ ಸಂಘದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಇದನ್ನು ನಾನು ಅಧಿಕಾರ ಎಂದು ಭಾವಿಸಿಲ್ಲ. ಬದಲಾಗಿ, ಸಮಾಜವನ್ನು ಮತ್ತಷ್ಟು ಗಟ್ಟಿಯಾಗಿ ಒಗ್ಗೂಡಿಸುವುದು, ಸಂಘದ ಮೂಲಕ ಹೆಚ್ಚು ಹೆಚ್ಚು ಸೇವಾ ಕಾರ್ಯ ಕೈಗೊಳ್ಳಲು ನನಗೆ ಸಿಕ್ಕ ಸೌಭಾಗ್ಯ, ಜವಾಬ್ದಾರಿ ಎಂದೇ ಭಾವಿಸಿದ್ದೇನೆ. ಮುಂದಿನ ವರ್ಷ ಸಂಘಕ್ಕೆ 50ರ ಸಂಭ್ರಮವಿದ್ದು ಆ ವೇಳೆ ವಿಶ್ವದೆಲ್ಲೆಡೆಯ ಬಂಟ ಸಾಧಕರನ್ನು ಕರೆತರುವ ಹಾಗೂ ಹು.ಧಾ. ಬಂಟರ ಸಂಘಕ್ಕೆ ಅವಳಿನಗರ ಮಧ್ಯ ದೊಡ್ಡದಾದ ಜಾಗದಲ್ಲಿ ಕಟ್ಟಡ ನಿರ್ಮಾಣದ ಚಿಂತನೆ ಹೊಂದಿದ್ದೇನೆ. ಸಂಘದ ಸಾಧನೆ ಜತೆಗೆ ಬಂಟರ ಸಮಾಜದ ಇತಿಹಾಸ, ಸಾಧನೆಯ ಮಹತ್ವ ತಿಳಿಸುವ ಕೆಲಸ ಆಗಬೇಕು ಎಂಬುದು ನನ್ನ ಅನಿಸಿಕೆ. ಮುಖ್ಯವಾಗಿ ಸಮಾಜದವರು ಸಣ್ಣ-ದೊಡ್ಡ ಉದ್ಯಮ, ವ್ಯಾಪಾರ ಎಂಬ ಭೇದ-ಭಾವ ಇಲ್ಲದೆ ನಾವೆಲ್ಲ ಒಂದೇ ಎಂಬ ಭಾವನೆಯೊಂದಿಗೆ ಒಗ್ಗೂಡಬೇಕು ಎಂಬ ಆಶಯದೊಂದಿಗೆ ಸಂಘದ ಕಾರ್ಯಕ್ಕೆ ಮುಂದಾಗಿದ್ದೇನೆ. ಸಂಘ ಹಾಗೂ ಬಂಟ ಸಮುದಾಯದ ಎಲ್ಲರ ಸಹಕಾರ, ಪ್ರೋತ್ಸಾಹ ಇದ್ದೇ ಇರುತ್ತದೆ ಎಂಬ ಅಚಲ ವಿಶ್ವಾಸ ನನ್ನದು. ಸುಗ್ಗಿ ಸುಧಾರಕ ಶೆಟ್ಟಿ ಅವರು ತಮ್ಮ ಹುಟ್ಟೂರು ಕರ್ಜೆ ಬಿಟ್ಟು ಹುಬ್ಬಳ್ಳಿಯಲ್ಲಿ ನೆಲೆ ಕಂಡಿದ್ದರೂ, ತವರು ನೆಲದ ಪ್ರೇಮ ಮರೆತಿಲ್ಲ. ಗ್ರಾಮದಲ್ಲಿ ಮಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಪಡಿಸಿ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿದ ರೀತಿ ಹೇಗಿತ್ತೆಂದರೆ ಮಂಗಳೂರಿನ ಜನರೇ ನಿಬ್ಬೆರಗಾಗಿದ್ದರು. ಇದು ಅವರ ಸಂಘಟನಾ ಚತುರತೆ, ಸಾಮಾಜಿಕ, ಧಾರ್ಮಿಕ ಸೇವಾ ಕೈಂಕರ್ಯಕ್ಕೆ ಸಾಕ್ಷಿಯಾಗಿದೆ. ಈಗ ಹು.ಧಾ. ಬಂಟರ ಸಂಘ ಇವರ ನೇತೃತ್ವದಲ್ಲಿ ಮತ್ತಷ್ಟು ಹೊಸ ಹುರುಪು, ಆಲೋಚನೆಗಳೊಂದಿಗೆ ಮುನ್ನಡೆಯುತ್ತಿದೆ.