ಮುಂಬಯಿ: ಆಷಾಢ ಶುಕ್ಲ ಏಕಾದಶಿಯ ಬಳಿಕ ಬರುವ ಹುಣ್ಣಿಮೆಯೇ ಪ್ರಸಿದ್ಧ ಗುರು ಪೂರ್ಣಿಮೆಯಾಗಿದೆ. ಗಣ ಪತಿ ದೇವರ ಮೂಲಕ ಮಹಾಭಾರತವನ್ನು ಬರೆದ ಮಹಾತಪಸ್ವಿ ವೇದವ್ಯಾಸ ಮಹರ್ಷಿಗಳು ಜನಿಸಿದ ಪುಣ್ಯದಿನ ಇದಾಗಿದೆ. ಭಾರತೀ ಯ ಸನಾತನ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನವು ಶ್ರೇಷ್ಠವಾದುದು. ಚಾತುರ್ಮಾಸ್ಯದ ಆರಂಭದಲ್ಲಿಯೇ ಈ ಪೂರ್ಣಿಮೆಯು ಬರುವುದರಿಂದ ಲೋಕಧರ್ಮ ಮತ್ತು ಯತಿ ಧರ್ಮಕ್ಕೆ ಅನುಗುಣವಾಗಿ, ವೇದವ್ಯಾಸರ ಹೆಸರಿನಲ್ಲಿ ಗುರುಪೂಜೆ ಆಚರಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಇದರ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಜು. 27 ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದಲ್ಲಿ ಶ್ರೀ ಮುಕ್ತಾನಂದ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಮತ್ತು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಹಾಗೂ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಇದರ ಸಂಯುಕ್ತ ಆಶ್ರಯದಲ್ಲಿ ಜರಗಿದ 19 ನೇ ವರ್ಷದ ಗುರುಪೂರ್ಣಿಮೆ ಆಚರಣೆಯನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಗುರು ಎಂಬ ಶಬ್ಧವನ್ನು ವ್ಯಾಪಕವಾಗಿ ಹೇಳುವ ಅಗತ್ಯವಿಲ್ಲ. ಗು-ಎಂದರೆ ಕತ್ತಲೆ. ರು-ಎಂದರೆ ಬೆಳಕು. ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕು ನೀಡುವವನೇ ಗುರು. ಗುರು ಎಂಬುವುದು ಒಂದು ವ್ಯಕ್ತಿಯಲ್ಲ. ಅದೊಂದು ಶಕ್ತಿ. ಸುಸಂಸ್ಕೃತ ಬದುಕು ಆಗಬೇಕಾದರೆ ಗುರುವಿನ ಅನುಗ್ರಹದ ಅಗತ್ಯವಿದೆ. ನಮ್ಮ ಬದುಕಿನ ಪಯಣದ ದಾರಿಯ ಬೆಳಕಿಗೆ ಗುರುವಿನ ಆಶೀರ್ವಾದ ಬೇಕೇ ಬೇಕು. ಭಾರತ ದೇಶದ ಬಹುದೊಡ್ಡ ಬೆಳಕು ಆಧ್ಯಾತ್ಮವಾಗಿದೆ. ಕಷ್ಟ ಎಂಬುವುದು ಬದುಕಿನಲ್ಲಿ ಮುಂದೆ ಸಾಗಲು ಸೋಪಾನ. ಸತ್ಯದ ಸಾಕ್ಷಾತ್ಕಾರಕ್ಕೆ ಸಮಯಬೇಕು. ಬದುಕಿನಲ್ಲಿ ಸಂಸ್ಕಾರ ಬೆಳೆದಂತೆ ನಾವು ಬದಲಾಗುತ್ತೇವೆ. ಮನು ಷ್ಯನ ಮನಸ್ಸಿನ ದುಗುಡ, ಖನ್ನತೆಯನ್ನು ಇಂದಿನ ಆಧುನಿಕ ತಂತ್ರಜ್ಞಾನದಿಂದ ಇದುವರೆಗೂ ಕಂಡುಹಿಡಿಯಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಶ್ರೀಗಳು, ಹೃದಯ ತುಂಬಿದ ನಗು ನಮ್ಮದಾಗಬೇಕು. ಸಮಾಜದಲ್ಲಿ ಪ್ರೀತಿ, ವಿಶ್ವಾಸದ ಬದುಕು ನಮ್ಮದಾಗಬೇಕು. ಉತ್ತಮ ಸಮಾಜ ಕಟ್ಟುವ ಕಾರ್ಯ ನಡೆಸೋಣ. ಕತ್ತಲೆಯಿಂದ ಬೆಳಕಿನೆಡೆಗೆ ನಡೆಯೋಣ ಎಂದು ನುಡಿದು, ಭಕ್ತಾದಿಗಳಿಗೆ ಗುರುಪೂರ್ಣಿಮೆಯ ಶುಭಾಶಯ ಕೋರಿದರು.
ಹೂವಿನಿಂದ ಅಲಂಕರಿಸಲ್ಪಟ್ಟ ಸ್ವಾಮಿ ನಿತ್ಯಾನಂದರು, ಶಿರ್ಡಿ ಸಾಯಿಬಾಬಾ, ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಇದರ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಶೆಟ್ಟಿ, ಗುರುಪೂರ್ಣಿಮೆ ಉತ್ಸವದ ರೂವಾರಿ ಪಿ. ಧನಂಜಯ ಶೆಟ್ಟಿ ಅವರು ಮಹಾಪೂಜೆಯ ಆರತಿ ಬೆಳಗಿದರು.
ಶ್ರೀ ಗುರುದೇವ ಸೇವಾ ಬಳಗ ಮುಂಬಯಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಬಳಗದವರಿಂದ ಭಜನ ಕಾರ್ಯಕ್ರಮ ಮತ್ತು ಗಾಯಕ ಸುರೇಶ್ ಶೆಟ್ಟಿ ಬಳಗದವರಿಂದ ಭಕ್ತಿಗಾಯನ ನಡೆಯಿತು. ಶ್ರೀ ಗುರುದೇವಾನಂದ ಸ್ವಾಮೀಜಿ, ಮಾತೆ ಮಾತಾನಂದಮಯೀ ಅವರನ್ನು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿದರು. ಸ್ವಾಮೀಜಿ ಅವರು ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರಕ್ಕೆ ಚಿತ್ತೆ$çಸಿದಾಗ ಜ್ಞಾನಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರು ತುಳಸಿ ಹಾರ ಹಾಕಿ ಸ್ವಾಗತಿಸಿದರು.
ಬಳಿಕ ಮಂದಿರದ ಪೂಜೆಯಲ್ಲಿ ಸ್ವಾಮೀಜಿಯವರು ಪಾಲ್ಗೊಂಡರು. ಗುರುಪೂರ್ಣಿಮೆಯ ಕಾರ್ಯಕ್ರಮದಲ್ಲಿ ಬಂಟರ ಸಂಘದ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯ-ಸದಸ್ಯೆಯರು, ಭಕ್ತಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉದ್ಯಮಿ ವಾಮನ್ ಶೆಟ್ಟಿ ಅವರ ವತಿಯಿಂದ ಫಲಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು