ಶಿರ್ವ: ಸೋದೆ ಮಠದ ಶ್ರೀ ವಾದಿರಾಜ ಸಾಮೀಜಿಗಳು ಉಡುಪಿಯಲ್ಲಿ ಕೃಷ್ಣಮಠ ಮತ್ತು ಅಷ್ಟಮಠಗಳನ್ನು ವ್ಯವಸ್ಥಿತವಾಗಿ ರೂಪಿಸಿ, ಈಗಿನ ನಿರ್ವಹಣಾ ಶಾಸ್ತ್ರದ ಪರಿಣಿತರಿಗೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳು ಬದಲಾವಣೆಗೆ ತಕ್ಕಂತೆ ನಿಷ್ಠೆಯಿಂದ ಕೆಲಸಮಾಡಿ ಪರಿಶ್ರಮಪಟ್ಟು ಉದ್ಯಮಪತಿಗಳಾದಾಗ ರಾಮ ರಾಜ್ಯವಾಗಲು ಸಾಧ್ಯ. ತತ್ವಶಾಸ್ತ್ರವನ್ನು ಶಿಕ್ಷಣದೊಂದಿಗೆ ಬೋಧಿಸಿದಾಗ ಉತ್ತಮ ಆವಿಷ್ಕಾರಗಳು ಹೊರಬಂದು, ಸಂಸ್ಥೆಯ ಕನಸು ನನಸಾಗುವುದರೊಂದಿಗೆ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಹೊರಬರಲಿ ಎಂದು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಫೆ. 13 ರಂದು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನಲ್ಲಿ ಪ್ರಾರಂಭಗೊಂಡ ಎಂಬಿಎ ಸ್ನಾತಕೋತ್ತರ ಪದವಿ ತರಗತಿಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿ ನಿಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನ ನಿರ್ದೇಶಕ ಡಾ| ಗುರುರಾಜ್ ಹೆಚ್.ಕಿದಿಯೂರು ಮಾತನಾಡಿ ಭಾರತವನ್ನು ವಿಶ್ವದ ಅತೀ ದೊಡ್ಡ ಆರ್ಥಿಕತೆಯನ್ನಾಗಿ ಪರಿವರ್ತಿಸುವಲ್ಲಿ ಎಂಬಿಎ ಪದವೀಧರರ ಪಾತ್ರವನ್ನು ವಿವರಿಸಿ, ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದರ ಜತೆಗೆ ದಿನ ಪತ್ರಿಕೆಗಳಲ್ಲಿನ ವ್ಯಾಪಾರ, ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಅಂಕಣಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಅಲ್ಲದೆ ಕೈಗಾರಿಕೆಗಳಲ್ಲಿ ನಿರ್ವಹಣಾ ಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ತಲ್ಲೀನರಾಗಬೇಕೆಂದು ಸಲಹೆ ನೀಡಿದರು.
ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ರತ್ನಕುಮಾರ್ ವೇದಿಕೆಯಲ್ಲಿದ್ದರು. ಎಂಬಿಎ ವಿಭಾಗದ ಆಡಳಿತ ಅಧಿಕಾರಿ ವಿದ್ಯಾ ಭಟ್‌ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ|ಗಣೇಶ್ ಐತಾಳ್, ಡೀನ್, ವಿವಿಧ ವಿಭಾಗದ ಮುಖ್ಯಸ್ಥರು, ತರಬೇತಿ ಮತ್ತು ಉದ್ಯೋಗ ನಿಯೋಜನ ಅಧಿಕಾರಿ, ಸಂಸ್ಥೆಯ ಪ್ರಾಧ್ಯಾಪಕರು ಮತ್ತು ಸಿಬಂದಿ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಪ್ರಾಧ್ಯಾಪಕಿ ಅಕ್ಷತಾ ರಾವ್ ಕಾರ್ಯಕ್ರಮ ನಿರೂಪಿಸಿ, ಎಂಬಿಎ ವಿಭಾಗದ ನಿರ್ದೇಶಕ ಡಾ| ಸೂರಜ್ ಫ್ರಾನ್ಸಿಸ್ ನೊರೊನ್ಹಾ ವಂದಿಸಿದರು.