Advertisement

ಆತ್ಮನಿರ್ಭರ ಆಗುವುದೇ ಚೀನದ ಬೇರುಗಳ ತುಂಡರಿಸುವ ಮಾರ್ಗ!

02:14 AM Jun 19, 2020 | Hari Prasad |

ಭಾರತ ಚೀನ ಗಡಿಯಲ್ಲಿ ಕದನ ರೀತಿಯ ವಾತಾ­ವರಣ ನಿರ್ಮಾಣವಾಗಿರುವ ವೇಳೆಯಲ್ಲೇ, ಚೀನ ಉತ್ಪನ್ನಗಳ ಆಮದನ್ನು ನಿಲ್ಲಿಸಬೇಕು ಎಂಬ ಕೂಗು ಜೋರಾಗಿದೆ. ಪ್ಲಾಸ್ಟಿಕ್‌ ಆಟಿಕೆಗಳಿಂದ ಹಿಡಿದು, ಸ್ಮಾರ್ಟ್‌ ಫೋನ್‌ ವಲಯದವರೆಗೆ ಚೀನ ಭಾರತದಲ್ಲಿ ತನ್ನ ಬೇರುಗಳನ್ನು ಭದ್ರಪಡಿಸಿಕೊಳ್ಳುತ್ತಿರುವ ರೀತಿ ಬೆಚ್ಚಿಬೀಳಿಸುವಂತಿದೆ. ಚೀನದ ಹೂಡಿಕೆದಾರರೂ ದೇಶದ ಪ್ರಮುಖ ಯೂನಿ­ಕಾರ್ನ್ ಸ್ಟಾರ್ಟ್‌­­ಅಪ್‌ಗಳಲ್ಲಿ ಪ್ರಮುಖ ಪಾಲುದಾರರಾಗಿ ಬದಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಚೀನದ ಬೇರುಗಳನ್ನು ತುಂಡರಿಸುವ ಜತೆಗೆ, ಎಲ್ಲ ರಂಗಗಳಲ್ಲೂ ಪೈಪೋಟಿ ನೀಡುವಂಥ ಸಾಮರ್ಥ್ಯ ದೇಶಕ್ಕೆ ದಕ್ಕಬೇಕಿದೆ. ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಸಾಕಾರವಾದರೆ ಮಾತ್ರ ಡ್ರ್ಯಾಗನ್‌ ಅನ್ನು ಕಟ್ಟಿಹಾಕಲು ಸಾಧ್ಯ…

Advertisement

ಭಾರತದ ಯೂನಿಕಾರ್ನ್ ಗಳ ಚೀನ ಕಂಪೆನಿಗಳ ಪಾಲು
2015ರಿಂದ 2019ರ ನಡುವೆ ಭಾರತದ ಖಾಸಗಿ ಉದ್ಯಮಗಳಲ್ಲಿ ಚೀನದ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ಗಣನೀಯವಾಗಿದೆ. ಆಟೊ­ಮೊಬೈಲ್‌, ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್‌, ಪುಸ್ತಕ ಮುದ್ರಣ, ಸೇವಾ ವಲಯದಲ್ಲಿ ಚೀನಿ ಕಂಪೆನಿಗಳ ಹೂಡಿಕೆ ಅಧಿಕವಿದೆ.

ಗೇಟ್‌ವೇ ಹೌಸ್‌ ಸಂಶೋಧನಾ ವರದಿಯ ಪ್ರಕಾರ, 2020ರಲ್ಲಿ ಚೀನದ ಟೆಕ್‌ ಹೂಡಿಕೆದಾರರು ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ 4 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಮಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಚೀನದ ಹೂಡಿಕೆದಾರರು ಭಾರತದ 30 “ಯೂನಿಕಾರ್ನ್’ ಸ್ಟಾರ್ಟ್‌ಅಪ್‌­­ಗಳಲ್ಲಿ 18 ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಯಾವ ಸ್ಟಾರ್ಟ್‌ ಅಪ್‌ ಕಂಪೆನಿಯ ಮೌಲ್ಯ 1 ಶತಕೋಟಿ ಡಾಲರ್‌ಗೂ ಅಧಿಕವಿರುತ್ತದೋ, ಅದನ್ನು ಯೂನಿಕಾರ್ನ್ ಸ್ಟಾರ್ಟ್‌ ಅಪ್‌ ಎನ್ನಲಾಗುತ್ತದೆ.


ಚೀನ ಹೂಡಿಕೆಯಿರುವ ಭಾರತೀಯ ಯೂನಿಕಾರ್ನ್ ಗಳು: ಬಿಗ್‌ಬಾಸ್ಕೆಟ್‌, ದ್ಹೆಲಿವರಿ, ಫ್ಲಿಪ್‌ಕಾರ್ಟ್‌, ಮೇಕ್‌ ಮೈ ಟ್ರಿಪ್‌, ಓಲಾ, ಓಯೋ, ಪೇಟಿಎಂ ಮಾಲ್‌, ಪೇಟಿಎಂ.ಕಾಂ, ಪಾಲಿಸಿ ಬಜಾರ್‌, ಕ್ವಿಕರ್‌, ಸ್ನ್ಯಾಪ್‌ಡೀಲ್‌, ಸ್ವಿಗ್ಗಿ, ಉಡಾನ್‌, ಝೊಮ್ಯಾಟೋ ಸೇರಿದಂತೆ 18 ಯೂನಿಕಾರ್ನ್ ಕಂಪೆನಿಗಳಲ್ಲಿ ಚೀನದ ಕಂಪೆನಿಗಳ ಹೂಡಿಕೆಯಿದೆ. ಈ 18ರಲ್ಲಿ 5 ಕಂಪೆನಿಗಳಲ್ಲಿ ಆಲಿಬಾಬಾ ಗ್ರೂಪ್‌ ಹೂಡಿಕೆ ಮಾಡಿದ್ದರೆ, ನಾಲ್ಕರಲ್ಲಿ ಟೆನ್ಸೆಂಟ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ಎನ್ನುವ ಚೀನದ ಟೆಕ್‌ ಉದ್ಯಮ ಸಮೂಹದ ಹೂಡಿಕೆ ಇದೆ.

ಸಾಫ್ಟ್ವೇರ್‌ ಸಾಫ್ಟ್ ಪವರ್‌
ಭಾರತೀಯ ಗುಪ್ತಚರ ಇಲಾಖೆ, ಡೇಟಾ ಸುರಕ್ಷತೆಯ ಕಾರಣದಿಂದ ಚೀನದ 52 ಆ್ಯಪ್‌ಗಳನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಝೂಮ್‌, ಟಿಕ್‌ಟಾಕ್‌, ಯುಸಿಬ್ರೌಸರ್‌, ಕ್ಲೀನ್‌ ಮಾಸ್ಟರ್‌ ಸೇರಿದಂತೆ ವಿವಿಧ ಆ್ಯಪ್ಗಳು ಈ ಪಟ್ಟಿಯಲ್ಲಿವೆ. ಗಮನಿಸಬೇಕಾದ ಸಂಗತಿಯೆಂದರೆ, ಇದರಲ್ಲಿ ಬಹುತೇಕ ಆ್ಯಪ್‌ಗಳು ಯಾವುದೇ ಕಾರಣಕ್ಕೂ ಚೀನದ ವಿರುದ್ಧದ ಕಂಟೆಂಟ್‌ಗಳು ಹೊರಬರದಂತೆ ನೋಡಿ­ಕೊಳ್ಳುತ್ತವೆ.

ಉದಾಹರಣೆಗೆ, ಟಿಕ್‌ಟಾಕ್‌ ಚೀನ ವಿರುದ್ಧದ ಕಂಟೆಂಟ್‌ಗಳನ್ನೆಲ್ಲ ಸೆನ್ಸಾರ್‌ ಮಾಡಿಬಿಡುತ್ತದೆ. ಸ್ಮಾರ್ಟ್‌ಫೋನ್‌ ಆ್ಯಪ್ಗಳು ಈಗ ನಗರಗಳಿಗೆ ಸೀಮಿತವಾಗಿಲ್ಲ. ಭಾರತದ ಪಟ್ಟಣ, ಗ್ರಾಮೀಣ ಪ್ರದೇಶಗಳಿಗೂ ತಲುಪಿವೆ. 2024ರ ವೇಳೆಗೆ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ 100 ಕೋಟಿಗೂ ಅಧಿಕವಾಗಬಹುದು ಎನ್ನುವ ಅಂದಾಜಿದೆ. ಈ ಕಾರಣಕ್ಕಾಗಿಯೇ ಚೀನದ ಸಾಫ್ಟ್ವೇರ್‌ ಸಾಫ್ಟ್ ಪವರ್‌ ಅನ್ನು ದುರ್ಬಲವಾಗಿಸುವ ಪ್ರಯತ್ನಕ್ಕೆ ಈಗಲೇ ವೇಗ ನೀಡಬೇಕಿದೆ. ಭಾರತದಲ್ಲಿ ಚೀನದ ಸ್ಮಾರ್ಟ್‌ ಫೋನ್‌ ಕಂಪೆನಿಗಳ ಪಾಲು 2019ರ ಅಂತ್ಯದ ವೇಳೆ 66 ಪ್ರತಿಶತ ತಲುಪಿದೆ.

Advertisement


ಉತ್ಪಾದನಾ ಹಬ್‌ ಆಗುವುದು ಮುಖ್ಯ

ಕಳೆದ ಕೆಲವು ವರ್ಷಗಳಿಂದ ಭಾರತ ಹಾಗೂ ಚೀನ ನಡುವಿನ ವ್ಯಾಪಾರದಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬಂದಿದೆಯಾದರೂ, ತುಲನೆ ಮಾಡಿ ನೋಡಿದರೆ, ಚೀನದಿಂದ ನಮ್ಮ ಆಮದು ಪ್ರಮಾಣ ಅಧಿಕವಿದೆಯೇ ಹೊರತು, ರಫ್ತಲ್ಲ. ಚೀನ ಪ್ರಪಂಚದ ಬಹುದೊಡ್ಡ ಉತ್ಪಾದನಾ ಕೇಂದ್ರವಾಗಿರುವುದರಿಂದ, ಅದರ ಆಮದು ಪ್ರಮಾಣ ಕಡಿಮೆ ಇದೆ ಎಂದು ವಿಶ್ಲೇಷಿಸುತ್ತಾರೆ ವ್ಯಾಪಾರ ಪರಿಣತರು. ಇದೇ ವೇಳೆಯಲ್ಲೇ ಚೀನದಿಂದ ಅನೇಕ ಕಂಪೆನಿಗಳೀಗ ಕಾಲ್ಕೀಳಲಾರಂಭಿಸಿದ್ದು, ಅವು ಭಾರತದತ್ತ ಮುಖ ಮಾಡಿವೆ.

ಆದರೆ, ಚೀನಕ್ಕೆ ಸರಿಸಾಟಿಯಾಗಿ ನಿಲ್ಲುವಂಥ ಬೃಹತ್‌ ಉತ್ಪಾದನಾ ಹಬ್‌ ಆಗಿ ಬೆಳೆಯಲು ಭಾರತಕ್ಕೆ ವರ್ಷಗಳೇ ಹಿಡಿಯಲಿವೆಯಾದರೂ, ಸದ್ಯಕ್ಕಂತೂ ಭಾರತ ಸರಿಯಾದ ದಿಕ್ಕಿನಲ್ಲೇ ಹೆಜ್ಜೆಯಿಡುತ್ತಿದೆ. ಚೀನ ಹೂಡಿಕೆದಾರರ ಎಗ್ಗಿಲ್ಲದ ಓಟ ತಡೆಯಲು FDI ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ, ಇದರ ಹೊರತಾಗಿಯೂ ಚೀನದ ಹೂಡಿಕೆ ಅಪಾರವಾಗಿಯೇ ಇದೆ. ಉದಾಹರಣೆಗೆ, ಪರಸ್ಪರ ಸೈನ್ಯಗಳ ನಡುವೆ ಯುದ್ಧ ಸದೃಶ ವಾತಾವರಣವಿದ್ದಾಗಲೇ, ಚೀನದ ಆಟೊಮೊಬೈಲ್‌ ಉತ್ಪಾದನಾ ಸಂಸ್ಥೆಯೊಂದು ಮಹಾರಾಷ್ಟ್ರ ಸರ್ಕಾರದೊಂದಿಗೆ 7,600 ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ.

ಭಾರತದ ನವ FDI ಪಾಲಿಸಿ ಚೀನಕ್ಕೆ ಕಸಿವಿಸಿ
ಚೀನದ ಕಂಪೆನಿಗಳು ಭಾರತದಲ್ಲಿ ಬಿಡುಬೀಸಾಗಿ ಹೂಡಿಕೆ ಮಾಡುತ್ತಲೇ ಬಂದಿದ್ದವು. ಆದರೆ, ಕೋವಿಡ್ ನಂತರದಿಂದ ದೇಶದಲ್ಲಿ ವಿವಿಧ ಕಂಪೆನಿಗಳು ಆರ್ಥಿಕವಾಗಿ ದುರ್ಬಲವಾಗಿವೆ. ಇದರ ವಾಸನೆ ತಾಗಿದ್ದೇ ಚೀನದ ಕಂಪೆನಿಗಳು ಭಾರತೀಯ ಕಂಪೆನಿಗಳಲ್ಲಿನ ಹೂಡಿಕೆಗಳನ್ನು ಹೆಚ್ಚು ಮಾಡಲು ಮುಂದಾಗಿಬಿಟ್ಟವು.

ಪೀಪಲ್ಸ್‌ ಬ್ಯಾಂಕ್‌ ಆಫ್ ಚೀನ, ಎಚ್‌ಡಿಎಫ್ಸಿಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಂಡಿದ್ದೇ, ಚೀನದ ಈ ತಂತ್ರದ ಭಾಗ. ಇದರ ದೂರಗಾಮಿ ಅಪಾಯಗಳ ಬಗ್ಗೆ ಎಚ್ಚೆತ್ತುಕೊಂಡ ಕೇಂದ್ರ ಸರಕಾರ FDI ನಿಯಮಗಳಲ್ಲಿ ಹಠಾತ್ತನೆ ಬದಲಾವಣೆ ಮಾಡಿಬಿಟ್ಟಿದೆ. ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ರಾಷ್ಟ್ರಗಳು, ಇನ್ಮುಂದೆ ಭಾರತದಲ್ಲಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರದ ಅನುಮತಿ ಪಡೆಯಲೇಬೇಕು ಎನ್ನುವುದೇ ಈ ಹೊಸ ನಿಯಮ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸವಾಲೊಡ್ಡುವುದು
“ಚೀನದಿಂದ ಅನೇಕ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಸರಕು- ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಈ ವಿಷಯದಲ್ಲಿ ಭಾರತ ಚೀನಕ್ಕೆ ಸ್ಪರ್ಧೆಯೊಡ್ಡ­­­ಬೇಕು. ಆದರೆ, ಹೀಗಾಗಲು ಭಾರತದ ಉತ್ಪಾದನಾ ವಲಯ ಸದೃಢಗೊಳ್ಳುವುದು ಮುಖ್ಯ” ಎನ್ನುತ್ತಾರೆ ಎಕಾನಮಿ ಸರ್ಕಲ್‌ ಸಂಶೋಧನಾಂಗದ ವಿತ್ತ ತಜ್ಞ ಸೌಮಿಕ್‌ ಮುಖರ್ಜಿ.

Advertisement

Udayavani is now on Telegram. Click here to join our channel and stay updated with the latest news.

Next