Advertisement

ನಾಡ ದೊರೆ ಸ್ವಾಗತಕ್ಕೆ ಚಂಡರಕಿ ಸಿಂಗಾರ

09:10 AM Jun 22, 2019 | Sriram |

ಯಾದಗಿರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು (ಜೂ.21) ಗುರುಮಿಠಕಲ್ ತಾಲೂಕಿನ ಚಂಡರಕಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಯಾದಗಿರಿ ಹಾಗೂ ಗುರುಮಿಠಕಲ್ನಲ್ಲಿ ಅದ್ಧೂರಿ ಸ್ವಾಗತ ಕೋರುವ ಕಮಾನುಗಳು ರಾರಾಜಿಸುತ್ತಿವೆ. ಚಂಡರಕಿ ಗ್ರಾಮವಂತೂ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

Advertisement

ರೈಲಿನ ಮೂಲಕ ಯಾದಗಿರಿಗೆ ಆಗಮಿ ಸುವ ಸಿಎಂ, ಬಳಿಕ ರಸ್ತೆ ಮೂಲಕ ಗುರು ಮಿಠಕಲ್ ತಾಲೂಕಿಗೆ ಆಗಮಿಸಲಿದ್ದಾರೆ. ಮುಖ್ಯರಸ್ತೆಯಲ್ಲಿ ಭವ್ಯ ಸ್ವಾಗತ ಕಮಾನು, ಬ್ಯಾನರ್‌ಗಳಿಂದ ನಗರ ಸಜ್ಜುಗೊಂಡಿದ್ದರೆ, ಇತ್ತ ಗುರುಮಿಠಕಲ್ನಲ್ಲಿಯೂ ಸ್ವಾಗತಿಸಲು ನಾಯಕರು, ಕಾರ್ಯಕರ್ತರು ಬ್ಯಾನರ್‌ಗಳನ್ನು ಹಾಕಿದ್ದಾರೆ.

ಚಂಡರಕಿ ಗ್ರಾಮದಲ್ಲಿ ಈಗಾಗಲೇ ವ್ಯವಸ್ಥಿತ ರಸ್ತೆ ಸೇರಿ ಸಮರ್ಪಕ ಸೌಕರ್ಯ ಗಳನ್ನು ಕಲ್ಪಿಸಲಾಗಿದ್ದು, ಪ್ರಮುಖವಾಗಿ ಮುಖ್ಯಮಂತ್ರಿಗಳು ಜನತಾ ದರ್ಶನಕ್ಕೆ ಒತ್ತು ನೀಡಲಿರುವ ಹಿನ್ನೆಲೆಯಲ್ಲಿ ಸಾರ್ವ ಜನಿಕರು ಅವಹಾಲು ಸಲ್ಲಿಸಲು ಬೇಕಿರುವ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಂದು ವಾರದಿಂದ ಜಿಲ್ಲಾಮಟ್ಟದ ಅಧಿಕಾರಿಗಳು ಗ್ರಾಮದಲ್ಲಿಯೇ ಬೀಡು ಬಿಟ್ಟು ಸಿದ್ಧತೆ ನೋಡಿಕೊಂಡಿದ್ದಾರೆ. ಇನ್ನು ತಮ್ಮ ಕ್ಷೇತ್ರದಿಂದಲೇ ಕುಮಾರಸ್ವಾಮಿ ಕಾರ್ಯಕ್ರಮ ಆರಂಭಿಸಿರುವುದು ಸ್ಥಳೀಯ ಶಾಸಕ ನಾಗನಗೌಡ ಕಂದಕೂರ ಅವರು ಸ್ವತಃ ಮುಂದೆ ನಿಂತು ಕಾರ್ಯ ಕ್ರಮದ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಶಾಲೆಗೆ ಬಣ್ಣದ ಲೇಪನ: ಮುಖ್ಯಮಂತ್ರಿ ವಾಸ್ತವ್ಯ ಹೂಡುವ ಸರ್ಕಾರಿ ಶಾಲೆಗೆ ಬಣ್ಣ ಬಳಿದುವ್ಯವ ಸ್ಥಿತವಾಗಿ ಸಿದ್ಧಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ಸ್ನಾನಗೃಹ, ಶೌಚಾಲಯ ಮತ್ತು ಇತರೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಎಸಿ ಅಳವಡಿಸುವುದು, ಬೆಡ್‌ ಹಾಕುವುದು ಸೇರಿ ಯಾವುದೇ ದುಂದು ವೆಚ್ಚ ಮಾಡಬಾರದು ಎಂದು ಸಿಎಂ ಸೂಚಿಸಿರುವ ಹಿನ್ನೆಲೆ ನೆಲದ ಮೇಲೆ ಚಾಪೆ ಹಾಸಿ, ಫ್ಯಾನ್‌ ಗಾಳಿಯಲ್ಲೇ ಮಲಗಲಿದ್ದಾರೆ. ಆದರೆ, ಅಧಿಕಾರಿಗಳು ಸಿಎಂ ಅವರ ವಾಸ್ತವ್ಯಕ್ಕೆ ಯಾವುದೇ ಕುಂದು ಕೊರತೆ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ.

ಮುಖ್ಯಮಂತ್ರಿ ಕುಳಿತುಕೊಳ್ಳವ ವೇದಿಕೆಯ ಮುಂಭಾಗದಲ್ಲಿ ಬಲ ಬದಿಗೆ ಬ್ಯಾರಿಕೇಡ್‌ಗಳ ಮೂರು ಪ್ರತ್ಯೇಕ 200 ಆಸನಗಳ ವಿಭಾಗಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿಗೆ ಅಹ ವಾಲು ನೀಡಿದ ಬಳಿಕ ಕುಳಿತುಕೊಳ್ಳಲು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ 100 ಆಸಗಳನ್ನು ಕಾಯ್ದಿರಿಸಲಾಗಿದೆ. ಸೂಕ್ತ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ ತಿಳಿಸಿದ್ದಾರೆ.

Advertisement

ಸಿಎಂ ದಿನಚರಿ
ಜೂ.20ರ ಸಂಜೆ ಬೆಂಗಳೂರಿನಿಂದ ಕರ್ನಾಟಕ ಎಕ್ಸ್‌ಪ್ರೆಸ್‌ ಮೂಲಕ ಪ್ರಯಾಣ ಬೆಳೆಸುವ ಸಿಎಂ ಕುಮಾರಸ್ವಾಮಿ, ಜೂ.21 ಬೆಳಗ್ಗೆ 4 ಗಂಟೆಗೆ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 7:30ಕ್ಕೆ ಯಾದಗಿರಿಯಿಂದ ರಸ್ತೆ ಮೂಲಕ ಪ್ರಯಾಣ ಬೆಳೆಸಿ 10 ಗಂಟೆಗೆ ಚಂಡರಕಿಗೆ ಆಗಮಿಸುವರು. 10ರಿಂದ ಸಂಜೆ 6ರವರೆಗೆ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲು ಸ್ವೀಕರಿಸುವರು. ಸಂಜೆ 6:30ರಿಂದ ರೈತರೊಂದಿಗೆ ಸಂವಾದ ನಡೆಸಲಿದ್ದು, ಬಳಿಕ ಸ್ಥಳೀಯ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುವರು. ರಾತ್ರಿ 8:30ಕ್ಕೆ ಶಾಲಾ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಭೋಜನ ಸ್ವೀಕರಿಸುವರು. ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡುವರು.

-ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next