ವಿಜಯಪುರ: ನಗರದಲ್ಲಿ ಶ್ರೀಸಿದ್ದೇಶ್ವರ ಸಂಕ್ರಾಂತಿ ಜಾತ್ರಾ ಮಹೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂಬ ಬ್ಯಾನರ್ ಅಳವಡಿಸಲಾಗಿತ್ತು. ಈ ಬ್ಯಾನರ್ ತೆರವುಗೊಳಿಸಲು ದೇವಸ್ಥಾನದ ಸಿಬ್ಬಂದಿ ಮುಂದಾದಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಕಿತ್ತಾಟ ನಡೆದ ಘಟನೆ ನಡೆದಿದೆ.
ವಿಜಯಪುರದ ಸಿದ್ದೇಶ್ವರ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಈಗಾಗಲೇ ಸಿದ್ದೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ-ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಬಳಿಕ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಇದರ ಹೊರತಾಗಿ ಅನ್ಯಕೋಮಿನ ಲವ್, ಜಿಹಾದ್ ಹೆಸರಿನಲ್ಲಿ ತುಂಡು ತುಂಡಾಗಿ ಕತ್ತರಿಸುವ ಹಾಗೂ ದೇಶದ ಅಖಂಡತೆಗೆ ಧಕ್ಕೆ ತರುವ ಕೆಲಸ ಮಾಡುವ ಸಮುದಾಯದ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಬ್ಯಾನರ್ ಕಟ್ಟಿದ್ದರು.
ಜ.12 ರಿಂದ 16 ರ ವರೆಗೆ ವರೆಗೆ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆ ಶ್ರೀಸಿದ್ಧೇಶ್ವರ ಸಂಸ್ಥೆಯ ಸಿಬ್ಬಂದಿ ಸಿದ್ದೇಶ್ವರ ದೇವಸ್ಥಾನದ ಎದುರು ಅಳವಡಿಸಿದ್ದ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಬೇಕು ಎಂಬ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದರು.
ಈ ಹಂತದಲ್ಲಿ ದೇವಸ್ಥಾನದ ಸಿಬ್ಬಂದಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಕಿತ್ತಾಟ ನಡೆಯಿತು.
ಬ್ಯಾನರ್ ಬೆರಗುಗೊಳಿಸುವ ಹಂತದಲ್ಲಿ ಸ್ಥಳಕ್ಕೆ ಆಗಮಿಸಿದ ಶ್ರೀರಾಮ ಸೇನೆಯ ಮುಖಂಡ ನೀಲಕಂಠ ಕಂದಗಲ್ಲ, ಸಿದ್ದೇಶ್ವರ ಇದೇ ವೇಳೆ ಐತಿಹಾಸಿಕ ಶ್ರೀಸಿದ್ದೇಶ್ವರ ಸಂಸ್ಥೆ ಅಖಂಡ ವಿಜಯಪುರ ಹಿಂದೂಗಳಿಗೆ ಮಾತ್ರ ಸೇರಿದ್ದು, ಸಿದ್ದೇಶ್ವರ ಸಂಕ್ರಮಣ ಜಾತ್ರೆಯಲ್ಲಿ ಮುಸ್ಲೀಮರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಆಕ್ರೋಶ ವ್ಯಕ್ತಪಡಿಸಿದರು.
ಪರಿಣಾಮ ಶ್ರೀಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ-ಹಿಂದೂ ಸಂಘಟನೆಗಳ ಪ್ರಮುಖರ ಮಧ್ಯೆ ಮಾತಿನ ಚಕಮಕಿ ನಡೆದು, ಕಿತ್ತಾಡಿಕೊಂಡರು.