Advertisement

Banned ಮೀನುಗಾರಿಕೆ ಈಗಲೂ ಸಕ್ರಿಯ

01:00 AM Oct 21, 2024 | Team Udayavani |

ಉಡುಪಿ: ಕರ್ನಾಟಕ ಕರಾವಳಿಯ ಸಮುದ್ರದ 12 ನಾಟಿಕಲ್‌ ಮೈಲಿನೊಳಗೆ ಬುಲ್‌ಟ್ರಾಲ್‌ ಹಾಗೂ ರಾತ್ರಿ ವೇಳೆ ಕೃತಕ ಲೈಟ್‌ ಅಳವಡಿಸಿಕೊಂಡು ಮೀನು ಹಿಡಿಯುವುದನ್ನು ನಿಷೇಧಿಸಿದ್ದರೂ ಇದು ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಇದನ್ನು ತಡೆಯುವುದೇ ಮೀನುಗಾರಿಕೆ ಇಲಾಖೆಗೆ ಸವಾಲಾಗಿದೆ.

Advertisement

ಕೇಂದ್ರ ಹಾಗೂ ರಾಜ್ಯ ಸರಕಾರ ಈಗಾಗಲೇ ಬುಲ್‌ಟ್ರಾಲ್‌ ಮೂಲಕ ಮೀನು ಹಿಡಿಯುವುದನ್ನು ಸಂಪೂರ್ಣ ವಾಗಿ ನಿಷೇಧಿಸಿದೆ. ಆದರೆ ಬುಲ್‌ಟ್ರಾಲ್‌ ಮೂಲಕ ನಿರಂತರವಾಗಿ ಮೀನು ಹಿಡಿಯುವುದು ನಡೆಯುತ್ತಲೇ ಇದೆ. ಈ ಬಗ್ಗೆ ಜಿಲ್ಲಾಡಳಿತದಿಂದ ಮೀನುಗಾರಿಕೆ ಇಲಾಖೆಗೆ ಎಚ್ಚರಿಕೆ ನೀಡಿದರೂ ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಬುಲ್‌ಟ್ರಾಲ್‌ ಮೀನುಗಾರಿಕೆಯಿಂದಾಗಿ ನಾಡದೋಣಿ ಮೀನುಗಾರರಿಗೆ ಸಮಸ್ಯೆಯಾಗುತ್ತಿದೆ.

ನಿಷೇಧಕ್ಕೆ ಕಾರಣ
ಬುಲ್‌ಟ್ರಾಲ್‌ ಮೀನುಗಾರಿಕೆಯು ನೀರಿನ ಅಡಿಭಾಗದಲ್ಲಿ ಬುಲ್‌ಟ್ರಾಲ್‌ ಕಟ್ಟಿ ಎಳೆಯುವುದರಿಂದ ಮೀನಿನ ಮರಿಗಳು ಹೆಚ್ಚೆಚ್ಚು ಇದರೊಳಗೆ ಸಿಲುಕಿ ಬೆಳೆಯುವ ಮೊದಲೇ ಸಾಯುತ್ತವೆ. ಮುಂಗಾರಿನ ಅವಧಿಯಲ್ಲಿ ಬಹುತೇಕ ಮೀನುಗಳು ಕಡಲ ತೀರದಲ್ಲಿ ಸಂತಾನೋತ್ಪತ್ತಿಗೆ ಬರು ವುದರಿಂದ ಆ ಅವಧಿಯಲ್ಲಿ ಬುಲ್‌ಟ್ರಾಲ್‌ ಮಾಡಿದರೆ ಮೀನಿನ ಸಂತಾನೋತ್ಪತ್ತಿಗೆ ಸಮಸ್ಯೆ ಯಾಗು ತ್ತದೆ. ಹೀಗಾಗಿ ಬುಲ್‌ಟ್ರಾಲ್‌ ಮೀನು ಗಾರಿಕೆಯನ್ನು ಸರಕಾರ ನಿಷೇಧಿಸಿದೆ ಮತ್ತು ನ್ಯಾಯಾಲಯ ಕೂಡ ಸರಕಾರದ ಕ್ರಮವನ್ನು ಎತ್ತಿ ಹಿಡಿದಿದೆ.

ನಾಡದೋಣಿ ಮೀನುಗಾರರಿಗೆ ಸಮಸ್ಯೆ ಯಾಕೆ?
ಜಿಲ್ಲೆಯಲ್ಲಿ ಸುಮಾರು 5 ಸಾವಿರ ನಾಡದೋಣಿಗಳಿದ್ದು, ಇವು ಸಮುದ್ರದ ತೀರಭಾಗದಲ್ಲಿ ಹೆಚ್ಚೆಚ್ಚು ಮೀನುಗಾರಿಕೆ ನಡೆಯುತ್ತವೆ. ಬಂಗುಡೆ, ಬೂತಾಯಿಯನ್ನೇ ಪ್ರಧಾನವಾಗಿ ಹಿಡಿಯಲಾಗುತ್ತದೆ. ಬೇರೆ ಕೆಲವು ಮೀನುಗಳು ಬರುತ್ತವೆ. ಬುಲ್‌ಟ್ರಾಲ್‌ ತೀರದ ಭಾಗದಲ್ಲಿ ಎಳೆಯುವುದರಿಂದ ನಾಡದೋಣಿ ಮೀನುಗಾರಿಕೆಗೆ ಮೀನಿನ ಕೊರತೆ ಎದುರಾಗುತ್ತದೆ.

ಮೀನಿನ ಬಲೆ ಹೇಗಿರಬೇಕು
ನಿರ್ದಿಷ್ಟ ಪ್ರಮಾಣದಷ್ಟು ಬೆಳೆಯು ವವರೆಗೂ ಮೀನಿನ ಮರಿಗಳನ್ನು ಹಿಡಿಯಲೇ ಬಾರದು ಎಂಬ ನಿಯಮವಿದೆ. ಅದಕ್ಕಾಗಿಯೇ 30-35 ಎಂಎಂಗಿಂತ ಕಡಿಮೆ ಬಲೆಯನ್ನು ಬಳಸುವಂತಿಲ್ಲ. ನಾಡದೋಣಿ, ಪರ್ಸಿನ್‌ ಸಹಿತ ಎಲ್ಲ ಮೀನುಗಾರರು ಈ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿರುವ ಬಲೆಗಳನ್ನೇ ಬಳಸುತ್ತಾರೆ. ಆದರೆ ಬುಲ್‌ಟ್ರಾಲ್‌ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿರುವುದರಿಂದ ಬುಲ್‌ಟ್ರಾಲ್‌ ನಿಷೇಧಿಸಲಾಗಿದೆ. 30-35 ಎಂಎಂಗಿಂತ ಕಡಿಮೆ ಬಲೆಯನ್ನು ಬಳಸಿದಲ್ಲಿ ದೂರು ಆಧರಿಸಿ ಇಲಾಖೆಯಿಂದಲೂ ಕ್ರಮ ವಹಿಸಲಾಗುತ್ತದೆ.

Advertisement

ಕೃತಕ ಲೈಟ್‌ ಬಳಕೆ
ಬೆಳದಿಂಗಳು ಹೊರತುಪಡಿಸಿ ಉಳಿದ ದಿನಗಳಲ್ಲಿ ರಾತ್ರಿವೇಳೆ ಬೋಟು ಗಳಲ್ಲಿ ಕೃತಕ ಲೈಟ್‌ ಬಳಸಿ ಮೀನು ಹಿಡಿಯ ಲಾಗುತ್ತದೆ. ಇದೊಂದು ರೀತಿಯಲ್ಲಿ ಪ್ರಕೃತಿಗೆ ವಿರುದ್ಧವಾದ ನೀತಿ. ಕೃತಕ ಲೈಟ್‌ಗೆ ಮೀನುಗಳು ಸಹಜವಾಗಿ ಒಟ್ಟಾಗಿ ಒಂದೆಡೆ ಸೇರುತ್ತವೆ. ಆಗ ಬಲೆ ಹಾಕಿ ಮೀನು ಹಿಡಿಯುವುದು. ಈ ಬಗ್ಗೆಯೂ ಮೀನುಗಾರರಿಂದಲೇ ದೂರು ಬಂದ ಹಿನ್ನೆಲೆಯಲ್ಲಿ ನಿಷೇಧ ಮಾಡಲಾಗಿದೆ. ಆದರೂ ಕೃತಕ ಲೈಟ್‌ ಬಳಕೆ ಮಾತ್ರ ನಡೆಯುತ್ತಲೇ ಇದೆ. ಇದನ್ನು ತಡೆಯಲು ಪರಿಣಾಮಕಾರಿ ಕ್ರಮ ಅಗತ್ಯ.

ಏಕರೂಪ ನೀತಿ ಬೇಕು
ಮೀನುಗಾರಿಕೆಗೆ ಸಂಬಂಧಿಸಿ ಕೇರಳ, ಗೋವಾ, ಮಹಾರಾಷ್ಟ್ರ ಸಹಿತವಾಗಿ ಎಲ್ಲ ರಾಜ್ಯಗಳಿಂದ ಮಾಹಿತಿ ಪಡೆದು ಕರ್ನಾಟಕ ಸರಕಾರ ಒಂದು ಏಕರೂಪ ನೀತಿ ಜಾರಿಗೆ ಕೇಂದ್ರಕ್ಕೆ ಒತ್ತಡ ಹೇರಬೇಕು ಹಾಗೂ ರಾಜ್ಯದಲ್ಲಿ ಈ ಸಂಬಂಧ ನಿಮಯ ಜಾರಿಯಾಗಬೇಕು. ಯಾವುದೇ ಒಂದು ಬಂದರಿನಲ್ಲಿ ಕಟ್ಟುನಿಟ್ಟಿನ ಕ್ರಮವಾದ ತತ್‌ಕ್ಷಣ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಇಡೀ ವ್ಯವಸ್ಥೆಯೇ ಏಕರೂಪವಾಗಿ ನಿಮಯ ಅನುಷ್ಠಾನ ಮಾಡಿದಲ್ಲಿ ಮಾತ್ರ ಕೆಲವು ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ಮೀನುಗಾರಿಕ ಮುಖಂಡರ ವಾದವಾಗಿದೆ.

ಕಠಿನ ಕ್ರಮ
ಬುಲ್‌ಟ್ರಾಲ್‌ ಹಾಗೂ ಕೃತಕ ಲೈಟ್‌ ಬಳಸಿ ಮೀನು ಹಿಡಿಯವುದನ್ನು ನಿಷೇಧಿಸಲಾಗಿದ್ದು, ಈ ರೀತಿಯ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ನಿಯಮಾನುಸಾರ ಕಠಿನ ಕ್ರಮ ತೆಗೆದುಕೊಳ್ಳಲಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಂದಲೂ ಸೂಚನೆ ಬಂದಿದೆ.
-ವಿವೇಕ್‌, ಜಂಟಿ ನಿರ್ದೇಶಕ ಮೀನುಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next