Advertisement

“ಉತ್ತಮ ಸಂಶೋಧಕನಿಗೆ ಉದಾಹರಣೆ ಬನ್ನಂಜೆ’

12:06 AM Dec 14, 2024 | Team Udayavani |

ಬೆಂಗಳೂರು: ಬನ್ನಂಜೆ ಗೋವಿಂದಾಚಾರ್ಯರು ಯಾವುದೇ ಕೃತಿಯನ್ನು ಅನುವಾದ ಮಾಡಿದರೂ ಅವರಲ್ಲೊಬ್ಬ ಸಂಶೋಧಕ ಜಾಗೃತವಾಗಿರುತ್ತಿದ್ದ ಎಂದು ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

Advertisement

ಶುಕ್ರವಾರ ನಗರದ ಗಾಯನ ಸಮಾಜದಲ್ಲಿ ನಡೆದ “ಆಚಾರ್ಯರ 4ನೇ ಪುಣ್ಯಾರಾಧನೆ ಹಾಗೂ 2024ನೇ ಸಾಲಿನ ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರ ಪ್ರದಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಚಾರ್ಯರು ಕೇವಲ ಶಬ್ದಾನುವಾದ ಮಾಡದೇ ಭಾವಾನುವಾದ ಮಾಡುತ್ತಿದ್ದರು. ಇದರಿಂದ ಮೂಲ ಸಾಹಿತ್ಯದಲ್ಲಿ ಇರುತ್ತಿದ್ದ ಭಾಷೆಯ ಘಮ ಅನುವಾದ ಸಾಹಿತ್ಯದಲ್ಲಿಯೂ ತೋರುತ್ತಿತ್ತು. ಇದು ಅವರ ಕೃತಿಗಳು ವೈಶಿಷ್ಟ್ಯ ಎಂದರು.

ವೇದಾಂತಿ ವಿಜಯಸಿಂಹ ಆಚಾರ್ಯ ಮಾತನಾಡಿ, ಭಾವುಕತೆ ಹಾಗೂ ವೈಜ್ಞಾನಿಕತೆಯನ್ನು ಸಮತೋಲನದಲ್ಲಿ ತೆಗೆದುಕೊಂಡು ಹೋಗುವ ಶಕ್ತಿ ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಇತ್ತು. ಜತೆಗೆ ಅವರು ಮತ ಹಾಗೂ ಮತೀಯದ ಬಗ್ಗೆ ಸ್ಪಷ್ಟ ಪರಿಕಲ್ಪನೆಯನ್ನು ಇವರ ಕೃತಿಯಲ್ಲಿ ಕಾಣಬಹುದು ಎಂದರು.

ಪ್ರಶಸ್ತಿ ಸ್ವೀಕರಿಸಿ ಮ್ಯಾನಿಟೋಬಾ ವಿಶ್ವವಿದ್ಯಾನಿಲಯದ ಅಧ್ಯಾಪಕ ಬಿ.ಎಂ.ರಮೇಶ್‌ ಮಾತನಾಡಿ, ಯಾವುದೇ ಒಂದು ಮೂಲಕೃತಿಯನ್ನು ಸಂಪೂರ್ಣ ಅಧ್ಯಯನ ಮಾಡಬೇಕು ಎಂದಿದ್ದರೆ ಅನುವಾದಕ್ಕಿಂತ ಸೂಕ್ತವಾದ ಮಾರ್ಗ ಬೇರೊಂದಿಲ್ಲ. ಇದೇ ಉದ್ದೇಶದಿಂದ ಸಂಸ್ಕೃತ ಭಾಷೆಯಲ್ಲಿದ್ದ ಮೂಲ ಮಹಾಭಾರತ ಗ್ರಂಥವನ್ನು ಕನ್ನಡಕ್ಕೆ ಅನುವಾದ ಮಾಡಲು ಆರಂಭಿಸಿದೆ.

ಮಾತೃಭಾಷೆಯಲ್ಲಿ ವಿಷಯ ವರ್ಣನೆ ಸಾಧ್ಯವಾದಷ್ಟು ಇತರ ಭಾಷೆಯಲ್ಲಿ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ಜೀಯರ್‌ ಸ್ವಾಮಿಗಳು ಮಾತ ನಾ ಡಿ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಚಾರ್ಯ ಮೂವರನ್ನು ಅಧ್ಯಯನ ಮಾಡಿದ ಕೀರ್ತಿ ಗೋವಿಂದಾಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು. ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್‌, ಬನ್ನಂಜೆ ಗೋವಿಂದಾಚಾರ್ಯ ಅವರ ಮಗಳು ವೀಣಾ ಬನ್ನಂಜೆ ಉಪಸ್ಥಿತರಿದ್ದರು.

Advertisement

ಬಿ.ಎಂ. ರಮೇಶ್‌ ಅವರಿಗೆ ಬನ್ನಂಜೆ ಗೋವಿಂದಾಚಾರ್ಯ ಪ್ರಶಸ್ತಿ ಪ್ರದಾನ
ಸಂಸ್ಕೃತದಿಂದ ಕನ್ನಡಕ್ಕೆ ಮಹಾಭಾರತ ಸೇರಿದಂತೆ ಹಲವು ಕೃತಿಗಳನ್ನು ಅನುವಾದಿಸಿದ ಹಾಗೂ ಕೆನಡಾದ ಮ್ಯಾನಿಟೋಬಾ ವಿ.ವಿ.ಯ ಪ್ರಾಧ್ಯಾಪಕ ಬಿ.ಎಂ. ರಮೇಶ್‌ ಅವರಿಗೆ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 50 ಸಾವಿರ ರೂ. ನಗದು, ಪ್ರಶಸ್ತಿ ಫ‌ಲಕವನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next