Advertisement

ಹೈನುಗಾರರ ಸ್ವಾವಲಂಬನೆಗೆ ದಾರಿದೀಪವಾದ ಸಂಸ್ಥೆ

10:20 AM Feb 15, 2020 | sudhir |

ಗ್ರಾಮೀಣ ಜನರಿಗೆ ಬೇಸಾಯದ ಜತೆಗೆ ಉಪ ಕಸುಬು ಕಲ್ಪಿಸಿ, ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡದ್ದು ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ. ಜಿಲ್ಲೆಯ ಕ್ರಿಯಾಶೀಲ ಸಂಘವಾಗಿ ಇದರ ಸಾಧನೆಯೂ ದೊಡ್ಡದಿದೆ.

Advertisement

ಕೋಟ: ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ 1976 ಮಾ.22ರಂದು ಕೆನರಾ ಮಿಲ್ಕ್ ಯೂನಿಯನ್‌(ಕೆಮುಲ್‌) ಅಧೀನದಲ್ಲಿ ಸ್ಥಾಪನೆಯಾಗಿತ್ತು. ಆರಂಭದಲ್ಲಿ ಇಲ್ಲಿನ ಪರಮಹಂಸ ಹಿ.ಪ್ರಾ. ಶಾಲೆಯ ಕೋಣೆಯೊಂದರಲ್ಲಿ ಸಂಘ ಕಾರ್ಯಚಟುವಟಿಕೆ ನಡೆಸುತ್ತಿತ್ತು. ಅನಂತರ 1997ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಇದು ಜಿಲ್ಲೆಯ ಹಳೆಯ ಡೈರಿಗಳಲ್ಲಿ ಒಂದಾಗಿದ್ದು ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧೀನದಲ್ಲಿ ಈಗ ಕಾರ್ಯ ನಿರ್ವಹಿಸುತ್ತಿದೆ.

ಉಪಕಸುಬಿನ ಕನಸು
ಗ್ರಾಮಾಂತರ ಭಾಗದ ಜನರಿಗೆ ಕೃಷಿಯ ಜತೆಗೆ ಉಪಕಸಬು ಕಲ್ಪಿಸಬೇಕು ಎನ್ನುವ ಕನಸಿನೊಂದಿಗೆ ಈ ಸಂಘ ಉದಯವಾಗಿತ್ತು. ಕೆನರಾ ಮಿಲ್ಕ್ಯೂನಿಯನ್‌ನ ನಿರ್ದೇಶಕ ರಾಗಿದ್ದ ಭೋಜ ಹೆಗ್ಡೆಯವರು ಈ ಸಂಘದ ಸ್ಥಾಪಕಾಧ್ಯಕ್ಷರು. ಶಿಕ್ಷಣ ತಜ್ಞ ದಿ| ಬನ್ನಾಡಿ ಸುಬ್ಬಣ್ಣ ಹೆಗ್ಡೆಯವರ ಮಾರ್ಗದರ್ಶನ ಆಗ ಪ್ರಮುಖವಾಗಿತ್ತು. ಕೇವಲ 60-70 ಸದಸ್ಯರು, 50 ಲೀ.ಹಾಲು ಆರಂಭದ ದಿನಗಳಲ್ಲಿ ಸಂಗ್ರಹವಾಗುತಿತ್ತು. ಐದಾರು ಕಿ.ಮೀ. ದೂರದ ಚಿತ್ರಪಾಡಿ, ಉಪ್ಲಾಡಿ, ಕಾವಡಿ ಮೊದಲಾದ ಕಡೆಗಳಿಂದ ಜನರು ಹಾಲು ತರುತ್ತಿದ್ದರು. ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಶಿವಮರಕಾಲ ಸುಮಾರು 32ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸಂಘವನ್ನು ಮುನ್ನಡೆಸಿದ್ದರು.

ಕೃತಕ ಗರ್ಭಧಾರಣೆ ಸೌಲಭ್ಯ
ಆ ಕಾಲದಲ್ಲಿ ರಾಸುಗಳಿಗೆ ಕೃತಕ ಗರ್ಭಧಾರಣೆ ಕೇವಲ ಪಶು ಆಸ್ಪತ್ರೆಯ ಮೂಲಕ ಮಾಡಲಾಗುತ್ತಿತ್ತು. ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಈ ಬಗ್ಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ. ಹೀಗಾಗಿ ಊರಿನ ರಾಸುಗಳಿಗೂ ಕೃತಕ ಗರ್ಭಧಾರಣೆ ಮಾಡುತ್ತಿದ್ದರು.

ಹೈಬ್ರಿಡ್‌ ತಳಿಯ ಕರುಗಳನ್ನು ಪಡೆದು ಅದರಿಂದ ಹೆಚ್ಚು ಹಾಲು ಉತ್ಪಾದನೆ ಮಾಡುವ ಸಲುವಾಗಿ ಹಾಲು ಉತ್ಪಾದಕರ ಸಂಘಗಳ ಸಿಬಂದಿಗೆ ಕೆನರಾ ಮಿಲ್ಕ್ಯೂನಿಯನ್‌ ವತಿಯಿಂದ ತರಬೇತಿ ನೀಡಲಾಗುತಿತ್ತು. ಆಗ ಬನ್ನಾಡಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾಗಿದ್ದ ಶಿವ ಮರಕಾಲ ಈ ಭಾಗದಲ್ಲಿ ಪ್ರಥಮವಾಗಿ ಈ ತರಬೇತಿಯನ್ನು ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಿದ್ದರು.

Advertisement

ಪ್ರಸ್ತುತ ಸ್ಥಿತಿಗತಿ
ಪ್ರಸ್ತುತ ಸಂಘದಲ್ಲಿ 218 ಮಂದಿ ಸದಸ್ಯರಿದ್ದು ಪ್ರತಿದಿನ ಸುಮಾರು 725ಲೀ. ಮಿಕ್ಕಿ ಹಾಲು ಸಂಗ್ರಹವಾಗುತ್ತಿದೆ. ವಸಂತ್‌ ಶೆಟ್ಟಿ ಪ್ರಸ್ತುತ ಅಧ್ಯಕ್ಷರಾಗಿದ್ದು ಸುಜಾತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯರಾದ ಸರಸ್ವತಿ, ಚಂದ್ರ ಪೂಜಾರಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ. ಊರಿನ ನೂರಾರು ಮಂದಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಆರ್ಥಿಕವಾಗಿ ಲಾಭವನ್ನು ಪಡೆದಿದ್ದಾರೆ.

ಹಿರಿಯರು ಸಾಕಷ್ಟು ಪರಿಶ್ರಮಪಟ್ಟು ಈ ಸಂಸ್ಥೆಯನ್ನು ಕಟ್ಟಿಬೆಳೆಸಿದ್ದಾರೆ. ಇದೀಗ ಹಾಲಿನ ಸಂಗ್ರಹ ಮೊದಲಿಗಿಂತ ಹೆಚ್ಚಿದೆ. ಸಾಮಾಜಿಕ, ಚಟುವಟಿಕೆಗಳಲ್ಲೂ ತೊಡಗಿಸಿ ಕೊಂಡಿದ್ದೇವೆ. ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು. ಆ ಮೂಲಕ ಜನರನ್ನು ಇನ್ನಷ್ಟು ಸ್ವಾವಲಂಬಿಗಳನ್ನಾಗಿಸಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.

– ವಸಂತ್‌ ಶೆಟ್ಟಿ, ಅಧ್ಯಕ್ಷರು

-  ರಾಜೇಶ್‌ ಗಾಣಿಗ ಅಚಾÉಡಿ

Advertisement

Udayavani is now on Telegram. Click here to join our channel and stay updated with the latest news.

Next