ಹೊಸದಿಲ್ಲಿ : ಸಂಸತ್ತಿನಿಂದ ಅನುಮೋದಿಸಲ್ಪಟ್ಟಿರುವ ಶಾಸನದಡಿ ಆಧಾರ್ ಬಯೋಮೆಟ್ರಿಕ್ ಐಡಿಯನ್ನು ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗಳೊಂದಿಗೆ ಕಡ್ಡಾಯವಾಗಿ ಜೋಡಿಸುವುದನ್ನು ಪುನರ್ ಸ್ಥಾಪಿಸಬಹುದಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇತ್ಲಿ ಹೇಳಿದ್ದಾರೆ. ಆದರೆ ಈ ಬಗ್ಗೆ ಸರಕಾರ ಹೊಸ ಕಾನೂನನ್ನು ತರುವುದೇ ಎಂಬುದನ್ನು ಅವರು ತಿಳಿಸಿಲ್ಲ.
ಸುಪ್ರೀಂ ಕೋರ್ಟ್ ಕಳೆದ ತಿಂಗಳಲ್ಲಿ ಆಧಾರ್‌ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಆದರೆ ಟೆಲಿಕಾಂ ನಂತಹ ಖಾಸಗಿ ಸಂಸ್ಥೆಗಳು ಮೊಬೈಲ್ ಫೋನ್ ಬಳಕೆದಾರರ ಗುರುತು ದೃಢೀಕರಣಕ್ಕೆ ಆಧಾರ್ ಬಳಸುವುದನ್ನು ನಿರ್ಬಂಧಿಸಿತ್ತು.
ಸುಪ್ರೀಂ ಕೋರ್ಟ್ ಆಧಾರ್ ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿರುವುದು ಅತ್ಯಂತ ಸಮಂಜಸವಾದ ತೀರ್ಪು. ಆ ಮೂಲಕ ಅದು ಸರಕಾರದ ಕಾನೂನು ಸಮ್ಮತ ಉದ್ದೇಶಗಳನ್ನು ಒಪ್ಪಿಕೊಂಡಂತಾಗಿದೆ ಎಂದು ಜೇತ್ಲಿ ಹೇಳಿದರು.
ಎಚ್ ಟಿ ಲೀಡರ್‌ಶಿಪ್ ಸಮಿಟ್‌ನಲ್ಲಿ ಮಾತನಾಡುತ್ತಿದ್ದ ಜೇತ್ಲಿ, “ಆಧಾರ್ ಒಂದು ಪೌರತ್ವದ ಗುರುತು ಪತ್ರ ಅಲ್ಲ; ಇದು ಸರಕಾರದ ಕೋಟ್ಯಂತರ ರೂ ಸಹಾಯಧನ ವಿವಿಧ ವರ್ಗಗಳ ಜನರನ್ನು ತಲುಪುವದಕ್ಕೆ ಇರುವ ಅಧಿಕೃತ ವ್ಯವಸ್ಥೆಯಾಗಿದೆ. ಆಧಾರ್ ಹಿಂದಿರುವ ಮೂಲ ತತ್ವ ಮತ್ತು ಉದ್ದೇಶ ಇದೇ ಆಗಿದೆ’ ಎಂದು ಹೇಳಿದರು.
ಆಧಾರ್ ಕಾರ್ಡ್ ನ ಎಲ್ಲ ಬಗೆಯ ಪ್ರಯೋಜನಗಳನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ತೀರ್ಪಿನ ಮುಖ್ಯಾಂಶವಾಗಿದೆ ಎಂದು ಜೇತ್ಲಿ ಹೇಳಿದರು.