ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣಪ್ರತಿಷ್ಠೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಏತನ್ಮಧ್ಯೆ ಹಲವು ರಾಜ್ಯಗಳು ಈಗಾಗಲೇ ಜನವರಿ 22ರಂದು ಸಾರ್ವತ್ರಿಕ ರಜೆ ಘೋಷಿಸಿದ್ದು, ಮದ್ಯ ಮಾರಾಟವನ್ನೂ ನಿಷೇಧಿಸಿದೆ.
ಇದನ್ನೂ ಓದಿ:Ram Pran Pratishtha; ಜನವರಿ 22ರಂದು ರಜೆ ಘೋಷಣೆ ಮಾಡಿ: ಸರ್ಕಾರಕ್ಕೆ ಈಶ್ವರಪ್ಪ ಒತ್ತಾಯ
ಉತ್ತರಪ್ರದೇಶ ಸರ್ಕಾರ ಜನವರಿ 22ರಂದು ರಜೆ ಘೋಷಿಸಿದ್ದಲ್ಲದೇ, ಮಾಂಸ ಮಾರಾಟವನ್ನೂ ನಿಷೇಧಿಸಿ ಆದೇಶ ಹೊರಡಿಸಿದೆ. ಜ.22ರಂದು ಕೇಂದ್ರ ಸರ್ಕಾರದ ನೌಕರರಿಗೆ ಅರ್ಧ ದಿನ ರಜೆ ಸಾರಲಾಗಿದೆ. ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ವೀಕ್ಷಣೆಗಾಗಿ ಕೇಂದ್ರ ಸರ್ಕಾರದ ನೌಕರರಿಗೆ ಮಧ್ಯಾಹ್ನ 2.30ರವರೆಗೆ ರಜೆ ಘೋಷಿಸಲಾಗಿದೆ.
ಮತ್ತೊಂದೆಡೆ ಜನವರಿ 22ರಂದು ಬ್ಯಾಂಕ್ ಗಳಿಗೆ ರಜೆ ಇದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಹುಟ್ಟಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ ಜನವರಿ 18ರಂದು ಪ್ರಕಟನೆ ಹೊರಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.
ಹಣಕಾಸು ಸಚಿವಾಲಯದ ನೋಟಿಸ್ ನಲ್ಲೇನಿದೆ?
ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಪ್ರಕಟನೆಯಲ್ಲಿ, ಎಲ್ಲಾ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳು, ಜೀವವಿಮಾ ನಿಗಮ ಕಂಪನಿಗಳು, ಪಬ್ಲಿಕ್ ಸೆಕ್ಟರ್ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಜನವರಿ 22ರಂದು ಮಧ್ಯಾಹ್ನ 2.30ರವರೆಗೆ ರಜೆ ಘೋಷಿಸಲಾಗಿದೆ.
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠೆ ವೀಕ್ಷಿಸಲು ಅವಕಾಶ ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ಜನವರಿ 22ರಂದು ಬ್ಯಾಂಕ್ ಗಳಿಗೆ ಅರ್ಧ ದಿನ ರಜೆ ಘೋಷಿಸಿದಂತಾಗಿದೆ.