ಉಡುಪಿ: ಇತ್ತೀಚಿನ ವರ್ಷಗಳಲ್ಲಿ ಯಾವುದೇ ಬ್ಯಾಂಕ್ ಶಾಖೆಗಳಿಗೆ ಹೋದರೂ ಹಿರಿಯರ ಮುಖದರ್ಶನ ಆಗುತ್ತದೆ, ಜೊತೆಗೆ ಕನ್ನಡ ಬಾರದ ಹೊಸಬರ ಮುಖದರ್ಶನವೂ ಆಗುತ್ತದೆ.
ಕಾರಣವಿಷ್ಟೆ 1970-70ರ ದಶಕಗಳಲ್ಲಿ ಬ್ಯಾಂಕ್‌ಗಳು ವಿಸ್ತರಣೆಗೊಂಡ ಸಂದರ್ಭ ಸೇರ್ಪಡೆಗೊಂಡ ಸಿಬಂದಿ ಒಂದು ದಶಕದಿಂದ ನಿವೃತ್ತರಾಗುತ್ತಲೇ ಇದ್ದಾರೆ. ಇದೇ ಪ್ರಮಾಣದಲ್ಲಿ ಕನ್ನಡಿಗರು ಬ್ಯಾಂಕ್‌ಗಳಿಗೆ ಸೇರ್ಪಡೆಗೊಳ್ಳುತ್ತಿಲ್ಲ. ಇದರ ಅಡ್ಡಪರಿಣಾಮವೇ ಕನ್ನಡೇತರರು ಬ್ಯಾಂಕ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಬ್ಯಾಂಕ್‌ಗಳ ತೊಟ್ಟಿಲು ಎಂದು ಪ್ರಸಿದ್ಧವಾದ, ಬಹುತೇಕ ಎಲ್ಲ ಮನೆಗಳಲ್ಲಿಯೂ ಒಬ್ಬರಲ್ಲ ಒಬ್ಬರು ಬ್ಯಾಂಕ್ ಉದ್ಯೋಗಿಗಳಾಗಿದ್ದ ಕರಾವಳಿ ಜಿಲ್ಲೆಗಳಲ್ಲಿಯೂ ಇದರ ಲಕ್ಷಣ ಕಂಡುಬರುತ್ತಿದೆ.
ಒಂದು ಕಾಲದಲ್ಲಿ ಬಿಎಸ್‌ಆರ್‌ಬಿ ಬ್ಯಾಂಕ್‌ಗಳಿಗೆ ಆಯ್ಕೆ, ನೇಮಕಾತಿ ಮಾಡುತ್ತಿತ್ತು. ಈಗ ಬಿಎಸ್‌ಆರ್‌ಬಿ ಅಸ್ತಿತ್ವದಲ್ಲಿಲ್ಲ. ಇನ್‌ಸ್ಟಿಟ್ಯೂಟ್ ಫಾರ್ ಬ್ಯಾಂಕಿಂಗ್ ಪರ್ಸನೆಲ… ಸೆಲೆಕ್ಷನ್ (ಐಬಿಪಿಎಸ್) ಬ್ಯಾಂಕಿಂಗ್ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಐಬಿಪಿಎಸ್ ರಾಷ್ಟ್ರಮಟ್ಟದಲ್ಲಿ ಬ್ಯಾಂಕಿಂಗ್ ನೇಮಕಾತಿಗೆ ಪರೀಕ್ಷೆ ನಡೆಸುವ ಸ್ವಾಯತ್ತ ಸಂಸ್ಥೆ. ಖಾಸಗಿ, ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್‌ಗಳಿಗೆ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೂ ಪರೀಕ್ಷೆ ನಡೆಸುತ್ತಿದೆ ಐಬಿಪಿಎಸ್. ಐಬಿಪಿಎಸ್ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಎಲ್ಲ ವಿವರಗಳು ದೊರಕುತ್ತವೆ. ಈ ವೆಬ್ ತಾಣದಲ್ಲಿ ಅರ್ಜಿ ಸಲ್ಲಿಕೆ, ಪರೀಕ್ಷೆ ನಡೆಯುವ ದಿನಾಂಕ, ಅಣಕು ಪರೀಕ್ಷೆ, ಹಾಲ್ ಟಿಕೆಟ್, ಫಲಿತಾಂಶ ಇತ್ಯಾದಿ ಮಾಹಿತಿ ಸಿಗುತ್ತವೆ.
ಐಬಿಪಿಎಸ್ ಬಗ್ಗೆ ಯುವ ಜನರಿಗೆ ಅರಿವು ಮೂಡಿಸಬೇಕಾಗಿದೆ. ಬೇರೆ ಬೇರೆ ಕ್ಷೇತ್ರಗಳ ಕುರಿತು ಆಕರ್ಷಕ ಪ್ರಚಾರ ನಡೆಯುವಂತೆ ಬ್ಯಾಂಕಿಂಗ್ ಸೇರ್ಪಡೆ ಕುರಿತು ಆಕರ್ಷಕ ಪ್ರಚಾರ ನಡೆಯುತ್ತಿಲ್ಲ. ಬ್ಯಾಂಕಿಂಗ್ ಪರೀಕ್ಷೆ ಈಗ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಾಗಿ ರೂಪುಗೊಂಡಿರುವುದರಿಂದ ತಮ್ಮ ಬುದ್ಧಿಮತ್ತೆಗೆ ಸಾಣೆ ಹಿಡಿಯಬೇಕಾಗುತ್ತದೆ ಮತ್ತು ರಾಷ್ಟ್ರ ಮಟ್ಟದ ಪರೀಕ್ಷೆಯಾದ ಕಾರಣ ಕನ್ನಡಿಗರು ಹಿಂದೆ ಬಿದ್ದರೆ ಸಹಜವಾಗಿ ನಮ್ಮ ನೆಲದಲ್ಲಿ ಸಿಗಬೇಕಾದ ಉದ್ಯೋಗಾವಕಾಶ ಬೇರೆ ರಾಜ್ಯದವರಿಗೆ ಹೋಗುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಪರೀಕ್ಷೆಗೆ ಪೂರ್ಣ ಪ್ರಮಾಣದ ಗಮನ ಕೊಟ್ಟು, ಕಠಿನ ಪರಿಶ್ರಮದೊಂದಿಗೆ ತಯಾರಿ ನಡೆಸಲೇಬೇಕಿದೆ. ಉದಾಸೀನತೆಯೊಂದಿಗೆ ಅಥವ ಅರೆ-ಮನಸ್ಸಿ ನೊಂದಿಗೆ ಪರೀಕ್ಷೆ ಎದುರಿಸಿದರೆ ಪ್ರಯೋಜನ ಸಿಗದು. ಇದಕ್ಕಾಗಿಯೇ ಅನೇಕ ತರಬೇತಿ ಕೇಂದ್ರಗಳು ಆರಂಭಗೊಂಡಿದ್ದು, ಪ್ರಶ್ನೆಗಳಿಗೆ ಉತ್ತರಿಸುವ ಕ್ರಮ, ಟೈಮ್ ಮೆನೇಜೆ¾ಂಟ್‌ನ್ನು ತಿಳಿಸುತ್ತವೆ.
ಉದ್ಯೋಗಕ್ಕೆ ವಿಫುಲ ಅವಕಾಶ: ಬ್ಯಾಂಕ್‌ಗಳಲ್ಲಿ ನಿವೃತ್ತಿ ಅಂಚಿನಲ್ಲಿರುವವರ ಜೊತೆ ಬ್ಯಾಂಕ್‌ಗಳು ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಶಾಖೆ ತೆರೆಯುವ ಚಿಂತನೆಯಲ್ಲಿವೆ. ಇದಕ್ಕೆ ಸರಕಾರದ ಆದೇಶವಿದೆ. ಬ್ಯಾಂಕ್‌ಗಳೂ ವಿವಿಧ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಗ್ರಾಹಕ ಜಾಲ ವಿಸ್ತರಿಸುತ್ತಿವೆ. ಈ ಅಗತ್ಯತೆ ಪೂರೈಸಲು ಹೊಸ ಜನರು, ಕ್ರಿಯಾಶೀಲರು ಬೇಕಾಗಿ¨ªಾರೆ. ಒಂದು ಅಂದಾಜಿನ ಪ್ರಕಾರ ಮುಂದಿನ 12 ತಿಂಗಳಲ್ಲಿ 3 ಲಕ್ಷ ಉದ್ಯೋಗಕ್ಕೆ ಬ್ಯಾಂಕಿಂಗ್ ಕ್ಷೇತ್ರ ತೆರೆದುಕೊಳ್ಳಲಿದೆ. ಈ ಅವಕಾಶವನ್ನು ನಮ್ಮ ಅಭ್ಯರ್ಥಿಗಳು ಬಳಸಿಕೊಳ್ಳಬೇಕಾಗಿದೆ ಎಂದು ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಮುಖ್ಯಪ್ರಬಂಧಕ ಬಿ.ಎಂ. ರಮೇಶ್ ಅವರು ಹೇಳಿದ್ದಾರೆ.