ಬಂಕಾಪುರ: ಸಮಾನ ಮನಸ್ಕರೆಲ್ಲರೂ ಸೇರಿ ಸಮಾಜ ಸೇವೆ ಗುರಿಯೊಂದಿಗೆ ಸರ್ಕಾರದ ಅನುದಾನ ನಿರೀಕ್ಷಿಸದೆ ಸಂಸ್ಥೆ ಅಭಿವೃದ್ಧಿಪಡಿಸುವ ಮೂಲಕ ಜ್ಞಾನ ಪಸರಿಸುವ ಕಾರ್ಯವನ್ನು ಲಯನ್ಸ್ ನವಭಾರತ ವಿದ್ಯಾ ಸಂಸ್ಥೆ ಮಾಡುತ್ತಿದೆ ಎಂದು ಖ್ಯಾತ ಜನಪದ ಸಾಹಿತಿ ಶಂಭು ಬಳಿಗಾರ ಹೇಳಿದರು.
ಲಯನ್ಸ್ ನವಭಾರತ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ವ್ಯರ್ಥ ಕಾಲಹರಣ ಮಾಡದೆ ಸಮಯ ಸದ್ಭಳಕೆ ಮಾಡಿಕೊಳ್ಳಬೇಕು. ಶಿಲೆ ಮೂರ್ತಿಯಾಗಿ ಪೂಜಿಸಿಕೊಳ್ಳುವಂತೆ ಜ್ಞಾನ ಸಂಪಾದಿಕೊಂಡ ಮನುಷ್ಯನೂ ಸಮಾಜದಲ್ಲಿ ಗೌರವಿಸಲ್ಪಡುತ್ತಾನೆ ಎಂದರು.
ಬಾಂಧವ್ಯದ ಕೊಂಡಿ ಸಡಿಲುಗೊಳ್ಳುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯ ಸಂಗತಿ. ನಮ್ಮ ಮಕ್ಕಳಿಗೆ ಶಿಕ್ಷಣ ಜತೆಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ತಿಳಿಹೇಳುವ ಅಗತ್ಯವಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಡಾ| ಆರ್.ಎಸ್. ಅರಳೆಲೆಮಠ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಪ್ರಾರಂಭವಾದ ಶಿಕ್ಷಣ ಸಂಸ್ಥೆ, ಆಡಳಿತ ಮಂಡಳಿಯ ಸೇವಾ ಮನೋಭಾವ, ಶಿಕ್ಷಕ ವೃಂದದವರ ನಿಸ್ವಾರ್ಥ ಸೇವೆ ಪ್ರತಿಫಲವಾಗಿ ಇಂದು ಹೆಮ್ಮರವಾಗಿ ಬೆಳೆದು ರಜತ ಮಹೋತ್ಸ ಆಚರಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಹೊರೆಯಾಗದಂತೆ ಮಕ್ಕಳಿಗೆ ಕೆಳಹಂತದಿಂದ ಗುಣಮಟ್ಟದ ಶಿಕ್ಷಣ ನೀಡಿದೆ. ಪ್ರತಿಫಲವಾಗಿ ಇಂದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಈ ಶಾಲೆಯ ಕೀರ್ತಿ ಪತಾಕೆ ಭಾನೆತ್ತರಕ್ಕೆ ಹಾರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಲಯನ್ಸ್ ಜಿಲ್ಲಾ ಗವರ್ನರ್ ಮೋನಿಕಾ ಸಾವಂತ ಮಾತನಾಡಿ, 1994 ರಲ್ಲಿ ಈ ಶಿಕ್ಷಣ ಸಂಸ್ಥೆ ಹಚ್ಚಿದ ಜ್ಞಾನದ ಜ್ಯೋತಿ ನಿರಂತರವಾಗಿ ಪ್ರಜ್ವಲಿಸುವ ಮೂಲಕ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದೆ. ಈ ಒಂದು ಜ್ಞಾನದ ಜ್ಯೋತಿ ಸಮಾಜಕ್ಕೆ ಬೆಳಕಾಗುವ ಮೂಲಕ ಶತಮಾನೋತ್ಸವ ಆಚರಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಲಯನ್ಸ್ ಮಾಜಿ ಜಿಲ್ಲಾ ಗೌವರ್ನರ್ ಅರವಿಂದ ದೇಶಪಾಂಡೆ, ಮೋಹನ ಮೆಣಸಿನಕಾಯಿ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಐ. ಸಜ್ಜನಗೌಡರ ಮಾತನಾಡಿದರು. ಲಯನ್ಸ್ ಡಾ| ಎಂ.ಎಂ. ಬರ್ಚಿವಾಲೆ, ಶಿವಕುಮಾರ ಆದವಾನಿಮಠ, ಆರ್.ಎಸ್.ಕೊಲ್ಲಾವರ, ದಿವಾಕರ ವೇರ್ಣೇಕರ, ಜೆ.ಬಿ.ಸಂಕಣ್ಣವರ, ಗದಿಗೇಪ್ಪ ಮಾಮ್ಲೇಪಟ್ಟಣಶೆಟ್ಟರ, ಗೋವಿಂದ ಮೇಲಗಿರಿ, ಪ್ರಹ್ಲಾದ ಇದ್ದರು.