ದಾವಣಗೆರೆ: ಸಾರ್ವಜನಿಕರು, ಅಧಿಕಾರಿಗಳು, ನೌಕರರಿಗೆ ಮಾರಕವಾಗುವ ಬ್ಯಾಂಕಿಂಗ್, ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ವಿರೋಧ, 5 ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ವಿವಿಧ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಕೆನರಾ ಬ್ಯಾಂಕ್ ಮಂಡಿಪೇಟೆ ಶಾಖೆ ಎದುರು ಮುಷ್ಕರ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಬ್ಯಾಂಕಿಂಗ್, ಕಾರ್ಮಿಕ ಕಾಯ್ದೆ ತಿದ್ದುಪಡಿಯಿಂದ ಬ್ಯಾಂಕ್ ಅಧಿಕಾರಿಗಳು, ನೌಕರರು, ಸಿಬ್ಬಂದಿ ಮಾತ್ರವಲ್ಲ ಸಾರ್ವಜನಿಕರು ಸಹ ತೀವ್ರ ತೊಂದರೆಗೆ ಒಳಗಾಗಲಿದ್ದು, ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಕೂಡದು. ಸರ್ವರಿಗೂ ಅನುಕೂಲವಾಗುವಂತೆ 5 ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ನ.8ರಂದು ನೋಟು ಅಮಾನ್ಯ ಮಾಡಿದ ನಂತರ ಬ್ಯಾಂಕ್‌ನ ಎಲ್ಲ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿ, ಜನರಿಗೆ ಸೇವೆ ಸಲ್ಲಿಸುವ ಮೂಲಕ ಕೇಂದ್ರಕ್ಕೆ ಸಾವಿರಾರು ಕೋಟಿ ಉಳಿಸಿಕೊಟ್ಟಿದ್ದಾರೆ. ಕೆಲವರು ಈ ಸಂದರ್ಭದಲ್ಲಿ ಅಸು ನೀಗಿದ್ದಾರೆ. ಇದು ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರ್ಕಾರ ಕಾನೂನು ರೀತಿ ಕೊಡಬೇಕಾದ ಪರಿಹಾರಕ್ಕೂ ಸತಾಯಿಸುತ್ತಿದೆ.
ಅನೇಕ ಬ್ಯಾಂಕ್‌ನ ನಿರ್ದೇಶಕ ಮಂಡಳಿಗೆ ನೌಕರ, ಅಧಿಕಾರಿ ವರ್ಗದ ಪರ ನಿರ್ದೇಶಕರ ನೇಮಕ ಮಾಡುವಲ್ಲಿ ವಿಳಂಬ ನೀತಿ ತೋರುತ್ತಿರುವುದು ಕಾರ್ಮಿಕ ವಿರೋಧಿ ನೀತಿಯ ಪ್ರತೀಕ. ಇದು ಹಕ್ಕು, ಧ್ವನಿ ಹತ್ತಿಕ್ಕುವ ಸ್ಪಷ್ಟ ಪ್ರಯತ್ನ ಎಂದು ದೂರಿದರು.
ಕೂಡಲೇ ನಿರ್ದೇಶಕರ ಸ್ಥಾನ, ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆ ನೇಮಕ, ನಿವೃತ್ತಿ ನಂತರ ರಜಾ ನಗದೀಕರಣ, ಗ್ರಾಚುಟಿ ಮೇಲಿನ ಆದಾಯ ತೆರಿಗೆಯ ಸಂಪೂರ್ಣ ವಿನಾಯತಿ, ನಿವೃತ್ತ ವೇತನ ಪರಿಷ್ಕರಣೆ, ಹೆಚ್ಚುತ್ತಿರುವ ಅನುತ್ಪಾದಕ ಸಾಲದ ಪ್ರಮಾಣ ತಗ್ಗಿಸಿ, ಬ್ಯಾಂಕಿಂಗ್ ಕ್ಷೇತ್ರ ಉಳಿಸುವ ನಿಟ್ಟಿನಲ್ಲಿ ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆ ಜಿಲ್ಲಾ ಸಂಚಾಲಕ ಕೆ. ರಾಘವೇಂದ್ರ ನಾಯರಿ, ದತ್ತಾತ್ರೇಯ ಮೇಲಗಿರಿ, ಡಿ.ಎಸ್. ಹನುಮಂತಪ್ಪ, ಅಜಿತ್‌ಕುಮಾರ್ ನ್ಯಾಮತಿ, ಚೈತನ್ಯ ಕೃಷ್ಣ, ಪುರುಷೋತ್ತಮ್, ಹರೀಶ್ ಪೂಜಾರ್, ಭಾರತಿ, ಸುಜಯಾ ನಾಯಕ್, ಅನುರಾಧ ಮುತಾಲಿಕ್, ನವೀನ್‌ಕುಮಾರ್, ನರೇಂದ್ರಕುಮಾರ್, ನಾಗವೇಣಿ ಇತರರು ಇದ್ದರು.