Advertisement

ದಿಲ್‌ ಮಾಂಗೇ ಡೋರ್‌

09:54 AM Nov 12, 2019 | mahesh |

ಮನೆ ಬಾಗಿಲಿಗೆ ಪಿಜ್ಜಾ, ಕೊರಿಯರ್‌ ಬಾಯ್‌ಗಳಷ್ಟೇ ಡೆಲಿವರಿ ಮಾಡಲು ಬರುತ್ತಿದ್ದರು. ಇನ್ನುಮುಂದೆ ಬ್ಯಾಂಕಿನ ಡೆಲಿವರಿಬಾಯ್‌ಗಳು ಮನೆ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮನೆ ಬಾಗಿಲಿಗೇ ಬ್ಯಾಂಕ್‌ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿವೆ.

Advertisement

ನಮ್ಮಲ್ಲೊಂದು ನಂಬಿಕೆಯಿದೆ. ಬ್ಯಾಂಕಿಗೆ ಹೋಗುವುದು ಎಂದರೆ ಪರವೂರಿಗೆ ಹೋದಷ್ಟೇ ಸಿದ್ಧತೆ ಬೇಕಾಗುತ್ತದೆ ಎಂದು. ನಮ್ಮ ಎಲ್ಲಾ ಕೆಲಸಕಾರ್ಯಗಳನ್ನು ಒತ್ತಟ್ಟಿಗಿಟ್ಟು ಬ್ಯಾಂಕ್‌ ಕೆಲಸಕ್ಕೆಂದು ಏನಿಲ್ಲವೆಂದರೂ ಅರ್ಧ ದಿನವಾದರೂ ಮೀಸಲಿಡಲೇಬೇಕು. ಒಮ್ಮೆ ಒಳ ನುಗ್ಗಿ ಕೆಲಸ ಪೂರ್ತಿ ಮುಗಿಸಿ ಹೊರಬಂದರೆ ಯುದ್ಧ ಮುಗಿಸಿ ಬಂದಷ್ಟೇ ಸಂತೃಪ್ತಿ ಗ್ರಾಹಕರ ಮುಖದಲ್ಲಿರುತ್ತದೆ. ಇಂದು ಹೈಸ್ಪೀಡ್‌ ಇಂಟರ್‌ನೆಟ್‌ ಯುಗದಲ್ಲಿ ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಮುಂತಾದ ಸವಲತ್ತುಗಳಿಂದ ಗ್ರಾಹಕರು ಬ್ಯಾಂಕಿಗೆ ಹೋಗುವುದು ಕಡಿಮೆಯಾಗಿದೆ. ಈ ಸಂಖ್ಯೆಯನ್ನು ಇನ್ನಷ್ಟು ತಗ್ಗಿಸಲು, ಗ್ರಾಹಕರ ಮನೆ ಬಾಗಿಲಿಗೇ ಬ್ಯಾಂಕ್‌ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ಸನ್ನದ್ಧವಾಗುತ್ತಿವೆ. ಆ ಮೂಲಕ “ಡೋರ್‌ಸ್ಟೆಪ್‌ ಬ್ಯಾಂಕಿಂಗ್‌’ನ ಪರ್ವ ಇನ್ನೇನು ಶುರುವಾಗಲಿದೆ.

ಆರ್‌ಬಿಐ ವರ್ಷಗಳ ಹಿಂದೆಯೇ ಡೋರ್‌ಸ್ಟೆಪ್‌ ಬ್ಯಾಂಕಿಂಗ್‌ಅನ್ನು ಅನುಷ್ಠಾನಕ್ಕೆ ತರುವ ಕುರಿತು ವಿಚಾರ ಮಂಡಿಸಿತ್ತು. ಸಾರ್ವಜನಿಕ ವಲಯದ ಬ್ಯಾಂಕುಗಳು ಡೋರ್‌ಸ್ಟೆಪ್‌ ಬ್ಯಾಂಕಿಂಗ್‌ ಸೇವೆಯನ್ನು ಒದಗಿಸಬೇಕಾದರೆ ಡೆಲಿವರಿ ಬಾಯ್‌ಗಳು, ಸಹಾಯವಾಣಿ ಮುಂತಾದುದರ ಅಗತ್ಯವಿರುತ್ತದೆ. ಅದಕ್ಕಾಗಿ ಖಾಸಗಿ ಸೇವಾಸಂಸ್ಥೆಗಳ (ಕಾಮನ್‌ ಸರ್ವೀಸ್‌ ಪ್ರೊವೈಡರ್‌) ಪಾಲುದಾರಿಕೆ ಬೇಕಾಗುತ್ತದೆ. ಈ ಕುರಿತಾಗಿ ಯುಕೋ ಬ್ಯಾಂಕು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳ ಪರವಾಗಿ ಈಗಾಗಲೇ ಕರೆ(ಆರ್‌ಎಫ್ಪಿ- ರಿಕ್ವೆಸ್ಟ್‌ ಫಾರ್‌ ಪ್ರಪೋಸಲ್‌) ನೀಡಿದೆ. ಆಯ್ಕೆಯಾದ ಕಾಮನ್‌ ಸರ್ವೀಸ್‌ ಪ್ರೊವೈಡರ್‌ ಕಾಲ್‌ಸೆಂಟರ್‌, ವೆಬ್‌ಸೈಟ್‌ ಮತ್ತು ಮೊಬೈಲ್‌ ಆ್ಯಪ್‌ಅನ್ನು ಸೇವೆಯನ್ನು ಒಳಗೊಂಡಿರುತ್ತದೆ. ಹೊಸ ಯೋಜನೆ ಆಗಿರುವುದರಿಂದ ಜನಸಾಮಾನ್ಯರಿಗೆ ಈ ಸೇವೆಯ ಕುರಿತು ಹಲವು ಗೊಂದಲಗಳು, ಅನುಮಾನಗಳು ಬರುವುದು ಸಹಜ. ಅವರ ಎಲ್ಲಾ ಅನುಮಾನಗಳನ್ನು ಪರಿಹರಿಸುವ ಸಲುವಾಗಿಯೇ ಕಾಲ್‌ಸೆಂಟರ್‌ ಸಹಾಯವಾಣಿಯನ್ನು ನಿಯೋಜಿಸಲಾಗುವುದು.

ಕಾರ್ಯನೀತಿಗಳ ಪಟ್ಟಿ
ಮನೆ ಬಾಗಿಲಿಗೆ ಬ್ಯಾಂಕ್‌ ಸೇವೆಗಳನ್ನು ತಲುಪಿಸುವ ಈ ಯೋಜನೆ ಕೇಂದ್ರ ಸರ್ಕಾರದ ದೂರದೃಷ್ಟಿತ್ವದ ಫ‌ಲಶ್ರುತಿಯಾಗಿದೆ. ಅದರ ಅನುಷ್ಠಾನಕ್ಕಾಗಿ ಕಾಮನ್‌ ವರ್ಕಿಂಗ್‌ ಅವರ್ ಮತ್ತಿತರ ಪ್ರಶ್ನೆಗಳಿಗೆ ಬ್ಯಾಂಕುಗಳು ಒಮ್ಮತ ತೀರ್ಮಾನವನ್ನು ಕೈಗೊಳ್ಳಲಿವೆ. ಗ್ರಾಹಕರು ತಮಗೆ ಇಂತಿಂಥ ಸೇವೆ ಬೇಕಿದೆ ಎಂದು ಮನವಿ ಮಾಡಿದಾಕ್ಷಣ, ಆ ದಿನವೇ ಅವರ ಮನವಿಯನ್ನು ಪರಿಶೀಲಿಸಿ ಪುರಸ್ಕರಿಸಲಾಗುವುದು. ಒಂದು ವೇಳೆ ಗ್ರಾಹಕ ನಿಗದಿತ ವೇಳೆಯ ನಂತರ ಯಾವುದಾದರೂ ಸೇವೆಯನ್ನು ಬಯಸಿದಲ್ಲಿ ಮರುದಿನ ಮಧ್ಯಾಹ್ನದ ಒಳಗಾಗಿ ಪರಿಶೀಲಿಸಲಾಗುವುದು.

ಆರ್‌ಬಿಐ ಡೋರ್‌ಸ್ಟೆಪ್‌ ಬ್ಯಾಂಕಿಂಗ್‌ನ ಕಾರ್ಯವಿಧಾನ ಮತ್ತು ನೀತಿಗಳನ್ನು ಮೊದಲು ಸಿದ್ಧಪಡಿಸುವಂತೆ ಬ್ಯಾಂಕುಗಳನ್ನು ಕೇಳಿಕೊಂಡಿದೆ. ಇದರಲ್ಲಿ ಏಜೆಂಟರು, ಖಾಸಗಿ ನೌಕರರು ಒಳಗೊಳ್ಳುವುದರಿಂದ, ಕೆಲಸಗಾರರನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸುವಂತೆ ಅದು ಕೇಳಿಕೊಂಡಿದೆ. ನಕಲಿ ನೋಟು, ಫೋರ್ಜರಿಯಂಥ ಮೋಸ ಕೃತ್ಯಗಳನ್ನು ಪತ್ತೆ ಹಚ್ಚಲು ತರಬೇತಿಯನ್ನು ನೀಡುವ ವಿಚಾರವೂ ಬ್ಯಾಂಕುಗಳ ಮುಂದಿದೆ. ಅಲ್ಲದೆ ಯಾವ ಯಾವ ಸವಾಲುಗಳು, ತೊಂದರೆಗಳು ಎದುರಾಗಲಿವೆ ಎನ್ನುವುದರ ಪಟ್ಟಿ ತಯಾರಿಸಿ ಅವೆಲ್ಲಕ್ಕೂ ಸೂಕ್ತ ಪರಿಹಾರ ಕ್ರಮಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚಿಸಿದೆ.

Advertisement

ಯಾವ ಯಾವ ಸೇವೆಗಳು
-ಕ್ಯಾಶ್‌ ಡೆಪಾಸಿಟ್‌ ಮತ್ತು ವಿತ್‌ಡ್ರಾವಲ್‌
-ಚೆಕ್‌ ಮತ್ತು ಡ್ರಾಫ್ಟ್ಗಳ ಪಿಕಪ್‌
-ಅಕೌಂಟ್‌ ಸ್ಟೇಟ್‌ಮೆಂಟ್‌
-ಟರ್ಮ್ ಡೆಪಾಸಿಟ್‌ ರಸೀದಿ
-ಐಟಿ ಚಲನ್‌ ಸ್ವೀಕೃತಿ
-ಟಿಡಿಎಸ್‌ ಅಥವಾ ಫಾರ್ಮ್16 ಸರ್ಟಿಫಿಕೆಟ್‌ ಡೆಲಿವರಿ
-ಗಿಫ್ಟ್ ಕಾರ್ಡ್‌ ಡೆಲಿವರಿ

ಎಲ್ಲರಿಗೂ ಇಲ್ಲ…
ಮನೆ ಬಾಗಿಲಿಗೆ ಬ್ಯಾಂಕ್‌ ಸೌಲಭ್ಯಗಳನ್ನು ಒದಗಿಸುವ ಸವಲತ್ತನ್ನು ಶುರುವಿನಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಮಾತ್ರವೇ ಒದಗಿಸಲಾಗುವುದು. ಅವರಿಗೆ ಸರದಿಯಲ್ಲಿ ನಿಂತು, ಕಾದು ಬ್ಯಾಂಕ್‌ನ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ಕಷ್ಟವಾಗುವುದರಿಂದ ಈ ನಿರ್ಧಾರ. ಆದರೆ ನಂತರದ ದಿನಗಳಲ್ಲಿ ಈ ಸವಲತ್ತನ್ನು ಎಲ್ಲಾ ಬ್ಯಾಂಕ್‌ ಗ್ರಾಹಕರಿಗೂ ದೊರೆಯುವಂತೆ ಮಾಡಲಾಗುವುದು. ಮನೆ ಬಾಗಿಲಿಗೇ ಬ್ಯಾಂಕಿನ ಸವಲತ್ತನ್ನು ನಿರೀಕ್ಷಿಸುವವರು ನಿಗದಿತ ಶುಲ್ಕವನ್ನು ಪಾವತಿಸಬೇಕಾಗಿ ಬರುವುದು.

ಹವನ

Advertisement

Udayavani is now on Telegram. Click here to join our channel and stay updated with the latest news.

Next