Advertisement

Bank Service: ಬ್ಯಾಂಕ್‌ ಸೇವೆ ವಾರದಲ್ಲಿ ಐದೇ ದಿನ ?

09:23 AM Aug 08, 2023 | Team Udayavani |

ಕಾರ್ಕಳ: ಸರಕಾರಿ ಬ್ಯಾಂಕ್‌ ನೌಕರರ ಬಹು ನಿರೀಕ್ಷಿತ ವಾರದ 5 ದಿನಗಳ ಕೆಲಸದ ಬೇಡಿಕೆ ಶೀಘ್ರದಲ್ಲಿ ಈಡೇರುವ ನಿರೀಕ್ಷೆಯಿದೆ. ಅದು ಜಾರಿಯಾದಲ್ಲಿ ದಿನದ ವಹಿವಾಟಿನಲ್ಲಿ 40 ನಿಮಿಷ ಹೆಚ್ಚಳವಾಗಲಿದೆ ಮತ್ತು ಎಲ್ಲ ಶನಿವಾರಗಳಂದೂ ಬ್ಯಾಂಕಿಗೆ ರಜೆ ಇರಲಿದೆ.

Advertisement

ಈ ಕುರಿತು ಕೇಂದ್ರ ಸರಕಾರಕ್ಕೆ ಈ ಮೊದಲೇ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿ, ವೇತನ ಮಂಡಳಿ ಪರಿಷ್ಕರಣೆಯೊಂದಿಗೆ ಶೀಘ್ರ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಲ್ಲಿ 8 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ದೇಶದ 76ನೇ ಸ್ವಾತಂತ್ರೋತ್ಸವದ ಮಾಸವಾದ ಅಗಸ್ಟ್‌ನ 19ರ ವೇಳೆಗೆ ದೇಶಾದ್ಯಂತ ಜಾರಿಯಾಗುವ ಸಂಭವವಿದೆ.

ಸರಕಾರಿ ಬ್ಯಾಂಕ್‌ ಉದ್ಯೋಗಿಗಳ ಸಂಘಟನೆಯಾದ ಇಂಡಿಯನ್‌ ಬ್ಯಾಂಕ್‌ ಅಸೋಸಿಯೇಶನ್‌ (ಐಬಿಎ) ಹಾಗೂ ಯುನೈಟೆಡ್‌ ಫೋರಂ ಅಸೋಸಿಯೇಶನ್‌ ಎಂಪ್ಲಾಯೀಸ್‌ ಯೂನಿಯನ್‌ ಒಕ್ಕೂಟ ಒಮ್ಮತದಿಂದ ಹಣಕಾಸು ಸಚಿವಾಲಯಕ್ಕೆ ಒತ್ತಡ ತಂದಿದೆ. ಅಂತಿಮ ಮುದ್ರೆಯಷ್ಟೇ ಬಾಕಿ. ಈಗ ಪ್ರತೀ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಬ್ಯಾಂಕ್‌ಗಳು ತೆರೆದಿರುತ್ತವೆ. ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ ರಜಾ ದಿನಗಳಾಗಿವೆ. ಐದು ದಿನಗಳ ಕೆಲಸ. ಎರಡು ದಿನಗಳ ವಾರದ ರಜೆ ಸಹಿತ ಸಂಬಳ ಹೆಚ್ಚಳ, ನಿವೃತ್ತ ವೇತನದಾರರರಿಗೆ ಗ್ರೂಪ್‌ ಮೆಡಿಕಲ್‌ ಇನ್ಶೂರೆನ್ಸ್‌ ಪಾಲಿಸಿ ಮೊದಲಾದ ಬೇಡಿಕೆಗಳಿವೆ.

ಭಾರತೀಯ ಜೀವ ವಿಮಾ ನಿಗಮದಲ್ಲಿ ವಾರದ 5 ದಿನಗಳ ಕೆಲಸದ ವ್ಯವಸ್ಥೆಯನ್ನು ಸರಕಾರ ಈ ಹಿಂದೆ ಜಾರಿಗೆ ತಂದಿದೆ. ಬ್ಯಾಂಕ್‌ಗಳಲ್ಲೂ ಜಾರಿಗೊಳಿಸಬೇಕೆಂಬ ಬೇಡಿಕೆ ಬಂದಿತ್ತು. ಜುಲೈ 27ರಂದು ಯೂನಿಯನ್‌ ಒಕ್ಕೂಟ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಅವರನ್ನು ಆಗ್ರಹಿಸಿತ್ತು.

ಹೊಸ ವ್ಯವಸ್ಥೆ ಜಾರಿಯಾದಲ್ಲಿ ಉದ್ಯೋಗಿಗಳ ದೈನಂದಿನ ಕೆಲಸದ ಅವಧಿ ಹೆಚ್ಚಾಗಲಿದೆ. ಹೊಸ ವ್ಯವಸ್ಥೆಯಲ್ಲಿ ಬೆಳಗ್ಗೆ 9.45ರಿಂದ 5.30. (ಸಿಬಂದಿ), 9.35ರಿಂದ 6.15 (ಅಧಿಕಾರಿಗಳು) ಅಂದರೆ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ನೆಗೋಶಿಯೇಬಲ್‌ ಇನ್‌ಸ್ಟ್ರೆಮೆಂಟ್‌ ಆ್ಯಕ್ಟ್ ಸೆಕ್ಷನ್‌ 25ರ ಅಡಿಯಲ್ಲಿ ಅಧಿಸೂಚನೆ ಹೊರ ಬೀಳಬೇಕಿದೆ.

Advertisement

ಶನಿವಾರ ಬ್ಯಾಂಕಿಗೆ ರಜೆಯಾದಲ್ಲಿ ಕಾರ್ಮಿಕರಿಗೆ ವೇತನ ಪಾವತಿ ಕಷ್ಟ

ಬ್ಯಾಂಕ್‌ಗಳಿಗೆ ಶನಿವಾರದ ರಜೆಯಿಂದ ಉದ್ದಿಮೆ ದಾರರು, ವ್ಯವಹಾರದಾರರಿಗೆ ಹಣಕಾಸಿನ ವಹಿವಾಟಿ ನಲ್ಲಿ ಸಮಸ್ಯೆಗಳಾಗಲಿವೆ. ಸಾಮಾನ್ಯವಾಗಿ ವಾರಾಂತ್ಯದ ದಿನವಾದ ಪ್ರತೀ ಶನಿವಾರ ಕಾರ್ಮಿಕರಿಗೆ ವೇತನ ವಿತರಣೆ ಆಗುತ್ತಿದ್ದು, ಅಂದು ಬ್ಯಾಂಕ್‌ ಬಂದ್‌ ಆದಲ್ಲಿ ವಿವಿಧ ಕ್ಷೇತ್ರಗಳು ಸಮಸ್ಯೆ ಎದುರಿಸಲಿವೆ.

ಬ್ಯಾಂಕ್‌ ಉದ್ಯೋಗಿಗಳ ಪರವಾಗಿ ಬೇಡಿಕೆಯನ್ನು ಒಕ್ಕೂಟದ ಕಡೆಯಿಂದ ಕೇಂದ್ರ ಸರಕಾರದ ಮುಂದಿಟ್ಟಿದ್ದೇವೆ. ಸ್ವಾತಂತ್ರ್ಯದಿನದ ಅಮೃತಘಳಿಗೆಯಲ್ಲಿ ನಮ್ಮ ಬೇಡಿಕೆ ಈಡೇರಿಸಿ ಆದೇಶ ಹೊರಡಿಸಬೇಕೆನ್ನುವ ಆಗ್ರಹ ನಮ್ಮದಾಗಿದ್ದು, ವಿತ್ತ ಸಚಿವರ ಮುಂದೆ ಮಂಡಿಸಿದ್ದೇವೆ. ಸರಕಾರ ಬೇಡಿಕೆಯನ್ನು ಈಡೇರಿಸಿ ಈ ತಿಂಗಳಲ್ಲೆ ಆದೇಶ ಹೊರಡಿಸುತ್ತದೆ ಎನ್ನುವ ವಿಶ್ವಾಸದಲ್ಲಿದ್ದೇವೆ. – ಗಿರೀಶ್‌ಚಂದ್ರ ಆರ್ಯ, ಪ್ರಧಾನ ಕಾರ್ಯದರ್ಶಿ, ಸರಕಾರಿ ಬ್ಯಾಂಕ್‌ ಉದ್ಯೋಗಿಗಳ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next