Advertisement
ಒಂದು ಸೇವೆಗೆ ಒಂದು ಶುಲ್ಕ. ಒಂದೊಮ್ಮೆ ಸೂಕ್ತ ಸೇವಾ ಶುಲ್ಕ ಪಾವತಿಸದಿದ್ದರೆ, ವಿಳಂಬಕ್ಕೆ ದಂಡ. ಸೇವೆಯನ್ನು ಒದಗಿಸುವುದು ನಮ್ಮ ಧರ್ಮ, ಆದರೆ ದಂಡ ಶುಲ್ಕ ಪಡೆದು ಕೊಡುತ್ತೇವೆ ಎಂದು ಹೇಳುವುದು ನ್ಯಾಯಯುತ. ಈ ಚೌಕಟ್ಟನ್ನು ಮೀರಿ ಭಾರತೀಯ ಅಂಚೆ ಇಲಾಖೆ ಸೇವೆ ಕೊಡದೆ ದಂಡ ವಿಧಿಸುವ ಒಂದು ವಿಧಾನವನ್ನು ನೆನಪಿಸಿಕೊಳ್ಳುತ್ತ ಈ ವಾರದ ಮುಖ್ಯ ವಿಷಯಕ್ಕೆ ಬರಬೇಕಾಗಿದೆ.
Related Articles
ನಾವು ಇವತ್ತಿಗೂ ಗ್ಯಾರಂಟಿ, ವಾರಂಟಿಯ ಗೊಂದಲ ಮೂಡಿಸಿ ತಯಾರಕ, ಮಾರಾಟಗಾರರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಈ ಗ್ಯಾರಂಟಿ, ವಾರಂಟಿಯೂ ಒಂದು ತಯಾರಿಕೆಗೆ ಸಂಪೂರ್ಣವಾಗಿ ಅನ್ವಯವಾಗುವುದಿಲ್ಲ. ಕಾರಿನ ಪ್ಲಾಸ್ಟಿಕ್ ಐಟಂಗಳಿಗೆ ಇದು ಅನ್ವಯವಾಗುವುದಿಲ್ಲ ಎಂಬ ಷರಾ ಇರುತ್ತದೆ. ಇದು ಸಮರ್ಥನೀಯವಲ್ಲ. ಗ್ಯಾರಂಟಿಯ ಅವಧಿಯಲ್ಲಿ ವ್ಯತ್ಯಾಸವಿರಬಹುದು, ಆದರೆ ಒಂದು ಉತ್ಪನ್ನದ ತಯಾರಿಕೆಯ ವಿಚಾರ ಬಂದಾಗ, ಎಲ್ಲ ಭಾಗಗಳಿಗೆ ಒಂದೊಂದು ಗ್ಯಾರಂಟಿ ಅವಧಿ ಇರಲೇಬೇಕು. ಇದರಲ್ಲಿ ಹೆಚ್ಚು ಸ್ವಾರಸ್ಯಕರ ಗ್ಯಾರಂಟಿ ಅಲಿಯಾಸ್ ವಾರಂಟಿ ವೃತ್ತಾಂತ ಕಾರು, ಬೈಕ್, ಇನ್ವರ್ಟರ್‌ಗಳ ಬ್ಯಾಟರಿ ವಿಚಾರದಲ್ಲಿದೆ. ಒಂದು ಬ್ಯಾಟರಿಗೆ ಎರಡು ವರ್ಷಗಳಲ್ಲಿ ಬದಲಾಯಿಸಿಕೊಡುವ ಗ್ಯಾರಂಟಿ ಇರುತ್ತದೆ. ಆ ನಂತರದ ಮೂರು ವರ್ಷ ಶುಲ್ಕ ಸಹಿತವಾಗಿ ಬದಲಿಸಿಕೊಡುವ ವಾರಂಟಿ ಇರುತ್ತದೆ. ಎರಡು ವಿಚಾರ ಪ್ರಶ್ನಾರ್ಹ. ವಾರಂಟಿಯ ಘೋಷಣೆ ಮಾಡಿದ ಮೇಲೆ ಅದರ ಮೇಲೆ ಶುಲ್ಕ ವಸೂಲಿಯ ಷರತ್ತು ಒಡ್ಡುವುದು ಕಾನೂನುಸಮ್ಮತ ಎನ್ನಿಸುವುದಿಲ್ಲ. ಅದರ ಜೊತೆ ಜನರನ್ನು ಐದು ವರ್ಷಗಳ ಗ್ಯಾರಂಟಿ ಎಂದು ಸುಳ್ಳು ಭರವಸೆ ನೀಡಿ ವಂಚಿಸಲಾಗುತ್ತಿದೆ ಎಂಬ ದಟ್ಟ ಅನುಮಾನ ವ್ಯಕ್ತಪಡಿಸಲು ಕೂಡ ಕಾರಣಗಳಿವೆ. ಶುಲ್ಕ ಸಹಿತ ಬದಲಾಯಿಸಿ ಕೊಡುವ ಅವಧಿಯನ್ನು “ಆಫರ್ ಟೈಮ್’ ಎನ್ನಬಹುದು. ಅಷ್ಟಕ್ಕೂ ಒಂದು ಬ್ಯಾಟರಿಯ ಮೇಲೆ ಇಷ್ಟು ಕೊಟ್ಟರೆ ಎರಡು ವರ್ಷ, ಇಷ್ಟು ಅಧಿಕ ಕೊಟ್ಟರೆ ಇನ್ನೂ ಎರಡು ಅಧಿಕ ವರ್ಷ ಗ್ಯಾರಂಟಿ ಎಂಬುದು ಕೂಡ ಕಾನೂನಿನ ಪರಾಮರ್ಶೆಗೆ ಒಳಪಡಬೇಕಾಗಿದೆ. ಹೆಚ್ಚು ಕೊಟ್ಟರೆ ಅಧಿಕ ವಾರಂಟಿ ಎನ್ನುವ ಬದಲು ಈ ಪ್ರೀಮಿಯಮ್ ಬ್ಯಾಟರಿಯ ಇನ್ಸೂರೆನ್ಸ್ ಪಾವತಿ ಎಂದು ಅರ್ಥೈಸಿದರೆ ಹೆಚ್ಚು ಸೂಕ್ತ ಆಗಬಹುದೇ?
Advertisement
ಹೊಸ ಬೈಕ್‌ನ ಉದಾಹರಣೆಗೆ ಬಂದರೆ ಮೊದಲ ಸರ್ವೀಸ್ ಉಚಿತ. ಆದರೂ, ಬದಲಿಸಿಕೊಡುವ ಇಂಜಿನ್ ಆಯಿಲ್‌ನ ಮೊತ್ತವನ್ನು ಗ್ರಾಹಕನೇ, ಕೊಡಬೇಕು. ಮತ್ತೆ ಹೇಗೆ ಈ ಸೇವೆ ಉಚಿತ ಎಂದು ಕರೆಸಿಕೊಳ್ಳುತ್ತದೆ? ಇದರ ಜೊತೆಗೆ ಕೇವಲ 500ರಿಂದ 750 ಕಿಮೀ, ಕಾರಾದರೆ ತಿಂಗಳೊಪ್ಪತ್ತಿನ ಅವಧಿಯಲ್ಲಿ ಸುಮಾರು 5 ಸಾವಿರ ಕಿ.ಮೀ ಚಾಲನೆಯವರೆಗೆ ಗುಣಮಟ್ಟದಲ್ಲಿರುವ ಇಂಜಿನ್ ಆಯಿಲ್ ಅನ್ನು ಬದಲಾಯಿಸಬೇಕಾದುದಾದರೂ ಏಕೆ?
ಈ ಬಗೆಗಿನ ಮಾಹಿತಿಯನ್ನು ಕಲೆಹಾಕಿದರೆ ಗೊತ್ತಾಗುತ್ತದೆ. ಹೊಸದಾದ ವಾಹನದ ಒಳಗಿನ ಯಂತ್ರಗಳು ಇನ್ನೂ ತಾಜಾ. ಅದರಲ್ಲಿ ತಯಾರಿಕಾ ಸಂದರ್ಭದಲ್ಲಿನ ಸಣ್ಣ ಅತಿ ಸಣ್ಣ ಲೋಹದ ತುಣುಕುಗಳು ಎಂಜಿನ್ ಒಳಭಾಗದಲ್ಲೂ ಇರಬಹುದು. ಇಂಥದ್ದನ್ನು ಚಾಲಿಸಿದಾಗ ಎಂಜಿನ್ ಆಯಿಲ್ ಜೊತೆ ಇವುಗಳೆಲ್ಲ ದಹನ ಕ್ರಿಯೆಯ ಯಂತ್ರ ಮಂಡಲದಲ್ಲಿ ಚಲಿಸುತ್ತವೆ. ಇದು ದೀರ್ಘಕಾಲ ಎಂಜಿನ್ ಒಳಗೇ ಇದ್ದರೆ ಇಂಜಿನ್ ಹಾಳಾಗಬಹುದು. ಅದರ ಕ್ಷಮತೆಗೆ ಕುಸಿಯಬಹುದು. ಪದೇ ಪದೆ ಕೈಕೊಡಬಹುದು. ಈ ಹಿನ್ನೆಲೆಯಲ್ಲಿ ನಿಗದಿತ ಪ್ರಮಾಣದ ಕಿ.ಮೀ ಓಡಿ ತನ್ನ ನಿಜದ ಕಾರ್ಯಕ್ಷಮತೆ ಕಳೆದುಕೊಳ್ಳದಿದ್ದರೂ ಗ್ರಾಹಕ ವಾಹನದ ಎಂಜಿನ್ ಆಯಿಲ್ ಬದಲಿಸಿಕೊಳ್ಳಬೇಕಾಗುತ್ತದೆ ಎಂದು ಅಂತಜಾìಲದಲ್ಲೂ ಸ್ಪಷ್ಟವಾಗಿ ಬರೆಯಲಾಗಿದೆ. ಇದನ್ನು ಗಮನಿಸಿದಾಗಲೇ ಪ್ರಶ್ನೆಗಳು ಮೂಡುವುದು; ಎಂಜಿನ್‌ನ ತಯಾರಿಕಾ ಸಮಯದ ಕಾರಣಗಳಿಗಾಗಿ ನಾವು ಇಂಜಿನ್ ಆಯಿಲ್‌ಅನ್ನು ಬದಲಾಯಿಸುತ್ತಿರುವಾಗ ಹೊಸದಾಗಿ ಹಾಕುವ ಇಂಜಿನ್ ಆಯಿಲ್‌ನ ವೆಚ್ಚವನ್ನು ತಯಾರಿಕಾ ಕಂಪನಿಯೇ ಭರಿಸಬೇಕಲ್ಲವೇ?
ಬದಲಾದ ನಿಮಿಷ….ಕೆಲ ವರ್ಷಗಳ ಹಿಂದೆ ಒಬ್ಬ ಗ್ರಾಹಕ ಸಾಗರದ ಬಳಕೆದಾರರ ವೇದಿಕೆಯನ್ನು ಸಂಪರ್ಕಿಸಿ ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದ. ಮೊಬೈಲ್‌ನಲ್ಲಿನ ಪಲ್ಸ್ ದರ ನಿಮಿಷಗಳಲ್ಲಿದೆ. ಒಂದೊಮ್ಮೆ ನಾವು ಒಂದು ಪೂರ್ಣ ನಿಮಿಷಕ್ಕಿಂತ ಮೊದಲು ಕರೆಯನ್ನು ಮುಗಿಸಿದರೆ ಉಳಿಯುವ ಸೆಕೆಂಡ್‌ಗಳು ವೃಥಾ ವ್ಯಯವಾಗುತ್ತದೆ. ನಾವು ಈ ಸೆಕೆಂಡ್‌ಗಳನ್ನು ಸೇರಿಸಿಯೇ ಟಾಕ್‌ಟೈಮ್ ಖರೀದಿಸಿರುವಾಗ ಇದು ಸೇವಾ ವ್ಯತ್ಯಯವಾಗುವುದಿಲ್ಲವೇ? ಈ ರೀತಿ ಉಳಿಯುವ ಸಮಯದ ಮೌಲ್ಯ ಕಂಪನಿ ಸೇವೆ ಕೊಡದೆ ಪಡೆದು ಕೊಂಡಂತಾಗುವುದಿಲ್ಲವೇ? ಈ ಅಂಶವನ್ನೇ ಆಧರಿಸಿ ಸಾಗರ ಬಳಕೆದಾರರ ವೇದಿಕೆ ಸೆಕೆಂಡ್ ಪಲ್ಸ್‌ನ ವಾದವನ್ನು ಮುಂದಿಟ್ಟಿದ್ದು, ಕೆಲಕಾಲದಲ್ಲಿಯೇ ಅಂತಹ ಯೋಜನೆಗಳು ಜಾರಿಯಾದುದು ಈಗ ಇತಿಹಾಸ. ಆದರೆ ಈಗಲೂ ಬೇರೆ ಬೇರೆ ವಿಧಗಳಲ್ಲಿ ಮೊಬೈಲ್ ಸೇವಾದಾತರು ತಮ್ಮದಲ್ಲದ ಹಣವನ್ನು ಸೇವೆ ಕೊಡದೆ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. 20 ರೂ.ಗೂ ಕಡಿಮೆ ಇಲ್ಲದ ಮೊಬೈಲ್ ಸಿಮ್‌ಗಳನ್ನು ವ್ಯಾಲಿಡಿಟಿ ಹೊಂದಿದ್ದು ಎಷ್ಟೇ ಅವಧಿಯವರೆಗೆ ಚಾಲನೆ ಇಲ್ಲದಿದ್ದರೂ ಸ್ಥಗಿತಗೊಳಿಸುವಂತಿಲ್ಲ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) 2013ರಲ್ಲಿಯೇ ಟ್ಯಾರಿಫ್ ತಿದ್ದುಪಡಿಯನ್ನು ತಂದಿತ್ತು. 2012ರಲ್ಲಿ ಅದು ಒಮ್ಮೆ ನಡೆಸಿದ ತನಿಖೆಯಂತೆ, 180 ದಿನಗಳ ಅವಧಿ ಮೀರಿ ನಿಷ್ಕ್ರಿಯವಾದ ಸಿಮ್‌ಗಳ ಸಂಖ್ಯೆ 55 ಮಿಲಿಯನ್. ಒಟ್ಟಾರೆ 30 ದಿನಕ್ಕೂ ಮೀರಿ ಚಾಲನೆಯಲ್ಲಿಲ್ಲದ 20 ಕೋಟಿ ಸಿಮ್‌ಗಳಲ್ಲಿ ಅಡಗಿದ್ದ ಹಣ 1,289 ಮಿಲಿಯನ್ ರೂ. ದುರಂತವೆಂದರೆ, ಇಂದಿಗೂ ದೇಶದ ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಈ ಹಣದ ಬಗ್ಗೆ ಮುಗುಂ ಆಗಿದೆ. ಬೇರೆ ಅರ್ಥದಲ್ಲಿ ಹೇಳುವುದಾದರೆ, ಈ ಹಣವನ್ನು ಮೊಬೈಲ್ ಸೇವಾದಾತರಿಗೆ ಸೇರಿದ್ದು ಎಂದು ಸಕ್ರಮಗೊಳಿಸಿದೆ. ಇಂತಹ ಹಣ ಗ್ರಾಹಕ ಜಾಗೃತಿಯಂತಹ ವಿಷಯಕ್ಕಾದರೂ ಖರ್ಚಾಗಿದ್ದರೆ ಅದಕ್ಕೊಂದು ನ್ಯಾಯ ಒದಗುತ್ತಿತ್ತಲ್ಲವೇ? ಇದೇ ಮಾತನ್ನು ಬ್ಯಾಂಕ್‌ಗಳಲ್ಲಿ ಬಳಸದೆ ನಿದ್ರಿಸುತ್ತಿರುವ ಉಳಿತಾಯ ಖಾತೆಗಳ ಹಣ, ಅವಧಿ ಪೂರೈಸಿಯೂ ನಗದೀಕರಿಸಿಕೊಳ್ಳದ ಠೇವಣಿಗಳು, ಯಾರದ್ದೆಂದು ನಿರ್ಧರಿಸಲಾಗದೆ-ಯಾರಿಂದಲೂ ಹಕ್ಕು ಚಲಾವಣೆಯಾಗದ ಸಾವಿರಾರು ಕೋಟಿ ಗ್ರಾಹಕರ ಹಣ ಸಂಗ್ರಹವಾಗಿದೆ. ಅದನ್ನೂ ಬಳಕೆದಾರರ ಹಿತ ಕಾಯುವ ವ್ಯವಸ್ಥೆಗಳಿಗೆ ವಿನಿಯೋಗಿಸುತ್ತಿಲ್ಲ. ಇಚ್ಛಾಶಕ್ತಿಗಳಿಲ್ಲದಿದ್ದರೆ ಮಾಡುವುದಾದರೂ ಏನು? ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ