ಬೀದರ: ಪ್ರತಿಯೊಂದು ದೇಶದ ಅರ್ಥ ವ್ಯವಸ್ಥೆಯಲ್ಲಿ ಬ್ಯಾಂಕ್ ಗಳು ಅತಿ ಮಹತ್ವದ ಪಾತ್ರ ನಿವಹಿಸುತ್ತವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಅಕ್ಕಮಹಾದೇವಿ ಬ್ಯಾಂಕಿಗೆ ಪ್ರಸಕ್ತ ವರ್ಷದ
ರಾಜ್ಯ ಸಹಕಾರ ಮಹಾಮಂಡಳದ “ಉತ್ತಮ ಸಹಕಾರ ಸಂಘ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಬ್ಯಾಂಕ್‌ಗಳ ಆರ್ಥಿಕ ಶಕ್ತಿಗೆ ಮಹಿಳಾ ಶಕ್ತಿ ಅವಶ್ಯ. ಪ್ರತಿ ಕ್ಷೇತ್ರ ಯಶಸ್ವಿಯಾಗಲು ಸ್ತ್ರೀಶಕ್ತಿ ಪ್ರಮುಖ ಕಾರಣವಾಗಿದ್ದು,
ಮಹಿಳೆಯರು ಮತ್ತು ಯುವ ಜನರಿಗೆ ಆರ್ಥಿಕ ನೆರವು ನೀಡಿ ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ ಎಂದರು.
ನಿಸ್ವಾರ್ಥ, ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ಮಾಡುವ ಪ್ರತಿಯೊಂದು ಕಾರ್ಯ ಯಶಸ್ವಿಯಾಗುತ್ತದೆ ಎಂಬುದಕ್ಕೆ ಇಲ್ಲಿಯ ಅಕ್ಕಮಹಾದೇವಿ ಪತ್ತಿನ ಸಹಕಾರ ಸಂಘವೇ ನಿದರ್ಶನ ಎಂದು ಹೇಳಿದರು.
ಸಂಘದ ಅಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, 70 ವರ್ಷದ ಇತಿಹಾಸವಿರುವ ಸಾಹಿತ್ಯ ಸಂಘದಲ್ಲಿ ಎರಡು ದಶಕಗಳಿಂದ ಅಕ್ಕಮಹಾದೇವಿ ಸಹಕಾರ ಪತ್ತಿನ ಸಂಘ ಬೆಳೆದು ಹೆಮ್ಮರವಾಗಿದೆ. ಜಿಲ್ಲೆಯ ಬಡ ಕಲಾವಿದರು, ಸಣ್ಣ ವ್ಯಾಪಾರಿಗಳು, ಸಾಹಿತ್ಯಾಸಕ್ತರಿಗೆ ಸಾಲ ನೀಡಿ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿರುವ ವಿಶಿಷ್ಟ ಬ್ಯಾಂಕ್ ಇದಾಗಿದೆ ಎಂದರು.
ಸಂಘದ ಅಧ್ಯಕ್ಷೆ ಸಾವಿತ್ರಿಬಾಯಿ ಹೆಬ್ಟಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಘವು ಈವರೆಗೆ ಹೊರಗಿನಿಂದ ನಯಾ ಪೈಸೆ ಸಾಲ ಪಡೆಯದೇ ಆರ್ಥಿಕ ಸ್ವಾವಲಂಬನೆ ಸಾಧಿಸಿದೆ. ಬ್ಯಾಂಕ್ ಈ ವರ್ಷ 11,83,531 ರೂ. ನಿವ್ವಳ ಲಾಭ ಗಳಿಸಿದೆ. 86,80,818 ರೂ. ದುಡಿಯುವ ಬಂಡವಾಳವಿದ್ದು, 74,57,063 ರೂ. ಠೇವಣಿ ಇಡಲಾಗಿದೆ. 61,12,575 ರೂ. ಸಾಲ ನೀಡಲಾಗಿದೆ ಎಂದರು. ಮಹಾಮಂಡಳ ನಿರ್ದೇಶಕ ಆಕಾಶ ಪಾಟೀಲ ವೇದಿಕೆಯಲ್ಲಿದ್ದರು. ಬ್ಯಾಂಕಿನ ಮುಖ್ಯಅಡಳಿತಾ ಧಿಕಾರಿ ನರೇಶ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.
ಪ್ರೊ| ಎಸ್.ಬಿ.ಬಿರಾದಾರ, ರಾಜಕುಮಾರ ಹೆಬ್ಟಾಳೆ, ಶಿವಾನಂದ ಗುಂದಗಿ, ಶಿವಶರಣಪ್ಪ ಗಣೇಶಪೂರ, ಲಿಂಗಪ್ಪ ಮಡಿವಾಳ್, ಸುರೇಶ ಯಾದವ, ಸುನಿತಾ ಹುಡೇರ್, ಶಾಂತಾಬಾಯಿ ಗುಂದಗಿ, ಇಂದುಮತಿ ಮಾಳಗೆ, ಅಂಬಿಕಾ ಬಿರಾದಾರ ಮತ್ತಿತರರು ಇದ್ದರು. ಉಪಾಧ್ಯಕ್ಷೆ ಕಲಾವತಿ ಬಿರಾದಾರ ಸ್ವಾಗತಿಸಿದರು. ನಿರ್ದೇಶಕಿ ಸುನಿತಾ ಕೂಡ್ಲಿಕರ್ ನಿರೂಪಿಸಿದರು. ಶಾಮಲಾ ಎಲಿ ವಂದಿಸಿದರು.