ಚಾಮರಾಜನಗರ: ರೈತರಿಗೆ ಸರ್ಕಾರದಿಂದ ಬಂದ ಸಬ್ಸಿಡಿ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲದ ಖಾತೆಗೆ ಜಮಾ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ವಿಜಯಾ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದ ಆವರಣದಿಂದ ಬೈಕ್‌ನಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ವಿಜಯ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಸರ್ಕಾರದಿಂದ ಬಂದಂತಹ ಸಬ್ಸಿಡಿ ಹಣವನ್ನು ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೀಡದೆ ಸಾಲದ ಖಾತೆ ಜಮಾ ಮಾಡುವುದು ಖಂಡನೀಯ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದು, ಎಲ್ಲ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದಾರೆ.
ಅಲ್ಲದೆ ರೈತರ ಖಾತೆಗೆ ಬಂದಂತಹ ಹಣವನ್ನು ಸಾಲದ ಖಾತೆ ಜಮಾ ಮಾಡಬಾರದಂತೆ ತಿಳಿಸಿದ್ದಾರೆ. ಆದರೂ ಕೂಡ ಬ್ಯಾಂಕ್ ಅಧಿಕಾರಿಗಳು ರೈತರ ಖಾತೆಗೆ ಬರುವ ಸಬ್ಸಿಡಿ ಹಣವನ್ನು ಜಮಾ ಮಾಡುವ ಮೂಲಕ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರು ಆರೋಪಿಸಿದರು.
ಸರ್ಕಾರ ರೈತರ ಸಾಲದ ಹಣವನ್ನು ಜಮಾ ಮಾಡಲು ಚಿಂತನೆ ನಡೆಸುತ್ತಿದೆ. ತಕ್ಷಣ ಬ್ಯಾಂಕ್ ಅಧಿಕಾರಿಗಳು ರೈತರ ಸಬ್ಸಿಡಿ ಹಣವನ್ನು ಸಾಲದ ಖಾತೆಯಿಂದ ವಾಪಸ್ ತೆಗೆದು ರೈತರಿಗೆ ನೀಡಬೇಕು.
ರೈತರ ಸಾಲಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡುವುದನ್ನು ಕೈ ಬಿಡಬೇಕು. ನೋಟೀಸ್ ನೀಡಬಾರದು. ಎನ್‌ಡಿಸಿ ಕೊಡಲು 100 ರೂ. ಪಡೆಯುವುದನ್ನು ನಿಲ್ಲಿಸಬೇಕು. ರೈತರ ಜತೆ ಗೌರಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬೆಂಬಲ: ಜೂ.17ರಂದು ನಡೆಯುವ ಕರ್ನಾಟಕ ರಾಜ್ಯ ರೈತ ಸಂಘದ ಕೆರೆನೀರು ತುಂಬಿಸುವ ಯೋಜನೆಗೆ ಚಾಲನೆ ಚಳವಳಿಗೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಎಚ್.ಮೂಕಹಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ರೇವಣ್ಣ, ಹೊಮ್ಮ ಮಲ್ಲಣ್ಣ, ಸಿಂಗನಪುರ ಶಿವಸ್ವಾಮಿ, ಮೂಡ್ಲುಪುರ ನಾಗರಾಜು, ಕರಿನಂಜನಪುರದ ಶಿವಣ್ಣ, ಸುಬ್ಬಣ್ಣ, ಶಿವಶಂಕರ ಇತರರು ಭಾಗವಹಿಸಿದ್ದರು.