ಬಸವಕಲ್ಯಾಣ: ರಾತ್ರಿ ವೇಳೆ ಸುರಿದ ಭಾರಿ ಮಳೆಗೆ ಸಣ್ಣಕೆರೆ ಯೊಂದು ಒಡೆದು ಅಪಾರ ಪ್ರಮಾಣದ ಹಾನಿಯಾದ ಘಟನೆ ತಾಲೂಕಿನ ಅಟ್ಟೂರ್ ಗ್ರಾಮದ ಬಳಿ ಮಂಗಳವಾರ ಮಧ್ಯರಾತ್ರಿ ಜರುಗಿದೆ. ತಾಲೂಕಿನ ಕೊಹಿನೂರು ಹೋಬಳಿ ವ್ಯಾಪ್ತಿಯಲ್ಲಿ ಮಧ್ಯರಾತ್ರಿಯಲ್ಲಿ ಸುರಿದ ಭಾರಿ ಮಳೆಗೆ ಅಟ್ಟೂರ ಗ್ರಾಮದ ಸಮೀಪದ ಸಣ್ಣ ಕೆರೆ ಒಡೆದು ಗ್ರಾಮದ ವ್ಯಾಪ್ತಿಯ ಹಲವು ಜನ ರೈತರ ಜಮೀನುಗಳಿಗೆ ನೀರು ನುಗ್ಗಿದೆ.
ಕೆರೆ ನೀರು ಜಮೀನಿಗೆ ನುಗ್ಗಿದ ಪರಿಣಾಮ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಸಹಿತ ಇನ್ನೂ ಮೊಳಕೆ ಒಡೆಯದ ಬಿತ್ತನೆ ಮಾಡಿದ ಬೀಜ ಗೊಬ್ಬರಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿವೆ.
ಕೆರೆ ನೀರು ಹಲವು ರೈತರ ಬಾವಿಗಳಿಗೆ ನುಗ್ಗಿದ ಕಾರಣ ಅಟ್ಟೂರು ಗ್ರಾಮದ ಸುಮಾರು 15ಕ್ಕೂ ಅಧಿಕ ರೈತರ ಬಾವಿಗಳು ಸಂಪೂರ್ಣ ಮುಚ್ಚಿ ಹೋಗಿವೆ. ಕೆರೆ ಒಡೆದ ಪರಿಣಾಮ ಭಾರಿ ರಭಸದಿಂದ ಹರಿದ ನೀರಿನಿಂದಾಗಿ ಅಟ್ಟೂರ ಗ್ರಾಮದಿಂದ ಅಟ್ಟೂರ ತಾಂಡಾಕ್ಕೆ ಸಂಪರ್ಕಿಸುವ ಮಾರ್ಗ ಮಧ್ಯದಲ್ಲಿರುವ ರಸ್ತೆ ಸೇತುವೆ ಒಂದು ಸಂಪೂರ್ಣವಾಗಿ ಒಡೆದು ಕೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಹೀಗಾಗಿ ತಾಂಡಾದ ನಿವಾಸಿಗಳು ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದಾರೆ.
ಅಟ್ಟೂರ ಸೇರಿದಂತೆ ಕೋಹಿನೂರ್ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಗಂಡೂರಿ ನಾಲಾ ಸೇರಿದಂತೆ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತಿದ್ದು, ಹಳ್ಳಗಳ ನೀರು ಸಹ ರೈತರ ಜಮೀನುಗಳಿಗೆ ನುಗ್ಗಿವೆ.
ಜಮೀನಿನಲ್ಲಿ ಇರುವ ವಿದ್ಯುತ್ ಕಂಬಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಟ್ಟೂರ ಸೇರಿದಂತೆ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕೆರೆ ಒಡೆದಿರುವ ಸುದ್ದಿ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಕುರಿತು ಸಮೀಕ್ಷೆ ನಡೆಸುತ್ತಿದ್ದಾರೆ. ಕೋಹಿನೂರ್ ಹೊಬಳಿ ವ್ಯಾಪ್ತಿಯಲ್ಲಿ 180 ಮಿ.ಮಿ. ಮಳೆ ಸುರಿದಿದೆ ಎಂದು ತಿಳಿದು ಬಂದಿದೆ. ಮಧ್ಯರಾತ್ರಿಯಲ್ಲಿ ಆಕಸ್ಮಿಕವಾಗಿ ಕೆರೆ ಒಡೆದು ರೈತರಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಧನ ಕಲ್ಪಿಸಿ ಕೊಡಬೇಕು ಎಂದು ಗ್ರಾಮದ ರೈತರು ಒತ್ತಾಯಿಸಿದ್ದಾರೆ.