ಈಗಾಗಲೇ ಕನ್ನಡದಲ್ಲಿ “ರಂಗಿತರಂಗ’, “ಅವನೇ ಶ್ರೀಮನ್ನಾರಾಯಣ’, “ಸ್ಫೂಕಿ ಕಾಲೇಜ್’ ಮೊದಲಾದ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಹೆಚ್. ಕೆ. ಪ್ರಕಾಶ್, ಈ ಬಾರಿ ಮತ್ತೆ ಹೊಸ ತಂಡದೊಂದಗೆ ಹಾಸ್ಯ ಪ್ರಧಾನ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದಾರೆ.
ಅಂದಹಾಗೆ, ಈ ಸಿನಿಮಾಕ್ಕೆ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಎಂದು ಹೆಸರಿಡಲಾಗಿದ್ದು, “ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಜೊತೆ “ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, “ಬಹುಪರಾಕ್’ ಮತ್ತು “ಆಪರೇಷನ್ ಅಲಮೇಲಮ್ಮ’ ಮೊದಲಾದ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗೂ ಕೆಲ ಸಿನೆಮಾಗಳಿಗೆ ಸಂಕಲನಕಾರನಾಗಿಯೂ ಕೆಲಸ ಮಾಡಿದ ಅನುಭವವಿರುವ ಅಭಿಷೇಕ್ ಎಂ. “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾದ ಮೂಲಕ ಚೊಚ್ಚಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ.
ಇನ್ನು ಬ್ಯಾಂಕ್‌ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾದಲ್ಲಿ ಬಹುದೊಡ್ಡ ನವ ತಾರಾಗಣವಿದೆ. ನಾಯಕ ದೀಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ ಬೃಂದಾ ಆಚಾರ್ಯ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಅಶ್ವಿನ್ ರಾವ್, ಶ್ರೀವತ್ಸ, ಶ್ರೇಯಸ್ ಶರ್ಮಾ, ವಿನುತ ಮತ್ತಿತರರು ಈ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈಗಾಗಲೇ ಸದ್ದಿಲ್ಲದೆ ಬೆಂಗಳೂರು ಹಾಗೂ ಚಿತ್ರದುರ್ಗ ಸುತ್ತಮುತ್ತ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಜನವರಿ ಮೊದಲ ವಾರದ ಬಳಿಕ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಂಡಿದೆ.
ಅಂದಹಾಗೆ, “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾವನ್ನು ಕನ್ನಡ ಜೊತೆಗೆ ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ತೆರೆಮೇಲೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.