ನವದೆಹಲಿ: ಜಲಾವೃತಗೊಂಡಿದ್ದ ಅಂಡರ್ ಪಾಸ್ ನೊಳಗೆ ಎಸ್ ಯುವಿ (SUV) ಕಾರು ಚಲಾಯಿಸಿದ ಪರಿಣಾಮ ಬ್ಯಾಂಕ್ ಮ್ಯಾನೇಜರ್ ಮತ್ತು ಕ್ಯಾಶಿಯರ್ ಉಸಿರುಗಟ್ಟಿ ಕೊನೆಯುಸಿರೆಳೆದಿರುವ ಘಟನೆ ದೆಹಲಿಯ ಫರಿದಾಬಾದ್ ನಲ್ಲಿ ಶುಕ್ರವಾರ (ಸೆ.13) ನಡೆದಿದೆ.
ದೆಹಲಿ ಮತ್ತು ನ್ಯಾಷನಲ್ ಕ್ಯಾಪಿಟಲ್ ರೀಜನ್(NCR)ನಲ್ಲಿ ನಿರಂತರ ಮಳೆಯಿಂದಾಗಿ ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಗುರುಗ್ರಾಮ್ ಸೆಕ್ಟರ್ 31ರ ಎಚ್ ಡಿಎಫ್ ಸಿ ಬ್ಯಾಂಕ್ ಮ್ಯಾನೇಜರ್ ಪುಣ್ಯಶ್ರೇಯ ಶರ್ಮಾ ಮತ್ತು ಕ್ಯಾಶಿಯರ್ ವಿರಾಜ್ ದ್ವಿವೇದಿ ಎಕ್ಸ್ ಯುವಿಯಲ್ಲಿ ಮನೆಗೆ ತೆರಳುತ್ತಿದ್ದರು. ಅವರು ಹಳೇ ಫರಿದಾಬಾದ್ ರೈಲ್ವೆ ಅಂಡರ್ ಪಾಸ್ ತಲುಪಿದಾಗ, ನೀರು ತುಂಬಿಕೊಂಡಿರುವುದು ಕಂಡಿದ್ದು, ಅದು ಎಷ್ಟು ಪ್ರಮಾಣದ ನೀರು ಎಂಬುದನ್ನು ಊಹಿಸಲು ಅವರು ವಿಫಲರಾಗಿದ್ದರು ಎಂದು ತಿಳಿಸಿದ್ದಾರೆ.
ಅಂಡರ್ ಪಾಸ್ ನೊಳಗೆ ಬರುತ್ತಿದ್ದಂತೆಯೇ ಕಾರು ಮುಳುಗಿತ್ತು. ಇಬ್ಬರೂ ಹೊರಬರಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ನೀರು ಭಾರೀ ಪ್ರಮಾಣದಲ್ಲಿ ಇದ್ದಿದ್ದರಿಂದ ನೀರಿನೊಳಗೆ ಉಸಿರುಗಟ್ಟಿ ಕೊನೆಯುಸಿರೆಳೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ಶುಕ್ರವಾರ ಎನ್ ಸಿಆರ್ ನ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಮಳೆ ಶನಿವಾರವೂ ಮುಂದುವರಿದಿದ್ದು, ಕೆಲವೆಡೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.