ಬೆಂಗಳೂರು: ಮದ್ಯದ ಅಮಲಲ್ಲಿ ಅಪಾರ್ಟ್ ಮೆಂಟ್ ಗೇಟ್ ನೆಗೆದು ಒಳಪ್ರವೇಶಿಸಿದ ಬ್ಯಾಂಕ್ ಮ್ಯಾನೆಜರ್‌ನನ್ನು ಕಳ್ಳನೆಂದು ಭಾವಿಸಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಕೊಲೆಗೈದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಎಚ್ ಎಎಲ್ ಪೊಲೀಸರು ಬಂಧಿಸಿದ್ದಾರೆ.
ಎಚ್‌ಎಎಲ್‌ನ ಆನಂದನಗರ ನಿವಾಸಿ ಶ್ಯಾಮನಾಥ್ ರೇ (24) ಮತ್ತು ಅಜಿತ್ ಮುರಾ (24) ಬಂಧಿತರು.
ಆರೋಪಿಗಳು ಜು.5ರಂದು ಮಾರತ್ತಹಳ್ಳಿಯ ಆನಂದನಗರದ ವಂಶಿ ಸಿಟಾಡೆಲ್ ಅಪಾರ್ಟ್‌ಮೆಂಟ್‌ನಲ್ಲಿ ಮುಂಜಾನೆ ಒಡಿಶಾ ಮೂಲದ ಬ್ಯಾಂಕ್ ಉದ್ಯೋಗಿ ಅಬಿನಾಶ್ ಪತಿ(27) ಎಂಬಾತನನ್ನು ರಾಡ್‌ನಿಂದ ಹಲ್ಲೆಗೈದು ಹತ್ಯೆ ಮಾಡಿದ್ದರು. ಈ ಕುರಿತು ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಒಡಿಶಾ ಮೂಲದ ಅಭಿನಾಶ್ ಪತಿ ಛತ್ತಿಸ್ ಘಡ ಇಸಾಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ವ್ಯವಸ್ಥಾಪಕರಾಗಿದ್ದು, ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದ. ಜು. 4ರಂದು ರಾತ್ರಿ ಮಾರತ್ತಹಳ್ಳಿಯ ಬಾರ್‌ವೊಂದರಲ್ಲಿ ಸ್ನೇಹಿತರೊಂದಿಗೆ ಕಂಠಪೂರ್ತಿ ಕುಡಿದು, ಬಳಿಕ ತಾನೂ ವಾಸವಾಗಿದ್ದ ಮನೆಯ ವಿಳಾಸವನ್ನು ಮೊಬೈಲ್‌ನಲ್ಲಿ ಸ್ನೇಹಿತರಿಗೆ ಕೇಳಿಕೊಂಡು ನಡೆದುಕೊಂಡು ಬರುವಾಗ, ಮಾರ್ಗ ಮಧ್ಯೆ ಮೊಬೈಲ್ ಸ್ವಿಚ್ಛ್ ಆಫ್ ಆಗಿದೆ.
ಮುಂಜಾನೆ 2 ಗಂಟೆ ಸುಮಾರಿಗೆ ಮದ್ಯದ ಅಮಲಿನಲ್ಲಿದ್ದ ಅಬಿನಾಶ್ ಸ್ನೇಹಿತನ ಮನೆಗೆ ತೆರಳುವ ಬದಲು ಆನಂದನಗರದ ವಂಶಿ ಸಿಟಾಡೆಲ್ ಅಪಾರ್ಟ್ ಮೆಂಟ್ ಗೇಟ್ ಎಗರಿ ಒಳ ಪ್ರವೇಶಿಸಿದ್ದಾನೆ. ಆಗ ಭದ್ರತಾ ಸಿಬ್ಬಂದಿ ಶ್ಯಾಮನಾಥ್ ರೇ ಮತ್ತು ಆತನ ಸ್ನೇಹಿತ ಅಜಿತ್ ಮುರಾ ಅಪರಿಚಿತ ವ್ಯಕ್ತಿ ಅಬಿನಾಶ್‌ನನ್ನು ಕಂಡು “ನೀನು ಯಾರು? ಇಲ್ಲಿಗೇಕೆ ಬಂದೆ? ನಿನ್ನ ಹೆಸರೇನು? ಐಡಿ ಕಾರ್ಡ್ ತೋರಿಸು’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಚಡ್ಡಿ ಧರಿಸಿದ್ದ ಅಬಿನಾಶ್ ಮದ್ಯದ ಅಮಲಿನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳ ಯಾವುದೇ ಪ್ರಶ್ನೆಗೆ ಸರಿಯಾಗಿ ಉತ್ತರಿಸಿಲ್ಲ. ಹೀಗಾಗಿ ಅನುಮಾನಗೊಂಡ ಭದ್ರತಾ ಸಿಬ್ಬಂದಿಗಳು ಕಳ್ಳನಿರಬಹುದು ಎಂದು ಭಾವಿಸಿ, ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದು ಅಬಿನಾಶ್ ತಲೆಗೆ ಬಲವಾಗಿ ಹೊಡೆದಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ 20 ವರ್ಷ ಸಜೆ
ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ರಕ್ತಸ್ರಾವವಾಗಿ ಅಬಿನಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಅಬಿನಾಶ್ ನನ್ನು ಎಚ್ಚರಗೊಳಿಸಲು ಯತ್ನಿಸಿದ್ದಾರೆ. ಆದರೆ, ಆತ ಮೃತಪಟ್ಟಿದ್ದು, ಸೆಕ್ಯೂರಿಟಿ ಗಾರ್ಡ್‌ಗಳು ಸ್ಥಳದಿಂದ ಪರಾರಿಯಾಗಿದ್ದರು. ಮುಂಜಾನೆ ಐದು ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್ ನಿವಾಸಿಗಳು ವಾಯುವಿಹಾರಕ್ಕೆ ಬಂದಾಗ ಅಬಿನಾಶ್ ಸಾವು ಬೆಳಕಿಗೆ ಬಂದಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರನ್ನು ವಿಚಾರಣೆ ನಡೆಸಿದ್ದಾರೆ. ನಂತರ ಸಿಸಿಕ್ಯಾಮೆರಾ ಪರಿಶೀಲಿಸಿದಾಗ ಕೃತ್ಯ ಬಯಲಾಗಿದೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.