Advertisement

ಕನ್ನಡದಲ್ಲೇ ಬ್ಯಾಂಕ್‌ ಪರೀಕ್ಷೆ ನಡೆಸಿ

11:28 AM Sep 09, 2017 | Team Udayavani |

ನವದೆಹಲಿ: ಎಲ್ಲೆಲ್ಲೂ ಕನ್ನಡ ಮೊಳಗಿಸಲು ಪಣ ತೊಟ್ಟಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬ್ಯಾಂಕಿಂಗ್‌ ನೇಮಕಾತಿಯಲ್ಲೂ ಕನ್ನಡದವರಿಗೇ ಹೆಚ್ಚಿನ ಅವಕಾಶ ನೀಡುವಂತೆ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರನ್ನು ಒತ್ತಾಯಿಸಿದೆ. 

Advertisement

ಈ ಸಂಬಂಧ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಜೇಟ್ಲಿ ಅವರನ್ನು ಭೇಟಿ ಮಾಡಿದ ನಿಯೋಗ, ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದೆ. ಸದ್ಯ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಆರ್‌ಆರ್‌ಬಿ ಪರೀಕ್ಷೆ ಬರೆಯಲು ಅವಕಾಶವಿದೆ.

ಇದಲ್ಲದೇ, ಈ ಹಿಂದೆ ಆರ್‌ಆರ್‌ಬಿ ಪರೀಕ್ಷೆ ವೇಳೆ 10ನೇ ತರಗತಿ ವರೆಗೆ ಸ್ಥಳೀಯ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅಥವಾ ಪದವಿ ಪಡೆದವರನ್ನು ಪರಿಗಣಿಸಲಾಗುತ್ತಿತ್ತು. ಆದರೆ, ಕಳೆದ ಜುಲೈನಲ್ಲಿ ಈ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, 8ನೇ ತರಗತಿವರೆಗೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಅಥವಾ ನೇಮಕವಾದ ಬಳಿಕ ಸ್ಥಳೀಯ ಭಾಷೆ ಕಲಿಯಲು ಆರು ತಿಂಗಳ ಅವಕಾಶ ಮಾಡಿಕೊಡಲಾಗಿದೆ.

ಈ ನಿಯಮದಿಂದಾಗಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರೆಯಲ್ಲ ಎಂದು ಈ ನಿಯೋಗ ಹೇಳಿದೆ. ಹೀಗಾಗಿ ಇನ್ನು ಮುಂದೆ ಸ್ಥಳೀಯ ಭಾಷೆಯನ್ನು ಕಲಿತವರಿಗೆ ಮಾತ್ರ ಆರ್‌ಆರ್‌ಬಿ ನೇಮಕಾತಿ ವೇಳೆ ಪರಿಗಣಿಸಬೇಕು. ಹಿಂದಿನ ಅರ್ಹತಾ ನಿಯಮಾವಳಿಗಳನ್ನೇ ಮತ್ತೆ ಜಾರಿಗೆ ತರಬೇಕು ಎಂದು ಎಸ್‌.ಜಿ.ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. 

ಬದಲಾದ ನಿಯಮಾವಳಿಗಳಿಂದಾಗಿ ಕಳೆದ ವರ್ಷ ಪರೀಕ್ಷೆ ಬರೆದ 7000 ಮಂದಿಯಲ್ಲಿ ಕೇವಲ 300 ಕನ್ನಡಿಗರಿಗೆ ಮಾತ್ರ ನೇಮಕಾತಿಯ ಅವಕಾಶ ಸಿಕ್ಕಿತು. ಈ ಬಾರಿ 9,000 ಮಂದಿ ಪರೀಕ್ಷೆ ಬರೆಯಲಿದ್ದು, ಬೇರೆ ರಾಜ್ಯದವರೇ ಹೆಚ್ಚಾಗಿ ಆಯ್ಕೆಯಾಗುವ ಸಂಭವವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಈ ದೋಷಪೂರಿತ ಭಾಷಾ ನೀತಿಯಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 30,000 ಖಾಲಿ ಹುದ್ದೆ ನಿರ್ಮಾಣವಾಗಲಿವೆ. ಅಲ್ಲದೆ ರಾಜ್ಯದಲ್ಲೂ ಭಾರಿ ಪ್ರಮಾಣದ ನಿರುದ್ಯೋಗ ಸಮಸ್ಯೆ ಕಾಣಿಸಿಕೊಳ್ಳಲಿದೆ. ಅಲ್ಲದೆ ಸದ್ಯ ಇರುವ ನೀತಿಯೇ ಮುಂದುವರಿದರೆ ಬೇರೆ ರಾಜ್ಯದವರಿಗೇ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ ಎಂದಿದ್ದಾರೆ. 

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಆರ್ಥಿಕ ಒಳಗೊಳ್ಳುವಿಕೆಗೆ ಸಮರ್ಥ ಮಾರ್ಗವಾಗಿದೆ. ಆದರೆ ಇದರಲ್ಲಿ ಸ್ಥಳೀಯ ಭಾಷೆ ಗೊತ್ತಿಲ್ಲದವರು ಬಂದು ಸೇರಿಕೊಂಡರೆ ಹಳ್ಳಿಗಳಲ್ಲಿ ಬ್ಯಾಂಕ್‌ ವ್ಯವಹಾರ ಕಷ್ಟಕರವಾಗಲಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುವುದಲ್ಲದೇ, ಅಮೂಲ್ಯ ಮಾನವ ಸಂಪನ್ಮೂಲವೂ ವ್ಯರ್ಥವಾಗಲಿದೆ ಎಂದರು.

ಈ ವರ್ಷದಿಂದಲೇ ಯುಪಿಎಸ್‌ಸಿ ಸೇರಿದಂತೆ ಇತರೆ ಕೇಂದ್ರ ಪರೀಕ್ಷಾ ಪ್ರಾಧಿಕಾರಗಳಲ್ಲಿ ಇರುವ ಹಾಗೆ, ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಆದರೆ ಆರ್‌ಆರ್‌ಬಿ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲು ಆಸ್ಪದ ಕೊಡಲಾಗುತ್ತಿದೆ.

ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ ಎಂದರು. ನಿಯೋಗದಲ್ಲಿ ಖ್ಯಾತ ಬರಹಗಾರರಾದ ಎಸ್‌.ಎಲ್‌.ಬೈರಪ್ಪ, ಚಂದ್ರಶೇಖರ ಕಂಬಾರ, ಸಿದ್ದಲಿಂಗಯ್ಯ, ಬಿ.ಟಿ.ಲಲಿತಾ ನಾಯಕ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಹಾಗೂ ಎಸ್‌ಬಿಐ ಮತ್ತು ಆರ್‌ಬಿಐನ ನಿವೃತ್ತ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next