Advertisement

ಹಳೆ ಗೆಳೆಯರು ಮತ್ತೆ ನೇರಾನೇರ! ತ್ರಿಕೋನ ಸ್ಪರ್ಧೆ ನೀಡ್ತಾರಾ ಹಾದಿಮನಿ?

02:51 PM Oct 13, 2020 | sudhir |

ಬಾಗಲಕೋಟೆ : ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಗಳಲ್ಲಿ ಅತ್ಯಂತ ಪ್ರತಿಷ್ಠೆ ಹಾಗೂ ತುರುಸಿನಿಂದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಗಳಿಂದ ಆಯ್ಕೆಯಾಗುವ ಕ್ಷೇತ್ರವೂ ಒಂದು. ಈ ಬಾರಿಯೂ ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಕಳೆದ ಬಾರಿಯಂತೆ ಹಳೆಯ ಗೆಳೆಯರ ಫೈಟ್‌ ನೇರಾನೇರವಾಗಲಿದೆ.

Advertisement

ಕೆಡ್ರಿಟ್‌ ಕೋ ಆಪರೇಟಿವ್‌ ಸೊಸೈಟಿ (ಪಟ್ಟಣ ಪತ್ತಿನ ಸಹಕಾರಿ ಸಂಘಗಳು/ಬಿನ್‌ ಶೇತ್ಕಿ) ಕ್ಷೇತ್ರದಡಿ 358 ಸೊಸೈಟಿಗಳಿವೆ. ಅದರಲ್ಲಿ 12 ಸೊಸೈಟಿಗಳು ಮತದಾನದ ಹಕ್ಕು ಹೊಂದಿಲ್ಲ. ಅಲ್ಲದೇ ಸದ್ಯದ ಪ್ರಕ್ರಿಯೆ ಪ್ರಕಾರ ಆರು ತಾಲೂಕು ವ್ಯಾಪ್ತಿಯ 171 ಸಂಘಗಳು ಅರ್ಹ ಮತ್ತು 175 ಅನರ್ಹ ಮತದಾರರ ಪಟ್ಟಿಯಲ್ಲಿವೆ. ಅನರ್ಹ ಪಟ್ಟಿಗೆ ಸೇರಿದ ಸೊಸೈಟಿಗಳ ಆಡಳಿತ
ಮಂಡಳಿಗಳು, ಕೋರ್ಟ್‌ ಮೂಲಕ ಮತದಾನ ಹಕ್ಕು ಪಡೆಯಲು ಮುಂದಾಗಿದ್ದು, ಅಂತಿಮವಾಗಿ ಮತದಾನ ಹಕ್ಕು ಹೊಂದಿದ ಸೊಸೈಟಿಗಳು ಅ.14ರಂದು ಗೊತ್ತಾಗಲಿವೆ.

ಇದನ್ನೂ ಓದಿ:ಫೋರ್ಬ್ಸ್ ಪಟ್ಟಿಯಲ್ಲಿ ಬೆಳಗಾವಿಯ ಶ್ರೀಶೈಲ ಧನವಡೆಗೆ ಸ್ಥಾನ

ಕಳೆದ ಬಾರಿ ತ್ರಿಕೋನ ಸ್ಪರ್ಧೆ: ಈ ಕ್ಷೇತ್ರದಿಂದ ಕಳೆದ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆಗ ಕಾಂಗ್ರೆಸ್‌ ಬೆಂಬಲಿತರಾಗಿ ಶತಮಾನದ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಜೆಪಿ ಬೆಂಬಲದಿಂದ ಇಳಕಲ್ಲನ ಅರವಿಂದ ಮಂಗಳೂರ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಲೋಕಾಪುರದ ಶಿವಾನಂದ ಉದಪುಡಿ ಸ್ಪರ್ಧಿಸಿದ್ದರು. ಅತ್ಯಂತ ಪ್ರತಿಷ್ಠೆಯಿಂದ ನಡೆದಿದ್ದ ಈ ಚುನಾವಣೆಯಲ್ಲಿ ಆಗ, ಒಟ್ಟು 246 ಮತಗಳಲ್ಲಿ ಶಿವಾನಂದ ಉದಪುಡಿ ಅವರು 171 ಮತ ಪಡೆದು ಆಯ್ಕೆಗೊಂಡಿದ್ದರು. 2ನೇ ಸ್ಥಾನದಲ್ಲಿದ್ದ ಪ್ರಕಾಶ ತಪಶೆಟ್ಟಿ ಹಾಗೂ ಆಯ್ಕೆಗೊಂಡ ಉದಪುಡಿ ಅವರ ಮಧ್ಯೆ 75 ಮತಗಳ ಗೆಲುವಿನ ಅಂತರವಿತ್ತು. ಉದಪುಡಿ ಅವರು ಆಯ್ಕೆಗೊಂಡ ಬಳಿಕ ಕಾಂಗ್ರೆಸ್‌ ಗೆ ಬೆಂಬಲ ನೀಡಿ ಐದು ವರ್ಷ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರೂ ಆಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಮುದ್ದೇಬಿಹಾಳ ಬಟ್ಟೆ ಅಂಗಡಿ ದರೋಡೆ ತಡೆದ ಗೂರ್ಖಾಗೆ ಪೊಲೀಸ್ ಸನ್ಮಾನ

Advertisement

ಈ ಬಾರಿ ತದ್ವಿರುದ್ಧ: ಈ ಕ್ಷೇತ್ರದ ಚುನಾವಣೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತದ್ವಿರುದ್ಧವಾಗಿದೆ. ಆಗ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿದ್ದ ಉದಪುಡಿ ಅವರೀಗ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗುತ್ತಿದ್ದಾರೆ. ಆಗ ಕಾಂಗ್ರೆಸ್‌ನಿಂದ
ಸ್ಪರ್ಧಿಸಿದ್ದ ಪ್ರಕಾಶ ತಪಶೆಟ್ಟಿ ಅವರು ಈಗ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗುತ್ತಿದ್ದು, ಬಾದಾಮಿಯ ಗ್ಲೋಬಲ್‌ ಪತ್ತಿನ ಸಹಕಾರಿ ಸಂಘದ ರಮೇಶ ಹಾದಿಮನಿ ಅವರು ಬಿಜೆಪಿಗೆ ಬಂಡಾಯ ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿವೆ. ಯುವ
ಮುಖಂಡ ಹಾದಿಮನಿ ಅವರು ಸ್ಪರ್ಧಿಸದಂತೆ ಮನವೊಲಿಸುವ ಕಾರ್ಯ ಪಕ್ಷದ ಹಿರಿಯರಿಂದ ನಡೆಯುತ್ತಿದೆ. ಅಲ್ಲದೇ ಕಳೆದ ಬಾರಿ ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿಯಾಗಿದ್ದ ಇಳಕಲ್ಲನ ಅರವಿಂದ ಮಂಗಳೂರ ಅವರು ಈ ಬಾರಿ ಪ್ರಕಾಶ ತಪಶೆಟ್ಟಿ ಅವರಿಗೆ ಬೆಂಬಲ ನೀಡಿದ್ದು, ಅವರೊಂದಿಗೆ ಪ್ರಚಾರದಲ್ಲೂ ತೊಡಗಿದ್ದಾರೆ. ಹೀಗಾಗಿ ತಪಶೆಟ್ಟಿ ಅವರಿಗೆ ಈ ಬಾರಿ ಒಂದಷ್ಟು ಉತ್ತಮ ವಾತಾವರಣ ಈ ಕ್ಷೇತ್ರದಲ್ಲಿದೆ ಎನ್ನಲಾಗಿದೆ.

ಇದು ಪಕ್ಕಾ ಹಣ ಬಲದ ಕ್ಷೇತ್ರ: ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಗಳ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್‌ಗೆ ಆಯ್ಕೆಯಾಗಲು ಪಕ್ಷದ ಬಲ, ಹಿರಿಯ ಸಹಕಾರಿಗಳ ಸಹಕಾರ ಜತೆಗೆ ಹಣ ಬಲವೂ ಬೇಕು. ಕಳೆದ ಬಾರಿ ಹಣ ಹರಿದಾಡಿತೆಂಬ ಮಾತು ಬಲವಾಗಿ
ಕೇಳಿ ಬಂದಿತ್ತು. ಆಗ ಡಿಸಿಸಿ ಬ್ಯಾಂಕ್‌ನ ಹಾಲಿ ನಿರ್ದೇಶಕರಾಗಿದ್ದು, ಕಾಂಗ್ರೆಸ್‌ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಪ್ರಕಾಶ ತಪಶೆಟ್ಟಿ ಅವರು ಗೆಲುವಿನ ಅತ್ಯಂತ ವಿಶ್ವಾಸದಲ್ಲಿದ್ದರು. ಆದರೆ, ಫಲಿತಾಂಶ ಸಂಪೂರ್ಣ ಉಲ್ಟಾ ಆಗಿತ್ತು. 75 ಮತಗಳ ಅಂತರದಿಂದ ಅವರು ಪರಾಭವಗೊಳ್ಳಲು ಹಣ ಬಲವೇ ಕಾರಣವೆಂಬ ದೂರು ಕೇಳಿ ಬಂದಿತ್ತು.

ಇದನ್ನೂ ಓದಿ:ಡೆಲ್ಲಿ ಅಂತಿಮ ಸ್ಕೋರ್‌ ಮೊದಲೇ ನಿಗದಿ?! ಐಪಿಎಲ್ ನಲ್ಲಿ ಮತ್ತೆ ಫಿಕ್ಸಿಂಗ್ ಶಂಕೆ!

ಪರಸ್ಪರ ಸಹಕಾರ: ಈ ಕ್ಷೇತ್ರದಲ್ಲಿ ಯಾವ ನಾಯಕರು, ಯಾರ ಪರವಾಗಿ ಕೆಲಸ ಮಾಡುತ್ತಾರೆ ಎಂಬುದೇ ದೊಡ್ಡ ಕುತೂಹಲ. ಮೇಲ್ನೋಟಕ್ಕೆ ಪಕ್ಷದ ಬೆಂಬಲದೊಂದಿಗೆ ಸ್ಪರ್ಧಿಸಿದ್ದರೂ, ಆ ಪಕ್ಷದ ನಾಯಕರು ಈ ಪಕ್ಷದವರಿಗೆ, ಇವರು ಆ ಪಕ್ಷದ ಅಭ್ಯರ್ಥಿಗೆ ಬೆಂಬಲ ಕೊಡುವುದು ಕಳೆದ ಬಾರಿಯ ಚುನಾವಣೆಯಲ್ಲೇ ಬಹಿರಂಗಗೊಂಡಿತ್ತು. ಈ ಬಾರಿ ಜೆಡಿಎಸ್‌ ಕೂಡ ಈ ಕ್ಷೇತ್ರಕ್ಕೆ ತನ್ನ ಬೆಂಬಲಿತ ಅಭ್ಯರ್ಥಿ ಹಾಕಲು ಚರ್ಚೆ ನಡೆಸಿದ್ದು, ಶಿವಪ್ರಸಾದ ಗದ್ದಿ ಅವರ ಹೆಸರು ಕೇಳಿ ಬರುತ್ತಿದೆ.

ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧಿಸಿರುವ ತಪಶೆಟ್ಟಿ ಅವರು, ಕಳೆದ ಬಾರಿಯ ನಿರ್ಲಕ್ಷ್ಯ ತಿದ್ದಿಕೊಂಡು, ವ್ಯವಸ್ಥಿತ ಚುನಾವಣೆ ನಡೆಸುತ್ತಿದ್ದಾರೆ. ಹಾಗೆಯೇ ಅವರಿಗೆ ನೇರ ಪೈಪೋಟಿ ನೀಡುತ್ತಿರುವ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿದ್ದ ಶಿವಾನಂದ ಉದಪುಡಿ
ಕೂಡ ಐದು ವರ್ಷಗಳಿಂದ ಎಲ್ಲ ಸೊಸೈಟಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಜತೆಗೆ ಈಗಾಗಲೇ ಎರಡು ಸುತ್ತಿನ ಸೊಸೈಟಿಗಳ ಭೇಟಿ ಪೂರ್ಣಗೊಳಿಸಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ನಡೆದರೂ ಬಿಜೆಪಿಯ ತಪಶೆಟ್ಟಿ ಹಾಗೂ ಕಾಂಗ್ರೆಸ್‌ನ
ಉದಪುಡಿ ಅವರ ಮಧ್ಯೆವೇ ನೇರಾನೇರ ಪೈಪೋಟಿ ನಡೆಯಲಿದೆ.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next