ಉಡುಪಿ: ಹಬ್ಬಗಳ ಆಚರಣೆ ಸಂದರ್ಭ ಹೊಸ ಬಗೆಯ ಚಿನ್ನ, ವಾಹನ, ಇನ್ನಿತರ ಅವಶ್ಯ ಗೃಹೋಪಕರಣಗಳನ್ನು ಖರೀದಿಸುವುದು ರೂಢಿ. ಅಂತೆಯೇ ಪ್ರತಿಯೊಬ್ಬರಿಗೂ ಸ್ವಂತ ವಾಹನ ಖರೀದಿಸಬೇಕೆನ್ನುವ ಕನಸು ಇದ್ದೇ ಇರುತ್ತದೆ. ಈ ಕನಸನ್ನು ನನಸಾಗಿಸಲು ಸಿಂಡಿಕೇಟ್ ಬ್ಯಾಂಕ್ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ, ಸುಲಭವಾಗಿ ಸಾಲ ಸೌಲಭ್ಯ ನೀಡಿ ವಾಹನ ಖರೀದಿಗೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದು ಮಣಿಪಾಲದ ಡಾ| ಟಿಎಂಎ ಪೈ ಫೌಂಡೇಶನ್ ಕಾರ್ಯದರ್ಶಿ ಟಿ. ಅಶೋಕ್ ಪೈ ಅಭಿಪ್ರಾಯಪಟ್ಟರು.
ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ -1 ಮತ್ತು 2ರ ವತಿಯಿಂದ ಹಬ್ಬಗಳ ಸೀಸನ್ ಪ್ರಯುಕ್ತ ಅ. 12, 13ರ ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜಿಸ ಲಾದ “ಸಿಂಡ್ ವಾಹನ ಮೇಳ’ವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ಕಚೇರಿಯ ಮಹಾಪ್ರಬಂಧಕರಾದ ಎಸ್.ಎಸ್. ಹೆಗ್ಡೆ, ಗಿರಿಧರ್ ವಿ.ಎಂ. ಮಾತನಾಡಿ, ಸಿಂಡ್ ಬ್ಯಾಂಕ್ ವತಿಯಿಂದ 3 ವರ್ಷಗಳಿಂದ ಆಯೋಜಿಸುತ್ತಿದ್ದ ವಾಹನ ಮೇಳದ ಮೂಲಕ ಸಾಕಷ್ಟು ವಾಹನಗಳ ಖರೀದಿಯಾಗಿದೆ. ಗ್ರಾಹಕರು ಸ್ವತಃ ಪರೀಕ್ಷಿಸಿ, ತಮ್ಮ ಮನಸ್ಸಿಗೆ ಇಷ್ಟವಾದ ವಾಹನ ಖರೀದಿಸಲು ಇದೊಂದು ಸದವಕಾಶ ಎಂದರು.
ಬ್ಯಾಂಕಿನ ಪ್ರಾದೇಶಿಕ ಕಚೇರಿ ಉಡುಪಿ-2ರ ಕ್ಷೇತ್ರೀಯ ಪ್ರಬಂಧಕ ರಾಮ ನಾಯ್ಕ ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ-1ರ ಕ್ಷೇತ್ರೀಯ ಪ್ರಬಂಧಕಿ ಸುಜಾತಾ ಸ್ವಾಗತಿಸಿದರು. ಹಿರಿಯ ಶಾಖಾ ಪ್ರಬಂಧಕಿ ಅರ್ಚನಾ ನಿರೂಪಿಸಿ, ಲೀಡ್ ಬ್ಯಾಂಕ್ ಪ್ರಬಂಧಕ ರುದ್ರೇಶ್ ವಂದಿಸಿದರು.
ಪ್ರಮುಖ ಕಾರು ಕಂಪೆನಿಗಳಾದ ಬಿಎಂಡಬ್ಲೂ, ಹೋಂಡಾ, ಹ್ಯುಂಡೈ, ಮಾರುತಿ, ನೆಕ್ಸಾ, ಫೋರ್ಡ್, ರೆನಾಲ್ಟ್, ಸ್ಕೋಡಾ, ಟೊಯಟಾ, ಮಹೀಂದ್ರಾ, ಇಸುಝು, ದ್ವಿಚಕ್ರವಾಹನ ಕಂಪೆನಿ ರೋಯಲ್ ಎನ್‌ಫೀಲ್ಡ್ ಮೇಳದಲ್ಲಿ ಭಾಗವಹಿಸಿ ವಾಹನ ಪ್ರದರ್ಶನ ನಡೆಸಿದವು.
16 ಕೋ.ರೂ. ಸಾಲ ವಿತರಣೆ ಗುರಿ
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ವಲಯ ಪ್ರಬಂಧಕ ಭಾಸ್ಕರ ಹಂದೆ ಮಾತನಾಡಿ, ಕಳೆದ ವರ್ಷ ನಡೆದ ವಾಹನ ಮೇಳದ ಮೂಲಕ 130 ವಾಹನಗಳಿಗೆ ಸುಮಾರು 8 ಕೋ.ರೂ. ಸಾಲ ವಿತರಿಸಲಾಗಿದೆ. ಈ ಬಾರಿ ಸುಮಾರು 300 ವಾಹನಗಳಿಗೆ 16 ಕೋ.ರೂ. ಸಾಲ ವಿತರಿಸುವ ಗುರಿ ಇದೆ. ಅ. 17, 18, 19ರಂದು ಬ್ಯಾಂಕಿನ ಮಣಿಪಾಲ ವಲಯದ ಎಲ್ಲ ಶಾಖೆಗಳಲ್ಲಿ ವೈಯಕ್ತಿಕ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಗ್ರಾಹಕರು ಸದುಪಯೋಗ ಪಡೆಯಬಹುದು. ಜನರ ಜೀವನ ನಿರ್ವಹಣೆಗೆ ಅಗತ್ಯವಾದ ವಾಹನ ಖರೀದಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.