ಬಳ್ಳಾರಿ: ಕೈಗಾರಿಕೆಗಳ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಇದರಿಂದ ದೇಶದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಪರ್ಕ ಮತ್ತು ಬೆಂಬಲ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಯವರು ಸಫೋರ್ಟ್ ಆ್ಯಂಡ್ ಔಟ್‌ರೀಚ್ ಕಾರ್ಯಕ್ರಮ ಘೋಷಿಸಿದ್ದು, 100 ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯೂ ಸಹ ಸೇರ್ಪಡೆಯಾಗಿರುವುದು ಸಂತೋಷದ ವಿಷಯ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವುದರಿಂದ ಉದ್ಯೋಗ ಸೃಷ್ಠಿ ಹಾಗೂ ಆರ್ಥಿಕ ಬೆಳವಣಿಗೆ ಕಾಣಬಹುದು ಎಂದರು.
ಅತೀ ಕಡಿಮೆ ಸಾಲ ಪಡೆದು ಕ್ರಮೇಣವಾಗಿ ಕಂತಿನ ರೂಪದಲ್ಲಿ ಮರು ಪಾವತಿ ಮಾಡುವವರು ಸಣ್ಣ ಉದ್ದಿಮೆದಾರರು. ಇವರಿಗೆ ಪ್ರೋತ್ಸಾಹ ನೀಡಲು ಬ್ಯಾಂಕ್ ಅಧಿಕಾರಿಗಳು ಮುಂದಾಗಬೇಕು. ಇದರಿಂದ ಉದ್ದಿಮೆಗಳು ಹಾಗೂ ಉದ್ಯೋಗ ಸೃಷ್ಠಿಸಲು ಸಾಧ್ಯವಾಗುತ್ತದೆ. ವಿವಿಧ ತಾಲೂಕುಗಳಲ್ಲಿ ಉದ್ದಿಮೆ ಸ್ಥಾಪಿಸಲು ಬೇಕಾಗಿರುವ ಮಾರ್ಗದರ್ಶನ ನೀಡಬೇಕು. ಮುಂಡರಗಿ ಮಾಡಲ್ ಟೌನ್‌ಶಿಪ್‌ನಲ್ಲಿ 40 ಎಕರೆಗೆ ಉದ್ದಿಮೆಗೆ ಕಾಯ್ದಿರಿಸಲಾಗಿದೆ. ಸುಮಾರು 150-200 ಯೂನಿಟ್‌ಗಳಿಗೆ ಸದಾವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ನ್ಯಾಷನಲ್ ಪ್ರೊಡೆಕ್ಟಿವಿಟಿ ಕೌನ್ಸೆಲ್‌ನ ಡೈರೆಕ್ಟರ್ ಜನರಲ್ ಡಾ| ಅಮಿತಾ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಫಲಾನುಭವಿಗಳಿಗೆ ಅಗತ್ಯವಾದ ಸ್ಕೀಲ್ಸ್ ನೀಡಬೇಕಾಗಿದೆ. ಜಿಲ್ಲೆಯ ವಿವಿಧ ಉದ್ದಿಮೆಗಳಿಗೆ ಭೇಟಿ ನೀಡಿದಾಗ ಮಹಿಳೆಯರು ಉದ್ದಿಮೆಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸಲಿದ್ದಾರೆ. ಅತಹವರಿಗೆ ಅಗತ್ಯ ಮಾಹಿತಿ, ತಂತ್ರಜ್ಞಾನದ ಮಾಹಿತಿ ನೀಡಿ ಪ್ರೋತ್ಸಾಹ ನೀಡಬೇಕು. ಒಂದೇ ಸೂರಿನಡಿನಲ್ಲಿ ಎಲ್ಲಾ ಮಾಹಿತಿ ಸಿಗುವಂತಹ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು, ಉದ್ದಿಮೆದಾರರು ಮತ್ತು ಆಸಕ್ತ ಫಲಾನುಭವಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಗೋಪಾಲಕೃಷ್ಣ ಮಾತನಾಡಿ, ಉದ್ದಿಮೆಗಳಿಗೆ ಆರಂಭಿಸಿಲು ಮತ್ತು ಸಾರ್ವಜನಿಕರಿಗೆ ಬ್ಯಾಂಕ್‌ಗಳಿಂದ ದೊರೆಯಲಿರುವ ವಿವಿಧ ಯೋಜನೆಗಳ ಸೌಲಭ್ಯಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥಗೌಡ, ವಿವಿಧ ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ಫಲಾನುಭವಿಗಳು ಮತ್ತು ಇತರರು ಇದ್ದರು.
ಈ ಸಂದರ್ಭದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ವಿವಿಧ ಬ್ಯಾಂಕ್‌ಗಳಿಂದ ಮಂಜೂರಾಗಿರುವ ಬ್ಯಾಂಕ್ ಸಾಲದ ಅನುಮೋದನೆ ಪತ್ರ ವಿತರಿಸಲಾಯಿತು.