ಗಂಗಾವತಿ: ಕಠಿಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಬ್ಯಾಂಕ್ ಹಾಗೂ ವಿಮಾ ಕಚೇರಿಗಳನ್ನು ಬಂದ್ ಮಾಡಿರುವುದರಿಂದ ಗ್ರಾಹಕರು ಮತ್ತು ರೈತರು ಬ್ಯಾಂಕ್ ಮುಂದೆ ಆಗಮಿಸಿ ಪರದಾಟ ನಡೆಸುತ್ತಿರುವುದು ಕಂಡು ಬಂತು.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಜಿಲ್ಲಾಡಳಿತ ಮೇ.30 ರ ವರೆಗೆ ಕಠಿಣ ಲಾಕ್ ಡೌನ್ ಜಾರಿ ಮಾಡಿದ್ದು ಬ್ಯಾಂಕ್ ವಿಮಾ ಕಚೇರಿಗಳು ಸಹ ಬಂದ್ ಇರುವಂತೆ ಸೂಚನೆ ನೀಡಲಾಗಿದೆ. ದಿನನಿತ್ಯದ ಖರ್ಚಿಗಾಗಿ ಹಾಗೂ ಭತ್ತ ಮಾರಾಟ ಮಾಡಿದ ಹಣ ಪಡೆಯಲು ಗ್ರಾಹಕರು ಮತ್ತು ರೈತರಿಗೆ ತೊಂದರೆಯಾಗಿದೆ.
ಇದನ್ನೂ ಓದಿ:ಮದುವೆಯಲ್ಲಿ ಭಾಗವಹಿಸಿ ಹಿರಿಯರನ್ನು ಕಳೆದುಕೊಳ್ಳಬೇಡಿ: ಉಡುಪಿ ಜಿಲ್ಲಾಧಿಕಾರಿ
ಉತ್ತಮ ಮಳೆಯಾಗಿರುವುದರಿಂದ ಬಯಲು ಸೀಮೆಯಲ್ಲಿ ಬಿತ್ತನೆ ಹಾಗೂ ನೀರಾವರಿ ಪ್ರದೇಶದಲ್ಲಿ ಭತ್ತ ಸಸಿಮಡಿ (ಬೀಜ) ಹಾಕಲು ರೈತರು ಸಿದ್ದತೆ ನಡೆಸಿದ್ದಾರೆ. ಬ್ಯಾಂಕ್ ಗಳು ಗ್ರಾಮೀಣ ಭಾಗದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಠಿಣ ಲಾಕ್ ಡೌನ್ ನಿಂದ ಬಂದ್ ಆಗಿರುವುದರಿಂದ ಜನರಿಗೆ ತೊಂದರೆಯಾಗಿದೆ.
ಸಾಮಾಜಿಕ ಅಂತರ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಜರ್ ಬಳಕೆ ಕಡ್ಡಾಯಗೊಳಿಸಿ ಬ್ಯಾಂಕ್ ವಿಮಾ ಕಚೇರಿ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಆರಂಭಿಸಲು ಕ್ರಮ ಕೈಗೊಂಡರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.
ಚರ್ಚೆ: ಬ್ಯಾಂಕ್ ವಿಮಾ ಕಚೇರಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕಠಿಣ ಲಾಕ್ ಡೌನ್ ನಿಂದ ವಿನಾಯಿತಿ ನೀಡುವುದು ಅವಶ್ಯಕವಾಗಿದೆ. ಈ ಕುರಿತು ಜಿಲ್ಲಾಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಉದಯವಾಣಿ ಗೆ ತಿಳಿಸಿದ್ದಾರೆ