Advertisement

Karkala ಅರಣ್ಯವಾಸಿ ಕುಟುಂಬಗಳಿಗೆ ಸರಕಾರದಿಂದಲೇ ವನವಾಸದ ಶಿಕ್ಷೆ !

12:39 AM Dec 28, 2023 | Team Udayavani |

ಕಾರ್ಕಳ: ಪಶ್ಚಿಮ ಘಟ್ಟ ತಪ್ಪಲು ಪ್ರದೇಶದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅರಣ್ಯದಲ್ಲಿರುವ 694 ಕುಟುಂಬಗಳು ಸರಕಾರದ ಕಾರಣಕ್ಕಾಗಿಯೇ ವನವಾಸ ಅನುಭವಿಸುತ್ತಿವೆ.

Advertisement

ಸರಕಾರ ನೀಡುವ ಅನುದಾನ ಯಾವು ದಕ್ಕೂ ಸಾಕಾಗದಿರುವ ಕಾರಣ ಅರಣ್ಯದಿಂದ ಹೊರಬಂದು ಮುಖ್ಯ ವಾಹಿನಿಯ ಜತೆಗೆ ಬದುಕಬೇಕೆನ್ನುವ ಈ ಕುಟುಂಬಗಳ ಕನಸು ಕೈಗೂಡದಾಗಿದೆ. ವಿವಿಧ ಜಿಲ್ಲೆಗಳಿಂದ ಈ ಸಂಬಂಧ ಪ್ರಸ್ತಾವಗಳು ಸರಕಾರಕ್ಕೆ ಸಲ್ಲಿಸಿದ್ದರೂ ಅನುದಾನ ಬಿಡುಗಡೆಯಾಗಿಲ್ಲ.

ಸದ್ಯದ ಪ್ರಕಾರ ಸರಕಾರ ಪ್ರತಿ ವರ್ಷ 10 ಕೋಟಿ ರೂ. ನಷ್ಟು ಅನುದಾನವನ್ನು ಅರಣ್ಯದಿಂದ ಹೊರಬರಲು ಒಪ್ಪುವ ಕುಟುಂಬಗಳಿಗೆ ನೀಡಲು ಅರಣ್ಯ ಇಲಾಖೆಗೆ ಬಿಡುಗಡೆ ಮಾಡುತ್ತಿದೆ. ಆದರೆ ಒಂದು ಅಂದಾಜಿನ ಪ್ರಕಾರ ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಒಮ್ಮೆಲೆ ಪರಿಹಾರ ವಿತರಿಸಲು ಕನಿಷ್ಟ 125 ಕೋಟಿ ರೂ. ಅನುದಾನ ಬೇಕಿದೆ. ಒಂದೇ ಬಾರಿಗೆ ಅನುದಾನ ಬಿಡುಗಡೆಯಾಗದ ಕಾರಣ ಈ ಕುಟುಂಬಗಳ ಅರಣ್ಯ ವಾಸ ತಪ್ಪದಂತಾಗಿದೆ.

ಕಸ್ತೂರಿರಂಗನ್‌, ಹುಲಿ ಯೋಜನೆಗಳ ಅನುಷ್ಠಾನದ ಸುದ್ದಿ ಅರಣ್ಯವಾಸಿಗಳ ನಿದ್ದೆಗೆಡಿಸಿದೆ. 2006ರಲ್ಲಿ ಅಂದಿನ ಕೇಂದ್ರ ಸರಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿತ್ತು. ಅರಣ್ಯದಲ್ಲಿ ವಾಸವಾಗಿದ್ದವರಿಗೆ ಹಕ್ಕುಪತ್ರ ವಿತ ರಿಸುವಂತೆ ಸೂಚಿಸಿತ್ತು. ಅದರೆ ಅದಿನ್ನೂ ಸಮರ್ಪಕವಾಗಿ ಜಾರಿ ಯಾಗಿಲ್ಲ. ಈ ಮಧ್ಯೆ ಜಮೀನಿನ ಸೂಕ್ತ ದಾಖಲೆ ಪತ್ರ ಗಳಿದ್ದು ಹೊರಬರಲು ಇಚ್ಛಿಸಿ ದವರಿಗೂ ಸರಕಾರದ ಪರಿಹಾರ ಧನ ವಿತರಣೆಯಾಗುತ್ತಿಲ್ಲ ಎಂಬ ದೂರುಗಳೂ ಇವೆ.

ಉಳಿದ ಬೇಡಿಕೆಗಳು
ಅರಣ್ಯದಿಂದ ಹೊರಬರಲು ಸಿದ್ಧರಿರುವ ಕುಟುಂಬಗಳಿಗೆ ಪರಿಹಾರ, ಸಮುದಾಯದ ಅಸ್ಮಿತೆ, ಸಂಸ್ಕೃತಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿ ಕುರಿತು ಅಧ್ಯಯನ, ಪಶ್ಚಿಮಘಟ್ಟ ಪ್ರದೇಶವನ್ನು 5ನೇ ಅನುಸೂಚಿತ ಪ್ರದೇಶವೆಂದು ಘೋಷಿಸುವುದು, ಮಲೆಕುಡಿಯ ಸೇರಿದಂತೆ 12 ಅರಣ್ಯ ಮೂಲ ಬುಡಕಟ್ಟು ಜನಾಂಗದವರಿಗೆ ಪ್ರಾತಿನಿಧಿಕ ಮೀಸಲು ನೀಡುವುದು, ಪಿವಿಟಿಜಿ ಮಾನದಂಡ ಪುನಾರಚಿಸಿ ಮಲೆಕುಡಿಯ ಸಮುದಾಯವನ್ನು ಸೇರಿಸುವುದು ಹಾಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ, ಎಲ್ಲ ಇಲಾಖೆಗಳಲ್ಲಿ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದವರಿಗೆ ಶೇ. 50ರಷ್ಟು ಉದ್ಯೋಗ ಮೀಸಲು, ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನವಸತಿ ಪ್ರದೇಶವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕನಿಷ್ಠ ಮೂಲ ಸೌಲಭ್ಯಗಳನ್ನು ನೀಡಬೇಕು. ಅರಣ್ಯ ಮೂಲ ಬುಡಕಟ್ಟು ಜನಾಂಗದವರ ಪ್ರಗತಿಗಾಗಿ ಅಭಿವೃದ್ಧಿ ನಿಗಮ ರಚಿಸುವುದೂ ಸೇರಿದಂತರೆ ಹಲವು ಬೇಡಿಕೆಗಳಿವೆ.

Advertisement

ತಮ್ಮ ಸಮುದಾಯಗಳಿಗೆ ಸೂಕ್ತ ಪರಿಹಾರ ಹಾಗೂ ಸೌಲಭ್ಯ ಒದಗಿಸಬೇಕೆಂದು ಹಲವು ಸಮುದಾಯಗಳ ಮುಖಂಡರು ಕಾರ್ಯ ನಿರತರಾಗಿದ್ದು, ಇನ್ನೂ ಫ‌ಲ ನೀಡಬೇಕಿದೆ. ಹಾಗಾಗಿ ಸೂಕ್ತ ಅನುದಾನ ಬಿಡುಗಡೆಯಾಗಬೇಕು ಹಾಗೂ ಉಳಿದ ಬೇಡಿಕೆಗಳನ್ನೂ ಈಡೇರಿಸಬೇಕೆಂಬುದು ವಿವಿಧ ಅರಣ್ಯವಾಸಿಗಳ ಆಗ್ರಹ.

ಸರಕಾರದಿಂದ ಪ್ರತಿ ವರ್ಷ
10 ಕೋ.ರೂ.ಗಳನ್ನು ಪರಿಹಾರ ಮೊತ್ತವಾಗಿ ನೀಡುತ್ತಿದ್ದು, ವರ್ಷದಲ್ಲಿ ನಾಲ್ಕೈದು ಕುಟುಂಬ ಗಳಿಗಷ್ಟೆ ಪರಿಹಾರ ಕೊಡಲು ಸಾಧ್ಯ. ಏಕಗಂಟಿನಲ್ಲಿ ದೊಡ್ಡ ಮೊತ್ತ ಲಭಿಸಿ ದರೆ ಅನುಕೂಲ. ಕುದುರೆಮುಖ ಉದ್ಯಾನವನಕ್ಕೆ ಸಂಬಂಧಿಸಿ 125 ಕೋ.ರೂ. ಅಗತ್ಯವಿದೆ. ಆಯಾ ಜಿಲ್ಲಾ ವ್ಯಾಪ್ತಿಯಿಂದ ಪ್ರಸ್ತಾವಗಳನ್ನು ಸರಕಾರಕ್ಕೆ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾಗಬೇಕಿದೆ.
-ಡಾ| ಕರಿಕಲನ್‌
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next