ರಬಕವಿ-ಬನಹಟ್ಟಿ : ಬನಹಟ್ಟಿ ಠಾಣೆ ಪೊಲೀಸ್ ಪೇದೆ ಕಳೆದುಹೋಗಿದ್ದ ಕಂದನನ್ನು ತಾಯಿ ಮಡಿಲಿಗೆ ಸೇರಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಗರದ ಗಾಂಧಿ ವೃತ್ತ ಬಳಿ ಸೋನಂ ಎಂಬ 4 ವರ್ಷದ ಮಗುವಿನೊಂದಿಗೆ ತಾಯಿ ಇಂದ್ರಾವತಿ ಮಾರುಕಟ್ಟೆಗೆ ಹಾಲು ತರಲು ಬಂದಿದ್ದಳು. ಈ ವೇಳೆ ಜನನೀಬೀಡ ಪ್ರದೇಶದಲ್ಲಿ ತಾಯಿ ಕೈಯಿಂದ ಮಗು ತಪ್ಪಿಸಿಕೊಂಡಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಗು ಅಳುತ್ತ ಕುಳಿತ್ತಿತ್ತು ಈ ವೇಳೆ ಅಲ್ಲಿದ್ದವರು ಮಗುವಿನ ಬಳಿ ಹೆಸರು ಊರು ಎಲ್ಲ ವಿಚಾರಿಸಿದ್ದಾರೆ ಆದರೆ ಮಗು ತನ್ನ ಹೆಸರನ್ನಷ್ಟೇ ಹೇಳುತ್ತಿತ್ತು ಅಷ್ಟೋತ್ತಿಗೆ ಅಲ್ಲಿಗೆ ಬಂದ ಪೊಲೀಸ್ ಪೇದೆ ಮುತ್ತಣ್ಣ ಮಗುವನ್ನು ತಾಯಿ ಮಡಿಲಿಗೆ ಸೇರಿಸಲು ನಗರಾದ್ಯಂತ ಪ್ರದಕ್ಷಿಣೆ ಹಾಕಿದ್ದಾರೆ.
ಶನಿವಾರ ಪೇಟೆಯ ಸದಾಶಿವ ಜನವಾಡ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದ ಉತ್ತರ ಪ್ರದೇಶದಿಂದ ಹೊಟ್ಟೆ ಪಾಡಿಗಾಗಿ ಪೈಂಟಿಂಗ್ ಕೆಲಸಕ್ಕೆಂದು ಬಂದಿರುವ ಇಂದ್ರಾವತಿ ಹಾಗೂ ವಿಜಯನಾಥ ಘೋರಕಪುರ ಎಂಬುವವರ ಮಗು ಎಂದು ಗೊತ್ತಾದ ಬಳಿಕ ಅಲ್ಲಿಗೆ ತೆರಳಿ ಮಗುವನ್ನು ತಾಯಿ ಮಡಿಲಿಗೆ ಒಪ್ಪಿಸಿದ್ದಾರೆ. ದುಃಖದ ಮಡುವಿನಲ್ಲಿದ್ದ ತಾಯಿ ಮಗುವನ್ನು ತಬ್ಬಿ ಸಂತೋಷದಿಂದ ಕಣ್ಣೀರ ಧಾರೆ ಹರಿಸಿದ್ದಾರೆ.
ಈ ವೇಳೆ ಮಗುವಿನ ತಾಯಿಗೆ ಪೊಲೀಸ್ ಪೇದೆ ಮುತ್ತಣ್ಣ ಮಗುವನ್ನು ಎಲ್ಲೆಂದರಲ್ಲಿ ಬಿಟ್ಟು ಬರಬಾರದು ಎಂದು ಬುದ್ದಿಮಾತು ಹೇಳಿದ್ದಾರೆ.
ಇದನ್ನೂ ಓದಿ : ಕಂಚು ಗೆದ್ದ ಗುರುರಾಜ ಅವರಿಗೆ 8 ಲಕ್ಷ ರೂ. ಪುರಸ್ಕಾರ: ಸಚಿವ ಡಾ.ನಾರಾಯಣ ಗೌಡ