ಚಿತ್ತಗಾಂಗ್: ಡೇವಿಡ್ ವಾರ್ನರ್ ಅವರ ಶತಕದ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯ ತಂಡವು ಬಾಂಗ್ಲಾದೇಶ ತಂಡದೆದುರಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಯಶಸ್ವಿಯಾಗಿದೆ.
ಬಾಂಗ್ಲಾದೇಶದ 305 ರನ್ನಿಗೆ ಉತ್ತರವಾಗಿ ಆಸ್ಟ್ರೇಲಿಯ ತಂಡ ಮೂರನೇ ದಿನದಾಟದ ಅಂತ್ಯಕ್ಕೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟಿಗೆ 377 ರನ್ ಪೇರಿಸಿದೆ. ಇನ್ನೂ ಒಂದು ವಿಕೆಟ್ ಉಳಿಸಿಕೊಂಡಿರುವ ಪ್ರವಾಸಿ ತಂಡ 72 ರನ್ ಮುನ್ನಡೆ ಸಾಧಿಸಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಫಲಿತಾಂಶ ಬರುವ ಸಾಧ್ಯತೆಯಿದೆ.
ಮಂಗಳವಾರ ರಾತ್ರಿ ಮಳೆ ಸುರಿದ ಕಾರಣ ಮೂರನೇ ದಿನದಾಟ ಕೆಲವು ತಾಸು ತಡವಾಗಿ ಆರಂಭವಾಗಿತ್ತು. ಎರಡು ವಿಕೆಟಿಗೆ 225 ರನ್ನಿನಿಂದ ಆಟ ಮುಂದುವರಿಸಿದ ಆಸ್ಟ್ರೇಲಿಯಕ್ಕೆ ವಾರ್ನರ್ ಮತ್ತು ಹ್ಯಾಂಡ್ಸ್‌ಕಾಂಬ್ ಆಸರೆಯಾಗಿದ್ದರು. ಅವರಿಬ್ಬರು ಮೂರನೇ ವಿಕೆಟಿಗೆ 152 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಈ ಜೋಡಿ ಮುರಿದ ಬಳಿಕ ಪ್ರವಾಸಿ ತಂಡ ಕುಸಿಯತೊಡಗಿತು.
ಹ್ಯಾಂಡ್ಸ್‌ಕಾಂಬ್ ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರು. 144 ಎಸೆತ ಎದುರಿಸಿದ ಅವರು 6 ಬೌಂಡರಿ ನೆರವಿನಿಂದ 82 ರನ್ ಗಳಿಸಿ ರನೌಟಾದರೆ ವಾರ್ನರ್ 234 ಎಸೆತ ಎದುರಿಸಿ 123 ರನ್ ಹೊಡೆದರು. 7 ಬೌಂಡರಿ ಬಾರಿಸಿದರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 305; ಆಸ್ಟ್ರೇಲಿಯ 9 ವಿಕೆಟಿಗೆ 377 (ವಾರ್ನರ್ 123, ಸ್ಟೀವನ್ ಸ್ಮಿತ್ 58, ಹ್ಯಾಂಡ್ಸ್‌ಕಾಂಬ್ 82, ಮ್ಯಾಕ್ಸ್‌ವೆಲ್ 38, ಮೆಹಿದಿ ಹಸನ್ ಮಿರಾಜ್ 93ಕ್ಕೆ 3, ಮುಸ್ತಾಫಿಜುರ್ ರೆಹಮಾನ್ 84ಕ್ಕೆ 30).