Advertisement

ಬಾಂಗ್ಲಾ ನಾಯಕ ಶಕಿಬ್‌ ಗೆ 2 ವರ್ಷ ನಿಷೇಧ

10:18 AM Oct 30, 2019 | sudhir |

ಢಾಕಾ/ದುಬಾೖ: ಭಾರತ ಪ್ರವಾಸಕ್ಕೆ ಹೊರಟಿರುವ ಬಾಂಗ್ಲಾ ಕ್ರಿಕೆಟ್‌ ತಂಡಕ್ಕೆ ಆಘಾತಗಳ ಮೇಲೆ ಆಘಾತ ಎದುರಾಗುತ್ತಿದೆ. ಇದೀಗ ತಂಡದ ನಾಯಕ ಶಕಿಬ್‌ ಅಲ್‌ ಹಸನ್‌ರನ್ನೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಎರಡು ವರ್ಷ ನಿಷೇಧಿಸಿದೆ. ಕ್ರಿಕೆಟ್‌ ಬುಕಿಗಳು 3 ಬಾರಿ ಸಂಪರ್ಕಿಸಿದ್ದನ್ನು ಶಕಿಬ್‌ ಅವರು ಐಸಿಸಿಗೆ ತಿಳಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ 2 ವರ್ಷಗಳ ನಿಷೇಧ ವಿಧಿಸಿದೆ. ಇದರಲ್ಲಿ 1 ವರ್ಷ ಕಣ್ಗಾವಲು ಅವಧಿಯಾಗಿರುತ್ತದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಶಕಿಬ್‌ ಐಸಿಸಿಯ ಭ್ರಷ್ಟಾಚಾರ ನಿಗ್ರಹ ನಿಯಮಗಳಿಗೆ ಅನುಸಾರವಾಗಿ ವರ್ತಿಸಲು ವಿಫ‌ಲವಾದರೆ ಮಾತ್ರ ಜಾರಿಯಾಗುತ್ತದೆ !

Advertisement

ಪ್ರಸ್ತುತ ಬೆಳವಣಿಗೆಯಿಂದ ಬಾಂಗ್ಲಾ ಕ್ರಿಕೆಟ್‌ ಭಾರೀ ಆಘಾತಕ್ಕೊಳಗಾಗಿದೆ. ಭಾರತದಂತಹ ಕಠಿನ ಪ್ರವಾಸಕ್ಕೆ ಹೊರಟು ನಿಂತ ವೇಳೆ ಶಕಿಬ್‌ರಂತಹ ವಿಶ್ವವಿಖ್ಯಾತ ಆಟಗಾರ ಅಲಭ್ಯರಾಗಿರುವುದು ಅದರ ಮನೋಸ್ಥೈರ್ಯಕ್ಕೆ ದೊಡ್ಡ ಹೊಡೆತ ನೀಡಲಿದೆ. ಇತ್ತೀಚೆಗಷ್ಟೇ ಆಟಗಾರರು ತಮ್ಮ ಬೇಡಿಕೆ ಈಡೇರಿಸಿ ಎಂದು ಮಂಡಳಿ ವಿರುದ್ಧ ಪ್ರತಿಭಟಿಸಿದ್ದರು. ಆಗ ಭಾರತ ಪ್ರವಾಸ ನಡೆಯುವುದೇ ಅನುಮಾನವಾಗಿತ್ತು. ಅದರ ಬೆನ್ನಲ್ಲೇ ಬಾಂಗ್ಲಾದ ಭಾರತ ಪ್ರವಾಸ ತಡೆಯಲು ಕೆಲವರು ಒಳಸಂಚು ನಡೆಸುತ್ತಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ನಜ್ಮುಲ್‌ ಆರೋಪಿಸಿದ್ದರು. ಈಗ ಈ ದಿಢೀರ್‌ ಬೆಳವಣಿಗೆ ನಡೆದಿದೆ.

ಶಕಿಬ್‌ರನ್ನು ಬಾಂಗ್ಲಾ ತಂಡದ ಅಭ್ಯಾಸದಿಂದ ದೂರವಿಟ್ಟಾಗಲೇ ಅನುಮಾನ ವ್ಯಕ್ತವಾಗಿತ್ತು. ಇದೀಗ ಎಲ್ಲವೂ ಸ್ಪಷ್ಟವಾಗಿದೆ. ಶಕಿಬ್‌ ತನ್ನಿಂದ ತಪ್ಪಾಗಿದೆ. ಶಿಕ್ಷೆಯನ್ನು ತಾನು ಪೂರ್ಣ ಮನಸ್ಸಿನಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

ಬಾಂಗ್ಲಾ ನಾಯಕ ಮಾಡಿದ ತಪ್ಪೇನು?
ಬಾಂಗ್ಲಾ ಕ್ರಿಕೆಟ್‌ ನಾಯಕ ಶಕಿಬ್‌ಗ, ಭಾರತದ ಮೂಲದ ಬುಕಿ ದೀಪಕ್‌ ಅಗರ್ವಾಲ್‌ರಿಂದ 3 ಬಾರಿ ಆಮಿಷ ಬಂದಿತ್ತು. 2018ರ ಎ.26ರಂದು ಸನ್‌ರೈಸರ್ಸ್‌ ಹೈದರಾಬಾದ್‌-ಕಿಂಗ್ಸ್‌ ಪಂಜಾಬ್‌ ನಡುವೆ ನಡೆದ ಐಪಿಎಲ್‌ ಪಂದ್ಯದ ವೇಳೆ ತಂಡದ ರಚನೆಯ ಮಾಹಿತಿ ನೀಡುವಂತೆ ಬೇಡಿಕೆ ಬಂದಿತ್ತು. 2017ರಲ್ಲಿ ನಡೆದ ಬಾಂಗ್ಲಾ ಪ್ರೀಮಿಯರ್‌ ಲೀಗ್‌, ಅನಂತರ ಬಾಂಗ್ಲಾ-ಜಿಂಬಾಬ್ವೆ ನಡುವೆ ನಡೆದ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆಯೂ ನಿರ್ದಿಷ್ಟ ಮಾಹಿತಿಗಾಗಿ ಬೇಡಿಕೆ ಬಂದಿತ್ತು. ಇದಕ್ಕೆ ಶಕಿಬ್‌ ಸ್ಪಂದಿಸಿರಲಿಲ್ಲ. ಜತೆಗೆ ಸಂದೇಶಗಳನ್ನು ಅಳಿಸಿ ಹಾಕಿದ್ದರು.

ಶಕಿಬ್‌ರನ್ನು ಭೇಟಿ ಮಾಡಲು ಕೂಡ ಅಗರ್ವಾಲ್‌ ಬಯಸಿದ್ದರು. ಆ ಬುಕಿಯ ಮೇಲಿದ್ದ ಕಾಳಜಿಯಿಂದ, ಹಾಗೆಯೇ ಅಗರ್ವಾಲ್‌ ಬುಕಿಯೆಂಬ ಭಾವನೆ ಬಂದಿದ್ದರಿಂದ ಶಕಿಬ್‌ ಈ ಭೇಟಿಗೆ ನಿರಾಕರಿಸಿದ್ದರು. ಈ ಮೂರು ಬೇಡಿಕೆಗಳನ್ನು ಶಕಿಬ್‌ ಐಸಿಸಿ ಗಮನಕ್ಕೆ ತಂದಿರಲಿಲ್ಲ. ಇಂತಹ ಘಟನೆಗಳನ್ನು ಗಮನಕ್ಕೆ ತರಬೇಕೆಂಬ ನಿಯಮ ಗೊತ್ತಿದ್ದರೂ ಶಕಿಬ್‌ ಹಾಗೆ ಮಾಡದಿರುವುದರಿಂದ ಐಸಿಸಿ ವಿಚಾರಣೆಗೊಳಪಡಿಸಿದೆ. ಈ ವೇಳೆ ಶಕಿಬ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

Advertisement

5 ವರ್ಷ ನಿಷೇಧದಿಂದ ವಿನಾಯಿತಿ
ವಾಸ್ತವವಾಗಿ ಶಕಿಬ್‌ಗ 5 ವರ್ಷ ನಿಷೇಧವಾಗಬೇಕಿತ್ತು. ಆದರೆ ವಿಚಾರಣೆಗೆ ಅವರು ಸಹಕರಿಸಿದ್ದು, ಅಗತ್ಯ ಮಾಹಿತಿಗಳನ್ನು ನೀಡಿದ್ದರಿಂದ ಐಸಿಸಿ 5 ವರ್ಷ ನಿಷೇಧದಿಂದ ಹಿಂದೆ ಸರಿಯಿತು. ಬದಲಿಗೆ 2 ವರ್ಷ ನಿಷೇಧ ಹೇರಿದೆ. ಶಿಕ್ಷೆ ಪ್ರಕಟಿಸುವಾಗ ಶಕಿಬ್‌ ವರ್ತನೆಯನ್ನು ಐಸಿಸಿ ಶ್ಲಾ ಸಿದೆ.

ಶಿಕ್ಷೆಯಿಂದ ಶಕಿಬ್‌ಗàನು ನಷ್ಟ?
ಕ್ರಿಕೆಟ್‌ನ ಮೂರೂ ಮಾದರಿ ಸೇರಿ 11,000 ರನ್‌ ಗಳಿಸಿರುವ ಶಕಿಬ್‌, ಒಟ್ಟು 500ಕ್ಕೂ ಹೆಚ್ಚು ವಿಕೆಟ್‌ ಗಳಿಸಿದ್ದಾರೆ. ಬಾಂಗ್ಲಾ ಕಂಡ ಅತ್ಯಂತ ಶ್ರೇಷ್ಠ ಆಟಗಾರರಲ್ಲೊಬ್ಬರಾಗಿರುವ ಅವರು, ಕೂಡಲೇ ಆರಂಭವಾಗಲಿರುವ ಭಾರತ ಪ್ರವಾಸದಿಂದ ಹೊರಬಿದ್ದಿದ್ದಾರೆ. ಮುಂದಿನ ವರ್ಷದ ಐಪಿಎಲ್‌ನಿಂದಲೂ ಹೊರಬಿದ್ದಿದ್ದಾರೆ. ಅಲ್ಲದೇ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಪನ್ನೂ ಕಳೆದುಕೊಳ್ಳಲಿದ್ದಾರೆ. ಇನ್ನೊಂದು ವರ್ಷದ ಅವಧಿಯಲ್ಲಿ ಶಕಿಬ್‌ ಯಾವುದೇ ರೀತಿಯ ಕ್ರಿಕೆಟ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನುಮತಿಯಿರುವುದಿಲ್ಲ. ಇದು ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತವಾಗಿದೆ.

ಮುಶ್ಫಿಕರ್‌, ಮಹ್ಮದುಲ್ಲಾ ಹುಸೇನ್‌ ನಾಯಕರು
ಶಕಿಬ್‌ ದಿಢೀರ್‌ ಅಲಭ್ಯತೆಯಿಂದ ಬಾಂಗ್ಲಾ ಟೆಸ್ಟ್‌ ತಂಡಕ್ಕೆ ಮುಶ್ಫಿàಕರ್‌ ರಹೀಂ ನಾಯಕನಾಗಲಿದ್ದಾರೆ. ಟಿ20 ತಂಡಕ್ಕೆ ಮಹ್ಮದುಲ್ಲಾ ರಿಯಾದ್‌ ಮೊಸಾದೆಕ್‌ ಹುಸೇನ್‌ ನಾಯಕರಾಗಲಿದ್ದಾರೆ. ಭಾರತದಲ್ಲಿ 2 ಟೆಸ್ಟ್‌ ಹಾಗೂ 3 ಟಿ20 ಪಂದ್ಯಗಳನ್ನು ಬಾಂಗ್ಲಾ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next