ಢಾಕಾ: ಬಾಂಗ್ಲಾದೇಶದಲ್ಲಿ ಅಶಾಂತಿ ಸೃಷ್ಟಿಯಾಗಿ ಪರಿಸ್ಥಿತಿ ಉದ್ವಿಗ್ನ ಹಾಗೂ ರಾಜಕೀಯ ಅಸ್ಥಿರತೆ ನಡುವೆಯೇ ಮಧ್ಯಂತರ ಸರಕಾರ ರಚನೆಯ ಕಸರತ್ತು ಶುರುವಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಪ್ರೊ. ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ನಾಳೆ (ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ವಕಾರ್ ಉಜ್ ಝಮಾನ್ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ವಕಾರ್, ಮಧ್ಯಂತರ ಸರ್ಕಾರವು ಗುರುವಾರ ರಾತ್ರಿ 8 ಗಂಟೆಗೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದ್ದು, ಮೊಹಮ್ಮದ್ ಯೂನಸ್ ಅವರೊಂದಿಗೆ 15 ಸದಸ್ಯರೊಳಗೊಂಡ ಸಲಹಾ ಮಂಡಳಿಯು ಇರಲಿದೆ ಎಂದು ಹೇಳಿದರು.
ಪ್ಯಾರಿಸ್‌ನಿಂದ ಆಗಮಿಸುವ ಯೂನಸ್:
ಈ ಮಧ್ಯೆ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲಿರುವ ಮೊಹಮ್ಮದ್ ಯೂನಸ್ ” ದೇಶದ ಪ್ರತಿಯೊಬ್ಬ ನಾಗರಿಕರು ಶಾಂತಿ ಕಾಪಾಡಬೇಕು. ಎಲ್ಲ ವಿಧದ ಹಿಂಸಾಚಾರಗಳನ್ನು ತಡೆಯಬೇಕಿದೆ ಎಂದು ಮನವಿ ಮಾಡಿದ್ದಾರೆ. 84 ವರ್ಷದ ಅರ್ಥಶಾಸ್ತ್ರಜ್ಞ ಯೂನಸ್ ಗುರುವಾರ ಅಧಿಕಾರ ವಹಿಸಿಕೊಳ್ಳಲು ಪ್ಯಾರಿಸ್‌ನಿಂದ ಆಗಮಿಸಲಿದ್ದಾರೆ. ಪ್ಯಾರಿಸ್‌ನ ಚಾರ್ಲ್ಸ್ ಡಿ ಗೌಲ್ಲೆ ವಿಮಾನ ನಿಲ್ದಾಣದಿಂದ ದುಬೈಗೆ ಬಂದು ಅಲ್ಲಿಂದ ಢಾಕಾಗೆ ಆಗಮಿಸುವರು ಎಂದು ಸೇನಾ ಮುಖ್ಯಸ್ಥ ಹೇಳಿದ್ದಾರೆ.
84 ವರ್ಷದ ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನಸ್ ರನ್ನು ಮಂಗಳವಾರ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಿಸಿದ್ದರು. ರಕ್ಷಣ ಪಡೆಯ ಮೂರೂ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಚಳವಳಿಯ 13 ಸದಸ್ಯರೊಂದಿಗೆ ಮಧ್ಯಂತರ ಸರಕಾರ ರಚನೆ ಕುರಿತು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ನಡೆಸಿದ ಚರ್ಚೆಯ ವೇಳೆ ಯೂನುಸ್ ಅವರಿಗೆ ಅಧಿಕಾರ ವಹಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿತ್ತು.
ಅಭಿವೃದ್ಧಿಯೇ ಮುಖ್ಯ : ಖಾಲಿದಾ ಜಿಯಾ
“ಅಸಾಧ್ಯವಾದುದ್ದು ಸಾಧ್ಯವಾಗಿಸಲು ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿದ ಮಕ್ಕಳಿಗೆ (ವಿದ್ಯಾರ್ಥಿಗಳಿಗೆ) ನಾನು ಹೃದಯ ಪೂರ್ವಕ ಧನ್ಯವಾದಗಳನ್ನು ಹೇಳಬಯಸುತ್ತೇನೆ’ ಎಂದು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಮುಖ್ಯಸ್ಥೆ ಖಾಲಿದಾ ಜಿಯಾ ಬುಧವಾರ ಹೇಳಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾರ ಬದ್ಧ ವೈರಿ ಎಂದೇ ಗುರುತಿಸಿಕೊಂಡ ಜಿಯಾರನ್ನು ಹಲವಾರು ವರ್ಷಗಳ ಗೃಹಬಂಧನದ ಬಳಿಕ ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿರುವ ಆಕೆ ಅಲ್ಲಿಂದಲೇ ವಿಡಿಯೋ ಸಂದೇಶ ನೀಡಿದ್ದಾರೆ.