ಢಾಕಾ:2016ರಲ್ಲಿ ಬಾಂಗ್ಲಾದೇಶದಲ್ಲಿ ಸಂಭವಿಸಿದ್ದ ಆರ್ಟಿಸನ್ ಕೆಫೆ ಮೇಲಿನ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಢಾಕಾ ವಿಶೇಷ ಭಯೋತ್ಪಾದನಾ ನಿಗ್ರಹ ಕೋರ್ಟ್ ಏಳು ಆರೋಪಿಗಳಿಗೆ ಗಲ್ಲುಶಿಕ್ಷೆಯನ್ನು ನೀಡಿದ್ದು, ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿರುವುದಾಗಿ ವರದಿ ತಿಳಿಸಿದೆ.
ಬಾಂಗ್ಲಾದೇಶಿ ಮಾಧ್ಯಮದ ವರದಿ ಪ್ರಕಾರ, ವಿಶೇಷ ಭಯೋತ್ಪಾದನಾ ನಿಗ್ರಹ ಕೋರ್ಟ್ ನ ಜಡ್ಜ್ ಮೊಹಮ್ಮದ್ ಮೋಜಿಬುರ್ ರಹಮಾನ್ ತೀರ್ಪನ್ನು ಪ್ರಕಟಿಸಿರುವುದಾಗಿ ಹೇಳಿದೆ.
2016ರಲ್ಲಿ ಕೆಫೆ ಮೇಲೆ ದಾಳಿ ನಡೆದ ಘಟನೆಯಲ್ಲಿ 17 ಮಂದಿ ವಿದೇಶಿಯರು ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದರು. ಉಗ್ರರು ಕೆಫೆಯಲ್ಲಿನ ಗ್ರಾಹಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಆರ್ಮಿ ಕಮಾಂಡೋಗಳು ಕಾರ್ಯಾಚರಣೆ ನಡೆಸುವ ಮೊದಲು ಎನ್ ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದರು.
ದಾಳಿ ಪ್ರಕರಣದಲ್ಲಿ ಜಹಾಂಗೀರ್ ಹುಸೈನ್ ಅಲಿಯಾಸ್ ರಾಜೀವ್ ಗಾಂಧಿ, ರಾಕಿಬುಲ್ ಹಸನ್ ರೇಗಾನ್, ಅಸ್ಲಾಮ್ ಹುಸೈನ್ ಅಲಿಯಾಸ್ ರಶೀದುಲ್ ಇಸ್ಲಾಮ್ ಅಲಿಯಾಸ್ ರಾಶ್, ಅಬ್ದುಸ್ ಸಾಬುರ್ ಖಾನ್ ಅಲಿಯಾಸ್ ಸೋಹೈಲ್ ಮುಹ್ ಫೂಝ್, ಹಾದಿಸುರ್ ರಹಮಾನ್ ಸಾಗರ್, ಷರೀಫುಲ್ ಇಸ್ಲಾಮ್ ಖಾಲೀದ್ ಅಲಿಯಾಸ್ ಖಾಲೀದ್ ಮತ್ತು ಮಾಮುನೌರ್ ರಶೀದ್ ರಿಪೋನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿರುವುದಾಗಿ ಬಾಂಗ್ಲಾದೇಶ್ ನ್ಯೂಸ್ 24 ತಿಳಿಸಿದೆ.
ಪ್ರಕರಣದಲ್ಲಿ ಮಿಝಾನೌರ್ ರಹಮಾನ್ ಅಲಿಯಾಸ್ ಬೋರೊ ಮಿಝಾನ್ ನನ್ನು ಕೋರ್ಟ್ ಖುಲಾಸೆಗೊಳಿಸಿದೆ. ತೀರ್ಪಿನ ಹಿನ್ನೆಲೆಯಲ್ಲಿ ಬುಧವಾರ ಕೋರ್ಟ್ ಆವರಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 2018ರ ನವೆಂಬರ್ 26ರಿಂದ ವಿಚಾರಣೆ ಆರಂಭಗೊಂಡಿತ್ತು. ಪ್ರಾಸಿಕ್ಯೂಷನ್ ವಕೀಲರು ಎಲ್ಲಾ ಎಂಟು ಮಂದಿ ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕೆಂದು ವಾದ ಮಂಡಿಸಿದ್ದರು ಎಂದು ವರದಿ ವಿವರಿಸಿದೆ.