Advertisement
ಪ್ರತಿಭಟನೆಗಳು ಮತ್ತು ಹೆಚ್ಚುತ್ತಿರುವ ಹಿಂಸಾಚಾರ
Related Articles
Advertisement
ನ್ಯಾಯಸಮ್ಮತ ಚುನಾವಣೆಗೆ ಸರ್ಕಾರದ ಕ್ರಮಗಳೇನು?
ಈ ಹಿಂದಿನ ಚುನಾವಣಾ ವಿವಾದಗಳನ್ನು ಗಮನದಲ್ಲಿಟ್ಟುಕೊಂಡು, ಅವಾಮಿ ಲೀಗ್ ಸರ್ಕಾರವು ನ್ಯಾಯಸಮ್ಮತ ಚುನಾವಣೆಗಾಗಿ ಅನೇಕ ಕಾನೂನು ಕ್ರಮಗಳನ್ನು ಜಾರಿಗೆ ತಂದಿದೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ರೂಲ್ಸ್ 2018, ಕ್ಷೇತ್ರಗಳ ಪುನರ್ವಿಂಗಡಣೆ ಕಾಯ್ದೆ 2021, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ 2022 ಇವುಗಳನ್ನು ಜಾರಿಗೆ ತರಲಾಗಿದ್ದು ನಿಷ್ಪಕ್ಷಪಾತ ಮತ್ತು ಸಮರ್ಥ ಚುನಾವಣಾ ಆಯೋಗ ರಚನೆಗೆ ಪೂರಕವಾಗಿವೆ. ಇಷ್ಟೇ ಅಲ್ಲದೆ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸಂಬಂಧಿಸಿದ ನೀತಿ ನಿಯಮಗಳ ತಿದ್ದುಪಡಿಗಳು ಚುನಾವಣೆಗಳ ನ್ಯಾಯಸಮ್ಮತತೆ, ಒಳಗೊಳ್ಳುವಿಕೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಸಾರಿ ಹೇಳುತ್ತಿವೆ.
ವಿರೋಧ ಪಕ್ಷಗಳ ನಿಲುವು, ಅಂತಾರಾಷ್ಟ್ರೀಯ ನಿಗಾ
ಬೇಡಿಕೆಗಳನ್ನು ಈಡೇರಿಸದ ಹೊರತು 2024 ರ ಜನವರಿಯ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂಬ ವಿರೋಧ ಪಕ್ಷಗಳ ನಿಲುವು ಪ್ರಜಾಪ್ರಭುತ್ವ ಪ್ರಕ್ರಿಯೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಈ ಪರಿಸ್ಥಿತಿಯು ವಿಶ್ವ ಸಮುದಾಯದ ಗಮನ ಸೆಳೆದಿದೆ. ಅದರಲ್ಲೂ ವಿಶೇಷವಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಕೂಡ ಸದ್ಯದ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಸಂದರ್ಭದ ಹಿಂಸಾತ್ಮಕ ಘಟನೆಗಳ ಬಗ್ಗೆ ಅಕ್ಟೋಬರ್ 31 ರಂದು ಬಿಡುಗಡೆಯಾದ ಮಂಡಳಿಯ ವರದಿಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಹಿಂಸಾ ಪ್ರವೃತ್ತಿಯನ್ನು ಖಂಡಿಸುವಂತೆ ಕರೆ ನೀಡಲಾಗಿದೆ.
ಅಮೆರಿಕದ ನಿರ್ಬಂಧಗಳು, ಜಾಗತಿಕ ಆಯಾಮ
ಪ್ರಜಾಸತ್ತಾತ್ಮಕ ಚುನಾವಣೆಗಳ ಪರ ಸದಾ ಧ್ವನಿ ಎತ್ತುವ ಅಮೆರಿಕವು 2021 ರಲ್ಲಿ ಬಾಂಗ್ಲಾದೇಶದ ರಾಪಿಡ್ ಆಕ್ಷನ್ ಬೆಟಾಲಿಯನ್‌ನ ಏಳು ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಮೂಲಕ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದಕ್ಕಾಗಿ ಈ ನಿರ್ಬಂಧಗಳನ್ನು ಹೇರಲಾಗಿತ್ತು. ಇದು ಬಾಂಗ್ಲಾದೇಶದ ರಾಜಕೀಯ ಪ್ರಕ್ಷುಬ್ಧತೆಯ ಜಾಗತಿಕ ಪರಿಣಾಮಗಳನ್ನು ಒತ್ತಿಹೇಳಿವೆ.
ಇದಕ್ಕೆ ವ್ಯತಿರಿಕ್ತವಾಗಿ, ಬಾಂಗ್ಲಾದೇಶದ ಪ್ರಮುಖ ವ್ಯಾಪಾರ ಪಾಲುದಾರರಾದ ಚೀನಾ ಮತ್ತು ಭಾರತವು ಹೆಚ್ಚು ಲೆಕ್ಕಾಚಾರದ ಹೆಜ್ಜೆಗಳನ್ನಿಟ್ಟಿವೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಆಶಯ ವ್ಯಕ್ತಪಡಿಸಿದ್ದರ ಜತೆಜತೆಗೇ ಬಾಹ್ಯ ಹಸ್ತಕ್ಷೇಪದ ವಿರುದ್ಧ ಬಾಂಗ್ಲಾದೇಶ ಸರ್ಕಾರಕ್ಕೆ ಚೀನಾ ಬೆಂಬಲವನ್ನು ನೀಡಿದೆ. ಸೂಕ್ಷ್ಮವಾದ ಪ್ರಾದೇಶಿಕ ಆಯಾಮದ ಬಗ್ಗೆ ಅರಿವಿರುವ ಭಾರತವು ಅತಿಯಾದ ಒತ್ತಡದ ವಿರುದ್ಧ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಇದು ಪ್ರಾದೇಶಿಕವಾಗಿ ಬಾಂಗ್ಲಾದೇಶವನ್ನು ಸ್ಥಿರಗೊಳಿಸುವ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ.
ಆರ್ಥಿಕ ಪರಿಣಾಮಗಳು, ಪ್ರಾದೇಶಿಕ ಸ್ಥಿರತೆ
ರಾಜಕೀಯ ಪ್ರಕ್ಷುಬ್ಧತೆಯ ಆರ್ಥಿಕ ಪರಿಣಾಮಗಳು ಗಮನಾರ್ಹವಾಗಿವೆ. ಅಮೆರಿಕದ ನಿರ್ಬಂಧಗಳು ಬಾಂಗ್ಲಾದೇಶದ ಸಿದ್ಧ ಉಡುಪುಗಳ ಉದ್ಯಮದ ಮೇಲೆ ಪರಿಣಾಮ ಬೀರುತ್ತವೆ. ಬಾಂಗ್ಲಾದೇಶದ ಸಿದ್ಧ ಉಡುಪುಗಳ ಉದ್ಯಮ ದೇಶದ ಒಟ್ಟು ರಫ್ತಿನ ಶೇ 21.50 ರಷ್ಟನ್ನು ಹೊಂದಿದೆ. ಸಂಪೂರ್ಣ ಚುನಾವಣಾ ವೀಕ್ಷಕ ತಂಡವನ್ನು ಕಳುಹಿಸದಿರುವ ಯುರೋಪ್ ಒಕ್ಕೂಟದ ನಿರ್ಧಾರವು ದೇಶದ ಆರ್ಥಿಕ ಸ್ಥಿರತೆಯ ಸಂಭಾವ್ಯ ಕುಸಿತದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.
ಇದಲ್ಲದೆ, ಪ್ರಾದೇಶಿಕ ಸ್ಥಿರತೆಯು ರಾಜತಾಂತ್ರಿಕ ನೆಲೆಗಟ್ಟಿನ ಕೇಂದ್ರಬಿಂದುವಾಗುತ್ತದೆ. ಬಾಂಗ್ಲಾದೇಶದ ವೇಗದ ಆರ್ಥಿಕ ಬೆಳವಣಿಗೆ, ದಕ್ಷಿಣ ಮತ್ತು ಆಗ್ನೇಯ ಏಷ್ಯಾವನ್ನು ಸಂಪರ್ಕಿಸುವ ವ್ಯೂಹಾತ್ಮಕ ಸ್ಥಳ ಮತ್ತು ಬಂಗಾಳ ಕೊಲ್ಲಿಯಲ್ಲಿ ಪ್ರಮುಖ ಹಡಗು ಮಾರ್ಗಗಳ ಮೇಲ್ವಿಚಾರಣೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಬಾಂಗ್ಲಾದೇಶದೊಳಗಿನ ಆಂತರಿಕ ಘರ್ಷಣೆಗಳು ದೇಶಕ್ಕೆ ಮಾತ್ರವಲ್ಲದೆ ಪ್ರಾದೇಶಿಕವಾಗಿಯೂ ಪ್ರತಿಕೂಲ ಪರಿಣಾಮಗಳ ಸಂಭಾವ್ಯತೆಯನ್ನು ಹೊಂದಿವೆ.
ಚುನಾವಣಾ ತಯಾರಿ, ವಿಶ್ವಾಸಾರ್ಹತೆಯ ಕಾಳಜಿ
ಪ್ರಕ್ಷುಬ್ಧ ರಾಜಕೀಯ ಚಿತ್ರಣದ ಮಧ್ಯೆ, ಕಾನೂನು ಕ್ರಮಗಳಲ್ಲಿ ಮತ್ತು ಪ್ರಮುಖ ವಿರೋಧ ಪಕ್ಷದ ಅನುಪಸ್ಥಿತಿಯಲ್ಲಿ ಆಶಾವಾದವನ್ನು ಹೊಂದಿರುವಂತೆ ಬಿಂಬಿಸಲು ಅವಾಮಿ ಲೀಗ್ ಯತ್ನಿಸುತ್ತಿದೆ. ಚುನಾವಣಾ ಆಯೋಗವು ವಿವರವಾದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 66 ಚುನಾವಣಾಧಿಕಾರಿಗಳನ್ನು ಮತ್ತು 592 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿದೆ. ಎಲ್ಲಾ 42,000 ಮತಗಟ್ಟೆಗಳು ಮತ್ತು 2,62,000 ಬೂತ್‌ಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಕಾಜಿ ಹಬೀಬುಲ್ ಅವಲ್ ಭರವಸೆ ನೀಡಿದ್ದಾರೆ.
ಆದಾಗ್ಯೂ, ಸದ್ಯದ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಗಮನಿಸಿದಾಗ ಈ ಕ್ರಮಗಳ ಪ್ರಾಯೋಗಿಕ ಅನುಷ್ಠಾನದ ಬಗ್ಗೆ ಅನುಮಾನಗಳು ಇದ್ದೇ ಇವೆ. ನಾಮಪತ್ರ ಸಲ್ಲಿಸುವ ಗಡುವು ಮುಗಿದಿದ್ದು, ಡಿಸೆಂಬರ್ 1 ರಿಂದ 4 ರ ನಡುವೆ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಅಭ್ಯರ್ಥಿಗಳ ವಾಪಸಾತಿಗೆ ಡಿಸೆಂಬರ್ 17 ರವರೆಗೆ ಅವಕಾಶವಿದ್ದು, ಚಿಹ್ನೆಗಳ ಹಂಚಿಕೆ ಡಿಸೆಂಬರ್ 18 ರಂದು ನಡೆಯಲಿದೆ. ಪ್ರಚಾರ ಅಭಿಯಾನದ ಅವಧಿಯು ಜನವರಿ 2024 ರ 5ರಂದು ಬೆಳಿಗ್ಗೆ 8 ಗಂಟೆಯವರೆಗೆ ಇರಲಿದೆ. 2024 ರ ಚುನಾವಣೆಯು ಒಂದು ಪ್ರಮುಖ ಕ್ಷಣವಾಗಿದೆ. ಚುನಾವಣೆಯಲ್ಲಿ ಬಾಂಗ್ಲಾದೇಶದ ಪ್ರಜಾಸತ್ತಾತ್ಮಕ ಸ್ಥಿತಿಸ್ಥಾಪಕತ್ವವನ್ನು ಜಾಗತಿಕ ಭೌಗೋಳಿಕ ರಾಜಕೀಯ ಆಯಾಮದ ಹಿನ್ನೆಲೆಯಲ್ಲಿ ಪರೀಕ್ಷಿಸಲಾಗುತ್ತದೆ.