Advertisement

ಬಾಂಗ್ಲಾ – ಭಾರತ ಪ್ರಥಮ T20: ಟೀಂ ಇಂಡಿಯಾ ವಿರುದ್ಧ 07 ವಿಕೆಟ್ ಗಳಿಂದ ಗೆದ್ದ ಬಾಂಗ್ಲಾ

09:55 AM Nov 04, 2019 | Hari Prasad |

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾ ಪ್ರಥಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ಟೀಂ ಇಂಡಿಯಾ ವಿರುದ್ಧ 07 ವಿಕೆಟ್ ಗಳ ಅಧಿಕಾರಯುತ ಜಯ ಸಾಧಿಸಿದೆ.

Advertisement

ಭಾರತ ನೀಡಿದ 148 ರನ್ ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಭಾರತದ ಬೌಲರ್ ಗಳು ಯಶಸ್ವಿಯಾಗಲಿಲ್ಲ. ಭಾರತದ ಯುವ ಬೌಲಿಂಗ್ ಪಡೆಯ ದೌರ್ಬಲ್ಯದ ಲಾಭವೆತ್ತಿದೆ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ನಿರಾಳವಾಗಿ ಬ್ಯಾಟ್ ಬೀಸುತ್ತಾ ಸುಲಭ ಗುರಿಯನ್ನು ಸರಳವಾಗಿ ಬೆನ್ನಟ್ಟಿ ಜಯಶೀಲರಾದರು. ಅಂತಿಮವಾಗಿ ಬಾಂಗ್ಲಾ 19.3 ಓವರುಗಳಲ್ಲಿ 03 ವಿಕೆಟ್ ಗಳನ್ನು ಕಳೆದುಕೊಂಡು 154 ರನ್ ಗಳಿಸಿತು. ಈ ಮೂಲಕ 07 ವಿಕೆಟ್ ಗಳ ಜಯವನ್ನು ತನ್ನದಾಗಿಸಿಕೊಂಡಿತು. ಅಜೇಯ 60 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮುಷ್ಫಿಕರ್ ರಹೀಮ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.


ಬಾಂಗ್ಲಾ ಆರಂಭಿಕ ಬ್ಯಾಟ್ಸ್ ಮನ್ ಲಿಟನ್ ದಾಸ್ (07) ವಿಕೆಟ್ ಬೇಗನೇ ಉರುಳಿದರೂ ಮೊಹಮ್ಮದ್ ನಯೀಮ್ (26) ಮತ್ತು ಸೌಮ್ಯ ಸರ್ಕಾರ್ (39) ಎಚ್ಚರಿಕೆಯ ಆಟವಾಡುತ್ತಾ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಸಾಗಿದರು. ಆದರೆ ಬಾಂಗ್ಲಾ ಬ್ಯಾಟಿಂಗ್ ಸರದಿಯಲ್ಲಿ ಕಿಚ್ಚಿನ ಆಟವಾಡಿದ್ದು ಮಾತ್ರ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ (ಔಟಾಗದೇ 60), ರಹೀಮ್ ಕೇವಲ 43 ಎಸೆತಗಳಲ್ಲಿ ಅಜೇಯ 60 ರನ್ ಗಳಿಸುವ ಮೂಲಕ ಭಾರತದ ನೆಲದಲ್ಲಿ ತನ್ನ ತಂಡಕ್ಕೆ ಅಮೂಲ್ಯ ಗೆಲುವನ್ನು ತಂದುಕೊಟ್ಟರು. ಇವರ ಈ ಅಜೇಯ ಇನ್ನಿಂಗ್ಸ್ ನಲ್ಲಿ 08 ಬೌಂಡರಿ ಮತ್ತು 01 ಸಿಕ್ಸರ್ ಒಳಗೊಂಡಿತ್ತು. ರಹಮಾನ್ ಅವರಿಗೆ ಉತ್ತಮ ಬೆಂಬಲ ನೀಡಿದ ಮಹಮದುಲ್ಲಾ ಅವರು ಅಜೇಯ 15 ರನ್ ಗಳಿಸಿದರು.

ಭಾರತದ ಬೌಲಿಂಗ್ ದಾಳಿ ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ. ಸ್ಪಿನ್ನರ್ ಚಾಹಲ್, ಖಲೀಲ್ ಅಹಮ್ಮದ್ ಮತ್ತು ದೀಪಕ್ ಚಾಹರ್ ಅವರು ತಲಾ 01 ವಿಕೆಟ್ ಪಡೆದರು. ಭಾರತ ಈ ಪಂದ್ಯವನ್ನು ಗೆಲ್ಲುತ್ತಿದ್ದರೆ ಬಾಂಗ್ಲಾ ವಿರುದ್ಧ ಸತತ 09 ಟಿ20 ಪಂದ್ಯಗಳನ್ನು ಗೆದ್ದ ದಾಖಲೆಗೆ ಪಾತ್ರವಾಗುತ್ತಿತ್ತು.

ಇತ್ತೀಚೆಗಷ್ಟೇ ಹೆಸರು ಬದಲಾಯಿಸಿಕೊಂಡಿರುವ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪ್ರಥಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ನಾಯಕ ಮಹಮದುಲ್ಲಾ ರಿಯಾದ್ ಅವರು ಭಾರತವನ್ನು ಮೊದಲು ಬ್ಯಾಟಿಂಗ್ ಬಿಟ್ಟುಕೊಟ್ಟರು.

Advertisement


ಟಿಂ ಇಂಡಿಯಾ ಮೊತ್ತ 10 ರನ್ ಆಗುವಷ್ಟರಲ್ಲಿ 09 ರನ್ ಮಾಡಿದ್ದ ಹಂಗಾಮಿ ಕಪ್ತಾನ ರೋಹಿತ್ ಶರ್ಮಾ ಅವರು ಎಲ್.ಬಿ. ಬಲೆಗೆ ಬಿದ್ದು ಔಟಾದರು. ಬಳಿಕ 15 ರನ್ ಮಾಡಿದ್ದ ಕನ್ನಡಿಗ ರಾಹುಲ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಆಗ ತಂಡದ ಮೊತ್ತ 36 ರನ್ ಗಳಾಗಿತ್ತು. ಹೀಗೆ ಒಂದು ಕಡೆ ಎರಡು ವಿಕೆಟ್ ಬೇಗನೇ ಉದುರಿದರೂ ಲೋಕಲ್ ಹೀರೋ ಶಿಖರ್ ಧವನ್ ಅವರು ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಾ ತಂಡದ ಮೊತ್ತವನ್ನು ಏರಿಸುತ್ತಾ ಸಾಗಿದರು.

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್ ಅಯ್ಯರ್ 22 ರನ್ ಗಳಿಸಿ ಔಟಾದರು. ಅರ್ಧಶತಕದ ಸನಿಹದಲ್ಲಿದ್ದ ಶಿಖರ್ ಧವನ್ 41 ರನ್ ಗಳಿಸಿ ಔಟಾದರು. ಧವನ್ ಇನ್ನಿಂಗ್ಸ್ ನಲ್ಲಿ 3 ಬೌಂಡರಿ ಮತ್ತು 01 ಸಿಕ್ಸರ್ ಇತ್ತು. ಟೀಂ ಇಂಡಿಯಾ ಸರದಿಯಲ್ಲಿ ಧವನ್ ಅವರದ್ದೇ ಗರಿಷ್ಠ ಗಳಿಕೆ.

ಬಳಿಕ ವೇಗದ ಆಟಕ್ಕೆ ಒತ್ತು ನೀಡಿದ ರಿಷಭ್ ಪಂತ್ (27) ಮತ್ತು ಹಾರ್ಧಿಕ್ ಪಾಂಡ್ಯ (ಔಟಾಗದೇ 15) ತಂಡ ಗೌರವಯುತ ಮೊತ್ತ ದಾಖಲಿಸುವಲ್ಲಿ ನೆರವಾದರು. ಪಾಂಡ್ಯ ಅವರ 15 ರನ್ ಕೇವಲ 8 ಎಸೆತಗಳಲ್ಲಿ ದಾಖಲಾದರೆ ಪಂತ್ 26 ಎಸೆತಗಳಲ್ಲಿ 27 ರನ್ ಕಲೆ ಹಾಕಿದರು.

ಅಂತಿಮವಾಗಿ ಭಾರತ 20 ಓವರುಗಳ ಮುಕ್ತಾಯಕ್ಕೆ 06 ವಿಕೆಟ್ ಗಳನ್ನು ಕಳೆದುಕೊಂಡು 148 ರನ್ ಗಳಷ್ಟನ್ನೇ ಗಳಿಸಲು ಶಕ್ತವಾಯಿತು.

ಬಿಗು ಬೌಲಿಂಗ್ ದಾಳಿ ಮತ್ತು ಶಿಸ್ತಿನ ಫೀಲ್ಡಿಂಗ್ ಮೂಲಕ ಬಾಂಗ್ಲಾ ತಂಡ ಗಮನ ಸೆಳೆಯಿತು. ಶಫುಲ್ ಇಸ್ಲಾಂ ಮತ್ತು ಅಮಿನುಲ್ ಇಸ್ಲಾಂ ತಲಾ 02 ವಿಕೆಟ್ ಪಡೆದು ಗಮನಸೆಳೆದರು. ಧವನ್ ವಿಕೆಟ್ ರನೌಟ್ ರೂಪದಲ್ಲಿ ಬಂತು. ಉಳಿದ 01 ವಿಕೆಟ್ ಆಫ್ ಸ್ಪಿನ್ನರ್ ಅಫೀಫ್ ಹುಸೈನ್ ಪಾಲಾಯಿತು.




Advertisement

Udayavani is now on Telegram. Click here to join our channel and stay updated with the latest news.

Next