Advertisement
ನಮಗಿಲ್ಲದ ಭಾಗ್ಯವ ನೆನೆದು…“ಮೈಸೂರು ಮಲ್ಲಿಗೆ’ ಸಿನಿಮಾ ನೋಡುತ್ತಿದ್ದೆ. ಬಳೆಗಾರ ಚೆನ್ನಯ್ಯನ ಪಾತ್ರ ಇಪ್ಪತ್ತೈದು ವರ್ಷಗಳ ಹಿಂದಕ್ಕೆ ಕರೆದೊಯ್ದಿತು. ಅದರಲ್ಲೂ, “ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು…’ ಹಾಡಿನಲ್ಲಿ, ಬಳೆಗಾರ ಒಂದೂರಿಂದ ಮತ್ತೂಂದೂರಿಗೆ ಸುದ್ದಿ ಹೊತ್ತು ತರುವುದು, ಬಳೆಗಾರನ ಸದ್ದು ಕೇಳಿ ಹೆಣ್ಣುಮಕ್ಕಳೆಲ್ಲಾ ಸಂಭ್ರಮದಿಂದ ಚಾವಡಿಯಲ್ಲಿ ಗುಂಪುಗೂಡುವುದು… ಓಹ್! ಒಂಚೂರೂ ವ್ಯತ್ಯಾಸವಿಲ್ಲ!
Related Articles
-ಕಾರ್ತಿಕಾದಿತ್ಯ ಬೆಳಗೋಡು
Advertisement
ನೀಲಿ ಬಳೆ ಚಂದ ಕಾಣ್ತನಾ ಅಪ್ಪೀ?ಅಮ್ಮನ ಕೈಗಳು ಅದೆಷ್ಟು ಒರಟು ಎಂದರೆ, ಅಂಗಡಿಯಿಂದ ಕೊಂಡು ತಂದು ತಾನೇ ಬಳೆಗಳನ್ನು ತೊಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಸುಮಾರು ಸಲ ಹಾಗೆ ಮಾಡಲು ಪ್ರಯತ್ನಿಸಿ ಕೊಂಡುತಂದಿದ್ದ ಅರ್ಧಕ್ಕರ್ಧ ಬಳೆಗಳು ಇರಿಸಿಕೊಳ್ಳುವಾಗಲೇ ಒಡೆದುಹೋಗಿ, ಇನ್ನು ಬಳೆಗಾರರ ಬಳಿಯೇ ಬಳೆ ತೊಟ್ಟುಕೊಳ್ಳುವ ತೀರ್ಮಾನಕ್ಕೆ ಬಂದಳು. “ಅಡಿಕೆ ಸುಲಿದೂ ಸುಲಿದೂ ನನ್ನ ಕೈ ಕೊರಡಾಗಿ ಹೋಗಿದೆ ಮಾರಾಯಾ’ ಅಂತಿದ್ದಳು. ವರ್ಷಕ್ಕೊಮ್ಮೆಯೋ ಎರಡು ಸಲವೋ ಅವಳು ಬಳೆ ತೊಡಿಸಿಕೊಳ್ಳುವುದು. ಮನೆ ಬಾಗಿಲಿಗೆ ಬರುವ ಬಳೆಗಾರರ ಬಳಿಯೋ ಅಥವಾ ಪೇಟೆಯ ಬಳೆಯಂಗಡಿಯಲ್ಲೋ ಕೂತು ಆಕೆ ನೂರಾರು ಬಣ್ಣದ ಬಳೆಗಳಲ್ಲಿ ಯಾವುದನ್ನು ಆಯುವುದೆಂದು ತಲೆ ಕೆಡಿಸಿಕೊಳ್ಳುವಳು. “ಕೆಂಪು ಬಳೇನ ಬಳೆ ಹೋದ ವರ್ಷ ತಗಂಡಿದ್ದೇ, ಹಸಿರು ಬೇಜಾರು, ನೀಲಿ ಬಳೆ ನನ್ ಕೈಗೆ ಚಂದ ಕಾಣ್ತನಾ ಅಪ್ಪೀ?’ ಅಂತ ಜೊತೆಗಿದ್ದ ನನ್ನನ್ನು ಕೇಳುವಳು. ಕೊನೆಗೂ ಅರೆಮನಸ್ಸಿನಿಂದಲೇ ಒಂದನ್ನಾಯ್ದು, ಬಳೆಗಾರ ಅವನ್ನು ಅವಳ ಕೈಗೆ ತೊಡಿಸುವಾಗ ಆಗುವ ನೋವಿಗೆ ಅಮ್ಮನ ಕಣ್ಣಲ್ಲಿ ನೀರೇ ಬರುತ್ತಿತ್ತು… ಬಳೆ, ಬೆರಳ ಮೇಲಿನ ಗಂಟು ದಾಟುವಾಗ ಬಳೆಗಾರ ಎಷ್ಟೇ ಮುತುವರ್ಜಿ ವಹಿಸಿದರೂ ಅಮ್ಮ ಅದೆಷ್ಟು ನೋವನುಭವಿಸುತ್ತಿದ್ದಳೆಂದರೆ, “ನನ್ ಸೊಸೆಗೊಂದು ಒರಟು ಕೈ ಇರದೇ ಇರ್ಲಪ್ಪಾ’ ಅಂತ ನನಗೆ ಕಿಚಾಯಿಸುತ್ತಿದ್ದಳು. ಅವಳ ಹಾರೈಕೆಯಂತೆಯೇ ಈಗ ಅವಳ ಸೊಸೆ ಸಲೀಸಾಗಿ ದಿನಕ್ಕೊಂದು ಬಣ್ಣದ ಬಳೆ ತೊಡುವಾಗ, ಅಮ್ಮ ಅದನ್ನು ಬೆರಗುಗಣ್ಣುಗಳಿಂದ ನೋಡುವಳು. ತನ್ನ ಕೊರಡು ಕೈಗಳನ್ನು ಶಪಿಸುವಳು. ನಾನು ಇಬ್ಬರನ್ನೂ ನೋಡಿ ನಗುವೆ.
-ಸುಶ್ರುತ ದೊಡ್ಡೇರಿ ಬಣ್ಣದ ಬಳೆಯೂ, ಅಪ್ಪನ ತಾಳ್ಮೆಯೂ
ನನ್ನ ಅಪ್ಪ ತೀರಿಕೊಂಡು ಮೂರು ವರ್ಷಗಳ ಮೇಲಾಯಿತು. ಅಪ್ಪನನ್ನು ನೆನೆದಾಗಲೆಲ್ಲ ನನ್ನ ಅವ್ವ ಎರಡು ವಸ್ತುಗಳನ್ನು ಪ್ರಸ್ತಾಪಿಸುತ್ತಾಳೆ. ಒಂದು ಬಳೆ, ಇನ್ನೊಂದು ಹೂವು. “ನಿಮ್ಮಪ್ಪ ನಂಗೆ ಯಾವುದಲ್ಲಿ ಕಡಿಮೆ ಮಾಡಿದರೂ ಇವೆರಡರಲ್ಲಿ ಕಡಿಮೆ ಮಾಡಲಿಲ್ಲ’ ಎನ್ನುತ್ತಾಳೆ. ಅಪ್ಪ, ಊರಿನ ಗಲ್ಲಿಗಳಲ್ಲಿ ಸಂಚರಿಸುತ್ತಿದ್ದ ಬಳೆಗಾರ ಸೆಟ್ಟರ ಸುಳಿವು ಹಿಡಿದು, ಅವರನ್ನು ಕರೆದು ತಂದು ಅವ್ವಳಿಗೆ ಬಳೆ ತೊಡಿಸುತ್ತಿದುದು ನನಗೆ ಈಗಲೂ ನೆನಪಿದೆ. ಮದುವೆ ಇನ್ನಿತರ ಸಮಾರಂಭಗಳಿಗೆ ಪೇಟೆಗೆ ಹೋದಾಗ ನಿಮ್ಮ ಅಪ್ಪ ನನ್ನ ಕೈಗೆ ಮತ್ತು ಮುಡಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು ಎಂದು ಅವ್ವ ನೆನಪಿಸುತ್ತಾಳೆ. ಸಾಮಾನ್ಯವಾಗಿ ಮುಂಗೋಪಿಯಾಗಿರುತ್ತಿದ್ದ ಅಪ್ಪ, ಬಳೆಯ ವಿಷಯದಲ್ಲಿ ಮಾತ್ರ ತುಂಬಾ ತಾಳ್ಮೆಯಿಂದ ಇರುತ್ತಿದ್ದರು. ತನಗಿಷ್ಟವಾದದ್ದನ್ನು ಆಯ್ದುಕೊಳ್ಳಲು ಬಿಡುತ್ತಿದ್ದರು ಎಂದು ಅವ್ವ ಹೇಳುತ್ತಾಳೆ. ಅಂದು ಅಪ್ಪನ ತಿಥಿ ಕಾರ್ಯ ಕೊನೆಯ ಹಂತಕ್ಕೆ ಬಂದಿತ್ತು. ಬಳೆ ಒಡೆಯುವ ಮುಂಚಿನ ಶಾಸ್ತ್ರ ಮನೆಯಲ್ಲಿ ಜರುಗುತ್ತಿತ್ತು. ಅದೆಲ್ಲಿತ್ತೋ ಆ ದುಃಖ , ನೆನೆದಿದ್ದ ಬಂಧುಗಳ ಸಮ್ಮುಖದಲ್ಲಿ ನಮ್ಮವ್ವ ಗೋಳಾಡತೊಡಗಿದಳು. ನಮ್ಮೆಲ್ಲರನ್ನೂ ಶೋಕದ ಕಡಲಲ್ಲಿ ಮುಳುಗಿಸಿದಳು. ಹೆಂಗಸರು ಬಳೆಗೆ ಎಷ್ಟು ಮಹತ್ವ ಕೊಡುತ್ತಾರೆ ಎಂಬುದಕ್ಕೆ ಅಂದಿನ ದೃಶ್ಯ ನನಗೆ ಪ್ರತ್ಯಕ್ಷ ನಿದರ್ಶನವಾಯ್ತು. ಬಳೆ ಒಡೆಯುವ ಅನಿಷ್ಟ ಪದ್ಧತಿಯ ಬಗ್ಗೆಯೂ ಆಕ್ರೋಶವುಂಟಾಯಿತು. ಇಂದು, ನನ್ನ ಹೆಂಡತಿಗೆ ಪೇಟೆಯ ಅಂಗಡಿಗಳಲ್ಲಿ ಬಳೆಗಳನ್ನು ಕೊಡಿಸುವಾಗ ಅಪ್ಪ ನೆನಪಾಗುತ್ತಾನೆ. ಹೆಂಡತಿ ತನಗೆ ಇಷ್ಟ ಬಂದದ್ದನ್ನು ಆಯ್ದುಕೊಳ್ಳಲಿ ಎಂದು ನನಗೆ ನಾನೇ ಹೇಳಿಕೊಂಡು, ಅಪ್ಪನಂತೆಯೇ ತಾಳ್ಮೆವಹಿಸುತ್ತೇನೆ.
-ಗವಿಸ್ವಾಮಿ ದೇವರ ಬದಲು ಅಮ್ಮನಿಗೆ ಕೊಟ್ಟೆ!
ಆಗ ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದೆ ಅನ್ಸುತ್ತೆ. ಗೌರಿ ಹಬ್ಬದ ದಿನ, ಗೌರಿ ನೋಡೋಕಂತ ಹೊರಟವನಿಗೆ ಅಪ್ಪ, ಐದು ರುಪಾಯಿ ಕೊಟ್ಟು, “ಅಮ್ಮನಿಗೆ ಬಳೆ ಕೊಟ್ಟು, ಒಳ್ಳೆಯ ವಿದ್ಯೆ ಬುದ್ಧಿ ನೀಡು ಅಂತ ಬೇಡ್ಕೊ’ ಅಂತ ಹೇಳಿದರು. ನಾನು ಆ ಐದು ರೂಪಾಯಿಯ ಹಸಿರು ಬಳೆ ತಗೊಂಡವನು, ಗಣೇಶನ ಅಮ್ಮನಿಗೆ ನೀಡೋ ಬದಲು ಹಾಗೇ ಜೋಬಲ್ಲಿಟ್ಟುಕೊಂಡು ಮನೆಗೆ ಬಂದು, ನನ್ನ ಅಮ್ಮನಿಗೆ ಕೊಟ್ಟು ಕಾಲಿಗೆ ಬಿದ್ದು “ಒಳ್ಳೆಯ ವಿದ್ಯೆ ಬುದ್ಧಿ ಸಿಗಲಿ ಅಂತ ಆಶೀರ್ವಾದ ಮಾಡು’ ಅಂದಿದ್ದೆ. ಆಗ ನೀರು ತುಂಬಿಕೊಂಡಿದ್ದ ಅಮ್ಮನ ಕಣ್ಣೊಳಗಿಂದ ಎದ್ದು ಕಾಣಿ¤ದ್ದ ಅರಿಯಲಾಗದ ಭಾವವೊಂದು, ಅದ್ಯಾಕೋ ಬಳೆಯೊಂದಿಗೆ ನನ್ನ ಬಂಧವನ್ನು ಬಿಡಿಸಲಾಗದಂತೆ ಬೆಸೆದುಬಿಟ್ಟಿತ್ತು. ಆ ನಂತರದಲ್ಲಿ ಓದೋಕಂತ ಅಜ್ಜಿ ಮನೆ ಸೇರಿಕೊಂಡಾಗಲೂ, ಕೆಲಸಕ್ಕಾಗಿ ನಗರ ಸೇರಿಕೊಂಡ ನಂತರದಲ್ಲಿಯೂ ತೀವ್ರವಾಗಿ ಕಾಡುತ್ತಿದ್ದ ಒಂಟಿತನ-ಖನ್ನತೆಗಳಲ್ಲಿ, ಇನ್ಯಾವುದೋ ಬೇಸರದ, ನೋವಿನ ಘಳಿಗೆಯಲ್ಲಿ ಪ್ರತೀ ಬಾರಿ ಸಾಂತ್ವನ ಹೇಳಿ ಕೆನ್ನೆ ಸವರುತ್ತಿದ್ದದ್ದು, ಮನೆಯಿಂದ ಹೊರಡೋ ಸಮಯದಲ್ಲಿ ಯಾರಿಗೂ ತಿಳಿಯದಂತೆ ಡೈರಿಯೊಳಗೆ ಇಟ್ಟು ತಂದಿದ್ದ ಅಮ್ಮ ತೊಡುತ್ತಿದ್ದ ಗಾಜಿನ ಜೋಡಿ ಬಳೆಗಳು. ಅದೆಷ್ಟೇ ಕ್ಲಿಷ್ಟ ಸಂದರ್ಭದಲ್ಲಿಯೂ ಆ ಬಳೆಗಳ ಶಬ್ದ ಹೊಸ ಚೈತನ್ಯ ತುಂಬಿಬಿಡುತ್ತವೆ ಮನಸ್ಸಿಗೆ. ಹಬ್ಬ -ಹರಿದಿನ, ಮದುವೆ ಅಥವಾ ಮತ್ಯಾವುದೋ ಸಂದರ್ಭದಲ್ಲಿ ಬಳೆ ತೊಡಿಸಿಕೊಳ್ಳುವಾಗ ಅಮ್ಮನ ಕಣ್ಣಲ್ಲಿ ನೀರು ಕಾಣಿಸಿಕೊಳ್ಳುತ್ತಿತ್ತು. ನೋವು ಹೆಚ್ಚಾದರೆ ಅದು ಮುಖದಲ್ಲೂ ಕಾಣಿಸಿಕೊಳ್ಳುತ್ತಿತ್ತು. ಅಂಥ ಸಂದರ್ಭಗಳು, ನನ್ನ ಮನದಲ್ಲಿ ಅಚ್ಚಳಿಯದೆ ಉಳಿದುಹೋಗಿವೆ. ಬಹುಶಃ ಆ ಕಾರಣಕ್ಕೇ ಇರಬೇಕು. ಯಾವುದಕ್ಕೂ ಅಂಜದ ನನಗೆ, ಈಗಲೂ ಯಾರಾದರೂ ಬಳೆ ತೊಡಿಸಿಕೊಳ್ಳುವುದನ್ನು ನಿಂತು ನೋಡಲು ಸಾಧ್ಯವಾಗಿಯೇ ಇಲ್ಲ. -ಸುಧೀರ್ ಸಾಗರ್