Advertisement

Bangarpete: ಸಿಎಂ ಬರುವ ದಾರಿಗೆ ಮಾತ್ರ ಡಾಂಬರು!

04:47 PM Nov 09, 2023 | Team Udayavani |

ಬಂಗಾರಪೇಟೆ: ಜಿಲ್ಲೆಯ ಮೂರು ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಯರಗೋಳ್‌ ಅಣೆಕಟ್ಟು ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆ, ಸಿಎಂ ಬರುವ ರಸ್ತೆಗೆ ಮಾತ್ರ ಡಾಂಬರು ಹಾಕುತ್ತಿದ್ದು, ಇದೇ ರಸ್ತೆಯ ಉಳಿದ ಭಾಗಕ್ಕೆಡಾಂಬರು ಹಾಕದೇ ನಿರ್ಲಕ್ಷ್ಯವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ತಾಲೂಕಿನ ಗಡಿಭಾಗದಲ್ಲಿರುವ ಯರಗೋಳ್‌ ಅಣೆಕಟ್ಟು ಪ್ರದೇಶಕ್ಕೆ ಹೋಗಲು ಬಂಗಾರಪೇಟೆಯಿಂದ ಕಾಮಸಮುದ್ರ ಮಾರ್ಗದಲ್ಲಿಯೂ ಸಹ ರಸ್ತೆ ಅಭಿವೃದ್ಧಿ ಅರ್ಧಕ್ಕೆ ನಿಂತಿದೆ. ಮತ್ತೂಂದು ಮಾರ್ಗವಾಗಿರುವ ಬೂದಿಕೋಟೆ ರಸ್ತೆಯು ಸಹ ದುರಸ್ತಿಗೊಂಡಿದೆ. ಅದಕ್ಕಿಂತ ಮುಖ್ಯವಾಗಿ ತಾಲೂಕಿನ ಕಾಮಸಮುದ್ರ-ಬೂದಿಕೋಟೆ ವೃತ್ತದಿಂದ ಬಲಮಂದೆ ಹಾಗೂ ಯರಗೋಳ್‌ ಗ್ರಾಮದ ಮಾರ್ಗವಾಗಿ ಹಾದುಹೋಗುವ 9.75 ಕಿ.ಮೀ. ದೂರದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕಳೆದ ಬಿಜೆಪಿ ಸರ್ಕಾರದಲ್ಲಿ ಒಆರ್‌ಎಫ್ ನಿಧಿಯಿಂದ 7.7 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆಯಾಗಿತ್ತು. 2023ರ ಚುನಾವಣೆಗೂ ಮುನ್ನವೇ ಬಿಜೆಪಿ ಸರ್ಕಾರವು ಈ ಕಾಮಗಾರಿ ಅನುದಾನವನ್ನು ವಾಪಸ್‌ ಪಡೆದಿತ್ತು.

ಕಾಮಗಾರಿ ಬಿಲ್‌ ಪಾವತಿ ಆಗಿಲ್ಲ: ತಾಲೂಕಿನ ಕಾಮಸಮುದ್ರ-  ಬೂದಿಕೋಟೆ ವೃತ್ತದಿಂದ ಬಲ ಮಂದೆ ಹಾಗೂ ಯರಗೋಳ್‌ ಗ್ರಾಮದ ಮಾರ್ಗ ವಾಗಿ ಹಾದು ಹೋಗುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಪ್ರಥಮ ದರ್ಜೆ ಗುತ್ತಿಗೆದಾರರಾದ ಮಾಲೂರಿನ ಚಂಬೆ ನಾರಾಯಣ  ಸ್ವಾಮಿ ಟೆಂಡರ್‌ ಪಡೆದಿದ್ದಾರೆ. ಸುಮಾರು 10 ಕಿ.ಮೀ. ರಸ್ತೆಯ ಉದ್ದಕ್ಕೂ ರಸ್ತೆಯನ್ನು ಸಮತಟ್ಟು ಮಾಡಿ ರಸ್ತೆಯ ಉದ್ದಕ್ಕೂ ವೆಟ್‌ಮಿಕ್ಸ್‌ ಜಲ್ಲಿಯನ್ನು ಹಾಕಿಸಿದ್ದಾರೆ. ಗುತ್ತಿಗೆದಾರರಾದ ಚಂಬೆ ನಾರಾಯಣಸ್ವಾಮಿ ಇದೇ ರೀತಿಯಲ್ಲಿ ರಸ್ತೆ ಕಾಮಗಾರಿಗಳ ಟೆಂಡರ್‌ನ್ನು ಪಡೆದುಕೊಂಡು ರಸ್ತೆ ಅಭಿವೃದ್ಧಿಪಡಿಸಿ ಮೂರು ವರ್ಷ ಕಳೆದರೂ, ಇನ್ನೂ ಬಿಲ್‌ ಪಾವತಿ ಮಾಡದೇ ಇರುವುದರಿಂದ ಈ ಕಾಮಗಾರಿ ನಿಲ್ಲಿಸಿದ್ದರು ಎನ್ನಲಾಗಿದೆ.

ಉಳಿದ ರಸ್ತೆಗೆ ಡಾಂಬರು ಹಾಕಿಲ್ಲ: ನ.11ರಂದು ಯರಗೋಳ್‌ ಅಣೆಕಟ್ಟು ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಬರುತ್ತಿದ್ದಾರೆ. ಮುಖ್ಯಮಂತ್ರಿಗಳು ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯುವ ಸ್ಥಳದಿಂದ ಅಣೆಕಟ್ಟುವರೆಗೂ ಹಾಗೂ ಕಾಮಸಮುದ್ರ- ಬೂದಿಕೋಟೆ ವೃತ್ತದಿಂದ ಯರಗೋಳ್‌ ಅಣೆಕಟ್ಟು ಪ್ರದೇಶಕ್ಕೆ ಹೋಗುವ ವೃತ್ತದವರೆಗೂ ಈಗಾಗಲೇ ಡಾಂಬರು ಹಾಕಿದ್ದಾರೆ. ಈ ರಸ್ತೆಯು ತಮಿಳುನಾಡು ರಾಜ್ಯದ ಗಡಿಭಾಗದವರೆಗೂ ಸುಮಾರು 5 ಕಿ.ಮೀ. ದೂರವಿದೆ. ಈ ಬಾಕಿ ಇರುವ ರಸ್ತೆಗೆ ಡಾಂಬರು ಹಾಕದೇ ಹಾಗೇಯೇ ಬಿಟ್ಟಿದ್ದಾರೆ.

ರಸ್ತೆ ಕಾಮಗಾರಿಗೆ ಜಲ್ಲಿ ಸುರಿದು ವರ್ಷ ಆಯ್ತು:

Advertisement

ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ತಾಲೂಕಿನ ಬಲಮಂದೆ-ಕನಮನಹಳ್ಳಿ ಮಾರ್ಗದ ರಸ್ತೆಯು ಅಭಿವೃದ್ಧಿ ಕಾಣದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ರಸ್ತೆ ಅಭಿವೃದ್ಧಿ ಕಾಣದೆ ತಮಿಳುನಾಡಿಗೆ ಸಂಚರಿಸುವ ಮತ್ತು ಗಡಿಗ್ರಾಮಗಳ ಜನರು ಮೊಣಕಾಲುದ್ದ ಗುಂಡಿಗಳು ನಿರ್ಮಾಣವಾಗಿದ್ದ ರಸ್ತೆಯಲ್ಲೇ ಪ್ರಾಣಭಯದಲ್ಲಿ ಸಂಚರಿಸುತ್ತಿದ್ದರು. ಅಲ್ಪಸ್ವಲ್ಪ ಚೆನ್ನಾಗಿ ಇದ್ದಂತಹ ರಸ್ತೆಯನ್ನು ಕಾಮಗಾರಿಯ ನೆಪದಲ್ಲಿ ಕೆಡವಿ ಸುಮಾರು ಕನಮನಹಳ್ಳಿವರೆಗೂ ರಸ್ತೆಗೆ ಜಲ್ಲಿ ಹಾಗೂ ಎಂಸ್ಯಾಂಡ್‌ನ್ನು ಸುರಿದಿದ್ದಾರೆ. ಜಲ್ಲಿಯನ್ನು ಸುರಿದು ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಆರಂಭವಾಗಲಿಲ್ಲ. ಇದರಿಂದ ಜಲ್ಲಿಯ ನಡುವೆಯೇ ವಾಹನ ಸವಾರರು ಸಂಚರಿಸುವಂತಾಗಿದೆ.

ಡಾಂಬರು ಕಾಮಗಾರಿ ಪೂರ್ಣಗೊಳಿಸಲು ಗ್ರಾಮಸ್ಥರ ಆಗ್ರಹ:

ಸದ್ಯಕ್ಕೆ ಈ ರಸ್ತೆಯ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಇಲ್ಲ. ಈ ರಸ್ತೆಯಲ್ಲಿ ಸಿಎಂ ಹಾಗೂ ಸಚಿವರು ಓಡಾಡುವುದರಿಂದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಒತ್ತಡ ತಂದು ರಸ್ತೆಗೆ ಡಾಂಬರು ಹಾಕಿಸಿದ್ದಾರೆ. ಯರಗೋಳ್‌ ಅಣೆಕಟ್ಟು ಉದ್ಘಾಟನೆಗೆ ಅವಶ್ಯಕವಾದ ರಸ್ತೆಗೆ ಮಾತ್ರ ಡಾಂಬರು ಹಾಕಿ ಸಮಸ್ಯೆಯಿಂದ ಪಾರಾಗಲು ಲೋಕೋಪಯೋಗಿ ಇಲಾಖೆಯು ಈ ಕ್ರಮ ಕೈಗೊಂಡಿದ್ದು, ಉಳಿದಂತೆ ಕನಮನಹಳ್ಳಿ ಗ್ರಾಮದವರೆಗೂ ಹಾಕಲು ಸಂಬಂಧಪಟ್ಟ ಗುತ್ತಿಗೆದಾರರು ಒಪ್ಪದ ಕಾರಣ ಈ ರಸ್ತೆಗೆ ಡಾಂಬರು ಇಲ್ಲದಂತಾಗಿದೆ. ಇದರಿಂದ ಈ ಭಾಗದ ಗ್ರಾಮಸ್ಥರಿಗೆ ತೀವ್ರ ಬೇಸರವಾಗಿದ್ದು, ಮುಖ್ಯಮಂತ್ರಿ ಬರುವ ವೇಳೆಯೇ ಈ ರಸ್ತೆಗೆ ಮುಕ್ತಿ ಸಿಗದಿದ್ದರೇ ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಠವನ್ನು ಎದುರಿಸಬೇಕಾಗುತ್ತದೆ ಎನ್ನುವ ಆತಂಕ ಎದುರಿಸುತ್ತಿದ್ದಾರೆ.

ಯರಗೋಳ್‌ ಅಣೆಕಟ್ಟು ತುಂಬಿರುವು ದರಿಂದ ಅಣೆಕಟ್ಟು ನೋಡಲು ರಾಜ್ಯದಿಂದ ಅಲ್ಲದೇ ತಮಿಳು  ನಾಡಿನಿಂದಲೂ ಪ್ರವಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪ್ರಸ್ತುತ ಡಾಂಬರು ಹಾಕದೇ ನಿಲ್ಲಿಸಿರುವ ಕನಮನ ಹಳ್ಳಿಯಿಂದ ದೊಡ್ಡಪೊನ್ನಂಡಹಳ್ಳಿಗೆ ಡಾಂಬರು ಹಾಕಿಲ್ಲ. ಇದರಿಂದ ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ದೊಡ್ಡ ಕಿರಿಕಿರಿಯಾಗಿದೆ. ನ.11ರ ವೇಳೆಗೆ ಬಾಕಿ ಇರುವಕಾಮಗಾರಿ ಮುಗಿ ಸದಿದ್ದರೇ ಗ್ರಾಮಸ್ಥರೊಂದಿಗೆ ಹೋರಾಟ ಮಾಡಲಾಗುವುದು.ಮನ್ನೋಜಿರಾವ್‌, ಕನಮನಹಳ್ಳಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

ಕಾಮ ಸಮುದ್ರ- ಬೂದಿಕೋಟೆ ವೃತ್ತದಿಂದ ಬಲಮಂದೆ ಹಾಗೂ ಯರಗೋಳ್‌ ಗ್ರಾಮದ ಮಾರ್ಗವಾಗಿ ಹಾದುಹೋಗುವ 9.75 ಕಿ.ಮೀ. ದೂರದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗಿದೆ. ಈ ಕಾಮಗಾರಿಯು ಅರ್ಧದಲ್ಲಿತ್ತು. ಈ ರಸ್ತೆಯಲ್ಲಿ ಈಗಾಗಲೇ 7 ಕಿ.ಮೀ. ದೂರದ ರಸ್ತೆಗೆ ಡಾಂಬರುಮಾಡಲಾಗಿದೆ. ಸದ್ಯಕ್ಕೆ ಉಳಿದಿರುವ ರಸ್ತೆಗೆ ಡಾಂಬರು ಹಾಕಲು ಮಳೆಅಡ್ಡಿಯಾಗಿದ್ದು, ಇನ್ನೆರಡು ದಿನದಲ್ಲಿ ಡಾಂಬರು ಹಾಕಲಾಗುವುದು.ಕೆ.ಎಲ್‌.ರಾಮಮೂರ್ತಿ, ಕಾರ್ಯಪಾಲಕ ಎಂಜಿನಿಯರ್‌

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next