ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ “ಬಂಗಾರಪ್ಪ ಗುಡ್ಡೆ’ ಗ್ಯಾಂಗ್‌ನ 7 ಮಂದಿ ಆರೋಪಿಗಳನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ಅಲಿಯಾಸ್ ಗಿರಿ, ರಾಜು ಎನ್ ಅಲಿಯಾಸ್ ಡಾಗು, ಜೀವನ್ ಅಲಿಯಾಸ್ ಕೋಳಿ, ರಾಜು ಕೆ. ಅಲಿಯಾಸ್ ಹೆಂಡ್ರು, ಕಿರಣ್ ಅಲಿಯಾಸ್ ಮೊಟ್ಟೆ, ಜೈ ಕಿರಣ್ ಅಲಿಯಾಸ್ ಕಿರ್ಬಿ, ಮಹದೇವ ಬಂಧಿತರು.
ಏ.6ರಂದು ರಾತ್ರಿ ಸ್ನೇಹಿತರ ಬಳಿ ಕಿತ್ತುಕೊಂಡಿದ್ದ ಹಣ ಕೇಳಲು ಬಂದಿದ್ದ ವೇಳೆ ರಮೇಶ್ ಎಂಬಾತನ ಮೇಲೆ
ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗಳು, ಮೃತದೇಹವನ್ನು ಹೊಸಕೆರೆಹಳ್ಳಿಯ ಕೃಷ್ಣಪ್ಪ ಲೇಔಟ್ ಬಳಿ ಎಸೆದು ಹೋಗಿದ್ದರು. ಮಾರನೇ ದಿನ ಕೃತ್ಯ ಬೆಳಕಿಗೆ ಬಂದಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಆರ್.ಆರ್.ನಗರ ಇನ್‌ಸ್ಪೆಕ್ಟರ್ ಎಂ.ಆರ್. ಸುರೇಶ್ ನೇತೃತ್ವದ ತಂಡ, ಏಳು ಆರೋಪಿಗಳನ್ನು ಬಂಧಿಸಿದೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆ್ಯಕ್ಟೀವ್ ಪಾಂಡು, ಹರೀಶನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಕೇಳಲು ಹೋದಾಗ ಕೊಲೆ ಕೊಲೆಯಾದ ಮೂಕಾಂಬಿಕ ನಗರದ ನಿವಾಸಿ ರಮೇಶ್, ಸಣ್ಣ-ಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು. ಏ.6ರಂದು 11.30ರ ಸುಮಾರಿಗೆ ಮನೆಯ ಬಳಿಯಿದ್ದ ಸ್ನೇಹಿತ ರಾಮು ಕರೆ ಮಾಡಿ, ನನ್ನ ಮಗ ರಮೇಶ್ ಹಾಗೂ ಚಿನ್ಮಯ್ ಮೇಲೆ ಬಂಗಾರಪ್ಪ ಗುಡ್ಡೆ ಹುಡುಗರು ಹಲ್ಲೆ ನಡೆಸಿ 30 ಸಾವಿರ ರೂ. ಹಣ ಕಿತ್ತುಕೊಂಡಿದ್ದಾರೆ. ವಾಪಸ್ ಪಡೆದುಕೊಂಡು ಬರೋಣ ಎಂದು ಕರೆದಿದ್ದರಿಂದ ಅವರ ಜತೆ ತೆರಳಿದ್ದರು.
ಬಂಗಾರಪ್ಪ ನಗರದ ಬಳಿ ಹೋದ ರಮೇಶ್, ರಾಮು, ಕಾರ್ತಿಕ್ ಎಂಬವರು, ಮಕ್ಕಳಿಂದ ಕಿತ್ತುಕೊಂಡ ಹಣ ಹಿಂದಿರುಗಿಸುವಂತೆ ಸಂತೋಷ್ ಹಾಗೂ ಇತರ ಆರೋಪಿಗಳನ್ನು ಕೇಳಿದ್ದಾರೆ. ಈ ವೇಳೆ ಜಗಳವಾಗಿ, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಮು, ಅವರ ಮಕ್ಕಳಾದ ರಮೇಶ್, ರಾಜು, ಸ್ನೇಹಿತ ಚಿನ್ಮಯ್ ಪ್ರಶಾಂತ್ ಕಾರ್ತಿಕ್ ಓಡಿಹೋಗಿದ್ದಾರೆ.
ಇತ್ತ ರಮೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗಳು, ಕೊಲೆಗೈದು ಮೃತದೇಹವನ್ನು ಕೃಷ್ಣಪ್ಪ ಲೇಔಟ್ ಬಳಿ ಎಸೆದು ಹೋಗಿದ್ದರು. ಮಾರನೇ ದಿನ ವಾಕಿಂಗ್ ಹೋದ ಸಾರ್ವಜನಿಕರು ಶವ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದರು.