ಬಂಗಾರಪೇಟೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬೂದಿಕೋಟೆ ಮಾರ್ಕಂಡೇಯಗೌಡ ನೇತೃತ್ವದ ಆಡಳಿತ ಮಂಡಳಿ ಒಂದು ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಯಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಿಲ್ಲ. ಟೆಂಡರ್ ಕರೆಯದೇ ಅಕ್ರಮವಾಗಿ ಕಟ್ಟಡ ನಿರ್ಮಾಣವನ್ನು ತಕ್ಷಣವೇ ಸಹಕಾರ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಎಸ್.ಎನ್
.ನಾರಾಯಣಸ್ವಾಮಿ ದೂರು ನೀಡಿದ್ದಾರೆ.
ಪಟ್ಟಣದ ಸರ್ಕಾರಿ ಅತಿಥಿ ಗೃಹ ಎದುರಿನಲ್ಲಿರುವ ಟಿಎಪಿಸಿಎಂಎಸ್ ಜಾಗದಲ್ಲಿ 10 ಅಂಗಡಿಗಳುಳ್ಳ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿದೆ. ಟಿಎಪಿಸಿಎಂಎಸ್ ಅಧ್ಯಕ್ಷ ಮಾರ್ಕಂಡೇಯಗೌಡರ ನೇತೃತ್ವದ ಸಮಿತಿ ನಿರ್ವಹಣೆ ಮಾಡುತ್ತಿದ್ದು, ಸರ್ಕಾರದ ಸುತ್ತೋಲೆ ಹಾಗೂ ಟೆಂಡರ್ ಪ್ರಕ್ರಿಯೆ ನಡೆಸದೇ ಏಕಾಏಕಿ ಕಾನೂನಿಗೆ ವಿರುದ್ಧ ಉಪ ಸಮಿತಿ ರಚಿಸಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಟಿಎಪಿಸಿಎಂಎಸ್‌ನ 2 ಕೋಟಿ ಅಧಿಕ ಬೆಲೆ ಬಾಳುವ ಆಸ್ತಿಯನ್ನು ಆಡಳಿತ ಮಂಡಳಿಯೇ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದೆ. ಕ್ಯಾಸಂಬಳ್ಳಿಯಲ್ಲಿರುವ ಕಟ್ಟಡ 10 ಲಕ್ಷ ರೂ, ಹಾಗೂ ಬೇತಮಂಗಲದಲ್ಲಿರುವ ಆಸ್ತಿಯನ್ನು 1.15 ಕೋಟಿಗೆ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಹಕಾರ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರದೇ ಟಿಎಪಿಸಿಎಂಎಸ್ ಆಸ್ತಿ ಅಕ್ರಮವಾಗಿ ಮಾರಿ, ಆ ಹಣದಿಂದ ಟೆಂಡರ್ ಪ್ರಕ್ರಿಯೆಗಳನ್ನು ಪಾಲಿಸದೇ ಸಮಿತಿಯಿಂದಲೇ ಹಣ ಡ್ರಾ ಮಾಡಿ, ಅಕ್ರಮವಾಗಿ ಸಂಕೀರ್ಣ ನಿರ್ಮಾಣ ಮಾಡುತ್ತಿರುವುದಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತಗೆ ಸಹಕಾರ ಸಚಿವ ಎಸ್ .ಟಿ.ಸೋಮಶೇಖರ್ ಅವರಿಗೆ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ, ಸಹಕಾರ ಇಲಾಖೆ ಜಂಟಿ ಉಪನಿಬಂಧಕರಿಗೆ ಲಿಖೀತ ದೂರು ನೀಡಿದ್ದಾರೆ.
ಲೋಕೋಪಯೋಗಿ ದರ ದಾಖಲಿಸದೇ ತಮ್ಮ ಇಷ್ಟಾನುಸಾರವಾಗಿ ಅಂದಾಜುಪಟ್ಟಿ ಮಾಡಿಕೊಂಡು ಒಂದು ಕೋಟಿ ಹಗರಣ ಮಾಡಿರುವ ಟಿಎಪಿಸಿಎಂಎಸ್ ಅಧ್ಯಕ್ಷರು, ಸಿಇಒ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ ಸಮಿತಿಯನ್ನು ಸೂಪರ್‌ಸೀಡ್ ಮಾಡಬೇಕು. ಈ ಹಗರಣದ ತನಿಖೆ ಮುಗಿಯುವವರೆಗೂ ಟಿಎಪಿಸಿಎಂಎಸ್‌ನಲ್ಲಿ ಹಣಕಾಸಿನ ವ್ಯವಹಾರ ನಡೆಸದಂತೆ ಕ್ರಮಕೈಗೊಳ್ಳುವಂತೆ ಸಹಕಾರ ಇಲಾಖೆಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ದೂರು ನೀಡಿದ್ದಾರೆ.
ಟಿಎಪಿಸಿಎಂಎಸ್‌ನ ಆಡಳಿತ ಮಂಡಳಿ, ಸಹಕಾರ ಇಲಾಖೆ, ಸರ್ಕಾರದ ಅನುಮೋದನೆ ಪಡೆಯದೇ ಸಂಕೀರ್ಣ ನಿರ್ಮಾಣದಲ್ಲಿ ಭ್ರಷಾಚಾರ, ಅಕ್ರಮ ನಡೆದಿದೆ. ಕೂಡಲೇ ಸೂಪರ್ ಸೀಡ್ ಮಾಡಿ, ಕ್ರಮಕೈಗೊಳ್ಳಬೇಕು.
●
ಎಸ್.ಎನ್.ನಾರಾಯಣಸ್ವಾಮಿ,
ಶಾಸಕರು
ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸಹಕಾರ ಇಲಾಖೆ ಉಪ ನಿಬಂಧಕರಿಂದ ಅನುಮೋದನೆ ಪಡೆಯಲಾಗಿದೆ. ದುಂದುವೆಚ್ಚ ಹಾಗೂ ಗುಣಮಟ್ಟದ ಕಾರಣಕ್ಕಾಗಿ ಟೆಂಡರ್ ಕರೆದಿಲ್ಲ.
● ಮಾರ್ಕಂಡೇಯಗೌಡ,
ಅಧ್ಯಕ್ಷರು, ಟಿಎಪಿಸಿಎಂಎಸ್
●
ಎಂ.ಸಿ.ಮಂಜುನಾಥ್