ಬೆಂಗಳೂರು: ಹಿಂದೂಗಳ ಹೆಸರನ್ನು ಇಟ್ಟುಕೊಂಡು ವಾಣಿಜ್ಯ ನಗರಿ ಬೆಂಗಳೂರಿನ ಜಿಗಣಿ ಸಮೀಪ ವಾಸವಾಗಿದ್ದ ಪಾಕಿಸ್ತಾನಿ ಕುಟುಂಬ ಸದಸ್ಯರು ಹಾಗೂ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿರುವ ಘಟನೆ ನಡೆದಿದ್ದು, ತಡವಾಗಿ(ಸೆ.30) ಬಹಿರಂಗವಾಗಿದೆ.
ಪಾಕಿಸ್ತಾನ ಪ್ರಜೆಯ ಪತ್ನಿ ಬಾಂಗ್ಲಾದೇಶದವರಾಗಿದ್ದು, ಇಬ್ಬರು ಮಕ್ಕಳ ಜತೆ ಜಿಗಣಿ ಸಮೀಪದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.
ಆರ್ಥಿಕ ಸಮಸ್ಯೆ, ಗಲಭೆಯಿಂದಾಗಿ ಬಂಧಿತ ವ್ಯಕ್ತಿ ಪಾಕ್ ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದ. ಅಲ್ಲಿ ಢಾಕಾದಲ್ಲಿ ಯುವತಿಯೊಬ್ಬಳನ್ನು ವಿವಾಹವಾಗಿದ್ದ. 2014ರಲ್ಲಿ ಪತ್ನಿ ಜೊತೆ ಅಕ್ರಮವಾಗಿ ದೆಹಲಿಗೆ ಬಂದು, ಅಲ್ಲಿ ವ್ಯಕ್ತಿಯೊಬ್ಬನ ನೆರವಿನೊಂದಿಗೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ.
2018ರಲ್ಲಿ ಬೆಂಗಳೂರಿನ ಜಿಗಣಿಗೆ ಬಂದಿದ್ದ ಪಾಕ್ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ. ಶಂಕರ್ ಶರ್ಮಾ ಎಂದು ಹೆಸರು ಬದಲಿಸಿಕೊಂಡಿದ್ದ ರಶೀದ್ ಅಲಿ ಸಿದ್ದಿಕಿ ಈಗ ಪೊಲೀಸರ ಅತಿಥಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಪಾಕಿಸ್ತಾನ ಪ್ರಜೆ ಮತ್ತು ಇತರ ಮೂವರು ವಿದೇಶಿಯರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ಜಿಗಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.