Advertisement
11 ಕೆವಿ ಎತ್ತರಿಸಿದ ವಿದ್ಯುತ್ ಎಚ್‌ಟಿ ಮಾರ್ಗವು ಹಾದುಹೋದ ಅಣತಿ ದೂರದಲ್ಲೊಂದು ಅಪಾರ್ಟ್‌ಮೆಂಟ್ ಇದೆ. ಅದು ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಂಡಿದೆ. ಅದಕ್ಕೆ ಪೂರಕವಾಗಿ 11 ಕೆವಿ ಮಾರ್ಗದ ಎಲ್‌ಬಿಎಸ್ (ಲೋಡ್ ಬ್ರೇಕ್ ಸ್ವಿಚ್) ಇದ್ದು, ಅದಕ್ಕೆ ಇಲಿ ಬಾಯಿ ಹಾಕಿದೆ. ವೈರ್‌ಗಳನ್ನು ಕಚ್ಚಿದ್ದರಿಂದ ಶಾರ್ಟ್ ಸರ್ಕಿಟ್ ಆಗಿದೆ. ಪರಿಣಾಮ ಎಚ್‌ಟಿ ಲೈನ್‌ನ ದುರ್ಬಲ ಪಾಯಿಂಟ್‌ನಲ್ಲಿ ತಂತಿ ತುಂಡಾಗಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವೈರ್ ಅನ್ನು ಕಚ್ಚಿದ ಇಲಿ ಕೂಡ ಅಲ್ಲಿಯೇ ಸತ್ತು ಬಿದ್ದಿರುವುದೇ ಘಟನೆಗೆ ಸಾಕ್ಷಿ ಎಂದೂ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
Related Articles
Advertisement
2 ವಾರದಲ್ಲಿ ವರದಿ ಸಲ್ಲಿಸಲು ಸೂಚನೆ:
ಬೆಂಗಳೂರು: ನಗರದ ಹೋಪ್ ಫಾರಂ ಬಳಿ ನಡೆದ ವಿದ್ಯುತ್ ಅವಘಡ ಪ್ರಕರಣದಲ್ಲಿ ತಾಯಿ-ಮಗು ಸಾವಿಗೀಡಾದ ಘಟನೆ ತನಿಖೆಗಾಗಿ ತಜ್ಞರ ಸ್ವತಂತ್ರ ಸಮಿತಿ ರಚಿಸಿ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದ್ದು, ಎರಡು ವಾರದಲ್ಲಿ ವರದಿ ಸಲ್ಲಿಸಲು ಸೂಚಿಸಿದೆ.
ಸಮಿತಿಯಲ್ಲಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿವೃತ್ತ ನಿರ್ದೇಶಕ (ಪ್ರಸರಣ) ಎಸ್. ಸಮಂತ್, ಇಂಧನ ಇಲಾಖೆಯ ಆರ್‌ಟಿ ಆ್ಯಂಡ್ ಆರ್‌ಡಿ ಮುಖ್ಯ ಎಂಜಿನಿಯರ್ ಬಿ.ವಿ. ಗಿರೀಶ್, ಸಿಪಿಆರ್‌ಐ ಜಂಟಿ ನಿರ್ದೇಶಕ ಪ್ರಭಾಕರ್, ಬೆಂಗಳೂರು ಪೂರ್ವ ವಿಭಾಗದ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕ ಜಿ. ರವಿಕುಮಾರ್ ಇದ್ದಾರೆ. ಈ ಸಮಿತಿಯು ವಿದ್ಯುತ್ ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಿ, ಘಟನೆಗೆ ನಿಖರ ಕಾರಣಗಳನ್ನು ಕಂಡುಹಿಡಿಯುವುದರ ಜತೆಗೆ ಇಂತಹ ಘಟನೆಗಳು ಮರುಕಳಿಸದಂತೆ ತೆಗೆದುಕೊಳ್ಳಬಹುದಾದ ಎಲ್ಲ ತಾಂತ್ರಿಕ ಸಾಧ್ಯಾಸಾಧ್ಯತೆಗಳು ಮತ್ತು ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ಕೆಪಿಟಿಸಿಎಲ್ ಕೂಡಲೇ ಅನುಸರಿಸಬೇಕಾದ ವಿದ್ಯುತ್ ಸುರಕ್ಷಾ ಕ್ರಮಗಳ ಬಗ್ಗೆ ಸಲಹೆ ನೀಡಲಿದೆ. ಮುಂದಿನ ಎರಡು ವಾರಗಳಲ್ಲಿ ವರದಿ ಸಲ್ಲಿಸಲು ಆದೇಶದಲ್ಲಿ ಹೇಳಲಾಗಿದೆ.
15 ದಿನಗಳಲ್ಲಿ ಓಎಫ್ಸಿ ಕೇಬಲ್ ತೆರವುಗೊಳಿಸದಿದ್ದರೆ ಕತ್ತರಿ ಪ್ರಯೋಗ: ಓವರ್‌ಹೆಡ್ ವಿದ್ಯುತ್ ತಂತಿ ಅವಘಡದ ಬೆನ್ನಲ್ಲೇ ನಗರದ ಫುಟ್‌ಪಾತ್‌ಗಳಲ್ಲಿ ಎಲ್ಲೆಂದರಲ್ಲಿ ಜೋತುಬಿದ್ದಿರುವ ಓಎಫ್ಸಿ ಕೇಬಲ್‌ಗಳಿಗೂ ಕತ್ತರಿ ಹಾಕಲು ಸರ್ಕಾರ ಮುಂದಾಗಿದೆ. ಈಗಾಗಲೇ ಬಿಬಿಎಂಪಿ ಹಲವಾರು ಕಡೆಗಳಲ್ಲಿ ಹೊಸ ರಸ್ತೆಗಳ ನಿರ್ಮಾಣದ ಮೂಲಕ ಓಎಫ್ಸಿ ಕೇಬಲ್‌ಗಳ ನೆಲದಡಿ ಅಳವಡಿಕೆಗೆ ಡಕ್ಟ್ಗಳನ್ನು ನಿರ್ಮಿಸಿದೆ. ಆದಾಗ್ಯೂ ಪಾದಚಾರಿ ಮಾರ್ಗಗಳಲ್ಲಿ, ಮರಗಳ ಕೊಂಬೆಗಳಲ್ಲೆಲ್ಲಾ ಕೇಬಲ್‌ಗಳು ಜೋತುಬಿದ್ದಿವೆ. ಇವುಗಳಿಂದ ಪಾದಚಾರಿಗಳಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವುಗಳ ತೆರವಿಗೆ 15 ದಿನಗಳ ಗಡುವು ನೀಡಲಾಗುವುದು. ಅಷ್ಟರಲ್ಲಿ ತೆರವುಗೊಳಿಸಬೇಕು, ಇಲ್ಲದಿದ್ದರೆ ಮುಲಾಜಿಲ್ಲದೆ ಕತ್ತರಿಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಗಡುವು ಎಲ್ಲೆಲ್ಲಿ ಡಕ್ಟ್ಗಳ ಸೌಲಭ್ಯವಿದೆಯೋ ಅಲ್ಲಿನ ಫುಟ್‌ಪಾತ್‌ಗಳಲ್ಲಿ ಜೋತುಬಿದ್ದಿರುವ ಓಎಫ್ಸಿ ಕೇಬಲ್‌ಗಳಿಗೆ ಅನ್ವಯ ಆಗಲಿದೆ. ಎಲ್ಲಿ ಡಕ್ಟ್ಗಳಿಲ್ಲವೋ ಅಲ್ಲಿ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಚರ್ಚಿಸಲಾಗುವುದು ಎಂದರು.
ಎಫ್ಎಸ್‌ಎಲ್ ವರದಿ ಆಧರಿಸಿ ಕ್ರಮ:
ಬೆಂಗಳೂರು: ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್) ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲೆಕ್ಟ್ರಿಕಲ್ ಇನ್ ಸ್ಪೆಕ್ಟರ್ ಹಾಗೂ ಎಫ್ಎಸ್‌ಎಲ್ ಅಧಿಕಾರಿಗಳ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆರೋಪಿತ ಅಧಿಕಾರಿಗಳನ್ನು ಬಂಧಿಸಿ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಿಂಗಳಿಗೊಮ್ಮೆ ಸುರಕ್ಷಾ ದಿನಕ್ಕೆ ಸೂಚನೆ:
ಬೆಂಗಳೂರು: ತಾಯಿ- ಮಗು ಸಾವು ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಇಂಧನ ಇಲಾಖೆ, ಘಟನೆಗೆ ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡುಬಂದಿದೆ. ಇಂತಹ ಘಟನೆ ಮರುಕಳಿಸದಿರಲು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
ಅದರಂತೆ ಎಸ್ಕಾಂಗಳ ಮಟ್ಟದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳನ್ನು ಒಳಗೊಂಡಂತೆ ತಿಂಗಳಿಗೊಮ್ಮೆ ಸುರಕ್ಷತಾ ದಿನ ಹಮ್ಮಿಕೊಂಡು, ಉತ್ತಮ ಅಭ್ಯಾಸಗಳ ಬಗ್ಗೆ ವಿನಿಮಯ ಮಾಡಿಕೊಳ್ಳಬೇಕು. ಉಪಕೇಂದ್ರಗಳ ಆಪರೇಟರ್‌ಗಳು 11 ಕೆವಿ ಮಾರ್ಗಗಳು ಡಬಲ್ ಒಸಿಆರ್/ ಇಎಫ್ಆರ್ ಮೂಲಕ ಟ್ರಿಪ್ ಆದಾಗ ಸಂಬಂಧಪಟ್ಟವರನ್ನು ಸಂಪರ್ಕಿಸಿ, ಅವರ ಸಹಮತದೊಂದಿಗೆ ಮಾರ್ಗಗಳ ಟೆಸ್ಟ್ ಚಾರ್ಜ್ ಮಾಡಬೇಕು. ಈ ಕುರಿತು ಆಯಾ ಉಪಕೇಂದ್ರಗಳ ಆಪರೇಟರ್‌ಗಳು ಮಾಹಿತಿ ಹೊಂದಿರುವುದನ್ನು ನೋಡಲ್ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದೆ.