Advertisement

Bangalore: ಟ್ರಾಫಿಕ್‌ ಜಾಮ್‌ಗೆ ಸಿಲಿಕಾನ್‌ ಸಿಟಿ ಹೈರಾಣ!

03:36 PM Sep 29, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯ ಬಹುತೇಕ ರಸ್ತೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ವಿಭಾಗದ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Advertisement

ಸೆ.28ರಿಂದ ಅ.2ರವರೆಗೆ ಐದು ದಿನಗಳ ಕಾಲ ಸಾಲು ಸಾಲು ರಜೆಯಿರುವ ಹಿನ್ನೆಲೆಯಲ್ಲಿ ಬಹು ತೇಕರು ಬೆಂಗಳೂರಿನಿಂದ ಊರಿನತ್ತ ಮುಖ ಮಾಡುತ್ತಿದ್ದಾರೆ. ಗಣೇಶ ವಿಸರ್ಜನೆ ಮತ್ತು ಜನ ಸಂಚಾರ ಹೆಚ್ಚಾಗುತ್ತಿದೆ. ಪರಿಣಾಮ ಬುಧವಾರ ಹಾಗೂ ಗುರುವಾರ ಸಂಜೆ, ಬೆಂಗಳೂರು ಟೆಕ್‌ ಕಾರಿಡಾರ್‌ನ ಹೊರ ವರ್ತುಲ ರಸ್ತೆಯು ಭಾರೀ ಸಂಚಾರ ದಟ್ಟಣೆಯಿಂದ ಕೂಡಿತ್ತು.

ಮಹದೇವಪುರ ವಲಯದಲ್ಲಿರುವ ಹೊರ ವರ್ತುಲ ರಸ್ತೆ, ಔಟರ್‌ರಿಂಗ್‌ ರಸ್ತೆಯಲ್ಲಿ ಭಾರೀ ದಟ್ಟಣೆ ಉಂಟಾಗಿತ್ತು. ಬುಧವಾರ ಸಾಯಂಕಾಲ 4ರಿಂದ ರಾತ್ರಿ 8 ಗಂಟೆಯವರೆಗೆ ತೀವ್ರ ಟ್ರಾಫಿಕ್‌ ದಟ್ಟಣೆ ಉಂಟಾಗಿದೆ. ಗುರುವಾರ ಕೊಂಚ ಸಂಚಾರ ದಟ್ಟಣೆ ತಗ್ಗಿದರೂ ವಾಹನ ಸವಾರರ ಪರದಾಟ ಮುಂದುವರಿದಿದೆ. ಮೆಜೆಸ್ಟಿಕ್‌, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಎಂ.ಜಿ.ರಸ್ತೆ, ರೆಸಿಡೆನ್ಸಿ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಸೇರಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದವು.

ಒಆರ್‌ಆರ್‌ಸಿಎ ವರದಿಯಲ್ಲೇನಿದೆ?:

ಹೊರ ವರ್ತುಲ ರಸ್ತೆಯಲ್ಲಿ ಸರಾಸರಿ ಪೀಕ್‌ ಅವರ್‌ಗಳಲ್ಲಿ ವಾಹನಗಳ ವೇಗವು 4.4 ಕಿ.ಮೀ. ಇರಲಿದ್ದು, ದಟ್ಟಣೆಯು 3 ಕಿ.ಮೀ. ಗಿಂತ ಹೆಚ್ಚು ವಿಸ್ತರಿಸುತ್ತದೆ ಎಂಬ ಅಂಶಗಳು ಕರ್ನಾಟಕ ಸರ್ಕಾರಕ್ಕೆ ಔಟರ್‌ ರಿಂಗ್‌ ರೋಡ್‌ ಕಂಪನಿಗಳ ಸಂಘ (ಒಆರ್‌ಆರ್‌ ಸಿಎ) ಸಲ್ಲಿಸಿದ ಇತ್ತೀಚಿನ ವರದಿಯಿಂದ ತಿಳಿದು ಬಂದಿದೆ. ‌

Advertisement

ಬೆಂಗಳೂರಿನ ಟೆಕ್‌ ಕಾರಿಡಾರ್‌ನಲ್ಲಿ (17 ಕಿ.ಮೀ. ಕೆ.ಆರ್‌.ಪುರಂ ಮತ್ತು ಸೆಂಟ್ರಲ್‌ ಸಿಲ್ಕ್ ಬೋರ್ಡ್‌) ಸಂಚಾರ ದಟ್ಟಣೆಯಿಂದ ವರ್ಷಕ್ಕೆ 15 ಶತಕೋಟಿ ರೂ. ವೆಚ್ಚ ಬೀಳುತ್ತದೆ. 2022ರಲ್ಲಿ ಒಆರ್‌ಆರ್‌ ಈ 17 ಕಿ.ಮೀ. ವ್ಯಾಪ್ತಿಯನ್ನು ಪ್ರತ್ಯೇಕ ಪುರಸಭೆ ವಲಯವೆಂದು ಘೋಷಿಸಲು ಪ್ರಸ್ತಾಪಿಸಿದೆ. ಪ್ರತ್ಯೇಕ ಪುರಸಭೆಯ ವಲಯವು ಕಾರಿಡಾರ್‌ ಅನ್ನು ವಿಶ್ವದರ್ಜೆಯ ತಂತ್ರಜ್ಞಾನ ಕಾರಿಡಾರ್‌ ಆಗಿ ಪರಿವರ್ತಿಸಲು 5 ವರ್ಷದ ಯೋಜನೆ ಹೊಂದಿರಬೇಕು ಎಂದು ತಿಳಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ಒಆರ್‌ಆರ್‌ ಅಭಿವೃ ದ್ಧಿಯನ್ನು ನಿರ್ಲಕ್ಷಿಸಲಾಗಿದೆ. ಮೂಲಸೌಕರ್ಯ ಒದಗಿಸಲು ಮಾರ್ಗಸೂಚಿ ಹಾಗೂ ಕ್ರಮ ಕೈಗೊಂಡಿಲ್ಲ. ಆಗಾಗ್ಗೆ ಬೆಂಗಳೂರಿನಲ್ಲಿ ನಡೆಯು ತ್ತಿರುವ ಕಾಮಗಾರಿ, ಅಪಘಾತಗಳು, ಪ್ರವಾಹಗಳು ಮತ್ತು ರಸ್ತೆ ಗುಂಡಿಗಳು ಟ್ರಾಫಿಕ್‌ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸುತ್ತವೆಂದು ವರದಿ ತಿಳಿಸಿದೆ.

ಟೆಕ್‌ ಕಾರಿಡಾರ್‌ನಲ್ಲಿ 9.5 ಲಕ್ಷ ಜನ:

ಟೆಕ್‌ ಕಾರಿಡಾರ್‌ನಲ್ಲಿ 500ಕ್ಕೂ ಹೆಚ್ಚು ಕಂಪನಿಗಳಲ್ಲಿ 9.5 ಲಕ್ಷ ಜನರು ಉದ್ಯೋಗದಲ್ಲಿದ್ದಾರೆ. ಬೆಂಗಳೂರಿನ ಐಟಿ ಆದಾಯದ 36 ಪ್ರತಿಶತವು ವರ್ಷಕ್ಕೆ 32.68 ಶತಕೋಟಿ ವಾವತಿ ಮೊತ್ತವನ್ನು ಹೊಂದಿದೆ. ಇದು ಕೆ.ಆರ್‌. ಪುರಂನಿಂದ ಸಿಲ್ಕ್ ಬೋರ್ಡ್‌ ವಿಭಾಗಕ್ಕೆ ಬರುತ್ತದೆ ಎಂದು ವರದಿ ಹೇಳಿದೆ.

ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಮತ್ತು ಕೆ.ಆರ್‌.ಪುರಂ ನಡುವೆ ಪ್ರತಿದಿನ 6.4 ಲಕ್ಷ ಜನರು 3.3 ಲಕ್ಷ ವಾಹನಗಳನ್ನು ಬಳಸುತ್ತಿದ್ದಾ ಎಂಬುದನ್ನು ಟ್ರಾಫಿಕ್‌ ಪೊಲೀಸರಿಗೆ ಒಆರ್‌ಆರ್‌ಸಿಎ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ. ಅತಿಯಾದ ಸಂಚಾರ ದಟ್ಟಣೆಯಿಂದ ಉದ್ಯೋಗಿಗಳಿಗೆ ಆರ್ಥಿಕ ನಷ್ಟದ ಜೊತೆಗೆ ಹೆಚ್ಚು ಹೊತ್ತು ಪ್ರಯಾಣ ಮಾಡಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ. ಇದರಿಂದ ಉದ್ಯೋಗಿಗಳ ಮೇಲೆ ಉಂಟಾಗುವ ಒತ್ತಡವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಟ್ರಾಫಿಕ್‌ ಜಾಮ್‌ ಸ್ಥಳಕ್ಕೆ ಪಿಜ್ಜಾ ಆರ್ಡರ್‌

ಸಿಲಿಕಾನ್‌ ಸಿಟಿಯ ಔಟರ್‌ ರಿಂಗ್‌ ರಸ್ತೆ, ವೈಟ್‌ ಫೀಲ್ಡ್‌, ಐಟಿಪಿಎಲ್, ಮಾರತಹಳ್ಳಿ, ಬೆಳ್ಳಂದೂರು ಕಡೆಗಳಲ್ಲಿ ಬುಧವಾರ ಸಂಚಾರ ದಟ್ಟಣೆ ಅಧಿಕವಾಗಿತ್ತು. ಆ ವೇಳೆ ಹಸಿವಿನಿಂದ ಕಂಗೆಟ್ಟಿದ್ದ ಕಾರು ಚಾಲಕರೊಬ್ಬರು ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್‌ ಮಾಡಿ ಡೆಲಿವರಿ ಬಾಯ್‌ಗೆ ಲೈವ್‌ ಲೊಕೇಷನ್‌ ಕಳುಹಿಸಿದ್ದರು. ಲೈವ್‌ ಲೊಕೇಷನ್‌ ಕೊಟ್ಟ ಮಾಹಿತಿ ಪ್ರಕಾರ ಸಾಗಿದ ಡೆಲಿವರಿ ಬಾಯ್‌, ಕಾರು ಚಾಲಕ ಸಿಲುಕಿದ್ದ ಸಂಚಾರ ದಟ್ಟಣೆಗೆ ಹೋಗಿ ಪಿಜ್ಜಾಕೊಟ್ಟು ಬಂದಿದ್ದಾನೆ.

ಪಿಜ್ಜಾ ತಂದು ಕೊಡುವ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಕಾರು ಚಾಲಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಇದನ್ನು ಪೋಸ್ಟ್‌ ಮಾಡಿ ಸುದ್ದಿಯಾಗಿದ್ದಾನೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. 4 ಗಂಟೆಗೂ ಅಧಿಕ ಹೊತ್ತು ಔಟರ್‌ ರಿಂಗ್‌ ರಸ್ತೆಯಲ್ಲಿ ಬುಧವಾರ ಉಂಟಾದ ಭಾರಿ ಸಂಚಾರ ದಟ್ಟಣೆಗೆ ಈ ಸನ್ನಿವೇಶವೂ ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next