Advertisement

Bangalore Tech Summit: ಟೆಕ್‌ ಸಮಿಟ್‌ನಲ್ಲಿ ವಿಕ್ರಮ್‌ ಆಕರ್ಷಣೆ

10:53 AM Nov 30, 2023 | Team Udayavani |

ಬೆಂಗಳೂರು: ಬೆಂಗಳೂರು ಟೆಕ್‌ ಸಮಿಟ್‌ 26ನೇ ಆವೃತ್ತಿಗೆ ಬುಧವಾರ ಅದ್ದೂರಿ ಚಾಲನೆ ದೊರಕಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆ ಆರೋಗ್ಯ, ಪರಿಸರ, ವಿಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳು, ಗೋಷ್ಠಿಗಳಿಗೆ ವೇದಿಕೆಯಾಗಿದೆ. ಮೇಳದಲ್ಲಿ ಮೊದಲ ದಿನ ಕಂಡುಬಂದ ಹಲವು ತಂತ್ರಜ್ಞಾನಗಳ ವೈಶಿಷ್ಟ್ಯಗಳ ವಿವರ ಇಲ್ಲಿದೆ.

Advertisement

ಪಾನಿಪುರಿಗೂ ರೋಬೋಟ್‌: ರೋಬೋಟ್‌ಗಳೇ ಗ್ರಾಹಕರಿಗೆ ಸೇವೆ ನೀಡುವ ರೆಸ್ಟೋರೆಂಟ್‌ ಹಳೆಯದಾಯ್ತು. ಕೆಲವೆಡೆ ವಡಾ-ಪಾವ್‌ ಮಾಡಿಕೊಡುವ ರೋಬೋಟ್‌ಗಳೂ ಬಂದಿವೆ. ಇದರ ಮುಂದುವರಿದ ಭಾಗವಾಗಿ ಬೀದಿ ಬದಿಯಲ್ಲಿ ನಿಂತು ಪಾನಿಪುರಿ ನೀಡುವುದಕ್ಕೂ ಈಗ ರೋಬೋಟ್‌ ಬಂದಿದೆ.

ಆರ್ಡರ್‌ ಮಾಡಿ, ಹಣ ಪಾವತಿಸಿದ ಕೆಲವೇ ಕ್ಷಣಗಳಲ್ಲಿ ಪಾನಿಪುರಿಗಳನ್ನು ನಿಮ್ಮ ಕೈಯಲ್ಲಿಡಲಿದೆ! ಪಾನಿಪುರಿ ಯಾರಿಗೆ ಬೇಕಿಲ್ಲ. ಎಲ್ಲರಿಗೂ ಬಾಯಲ್ಲಿ ನೀರೂರಿಸುತ್ತದೆ. ಆದರೆ, ಬಹುತೇಕರು ಸ್ವಚ್ಛತೆ ಬಗ್ಗೆ ಅನುಮಾನಿಸುತ್ತಲೇ ಹಿಂದೇಟು ಹಾಕುತ್ತಾರೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ “ಸ್ಮಾರ್ಟ್‌ ಹ್ಯಾಂಡ್‌’ ಮೂಲಕ ಪಾನಿಪುರಿ ನೀಡುವ ಯಂತ್ರವನ್ನು ಎಐಬಾಟ್‌ ಇಂಕ್‌ (AIBOTINK) ಎಂಬ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಹೆಬ್ಬಾಳದಲ್ಲಿ ಡಿಸೆಂಬರ್‌ನಲ್ಲಿ “ರೋಬೋಟ್‌ ಪಾನಿಪುರಿವಾಲಾ’ ಸೇವೆಗೆ ಬರಲಿದ್ದಾನೆ. “ಪ್ರಾಯೋಗಿಕವಾಗಿ ಡಿಸೆಂಬರ್‌ ಮೊದಲ ವಾರದಲ್ಲೇ ರೋಬೋಟ್‌ ಮೂಲಕ ಪಾನಿಪುರಿ ನೀಡುವ ಗೋಲ್‌ ಬಾಟ್‌. ಇನ್‌ ವೆಂಡಿಂಗ್‌ ಯಂತ್ರವನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಅಂದುಕೊಂಡಂತೆ ಹೂಡಿಕೆದಾರರು ಮುಂದೆ ಬಂದರೆ, ನಗರದ ವಿವಿಧೆಡೆ ಮಾತ್ರವಲ್ಲ; ಬೇಡಿಕೆ ಇರುವಲ್ಲಿ ಈ ಯಂತ್ರಗಳನ್ನು ಅಳವಡಿಸಲು ಸಿದ್ಧ’ ಎಂದು ರೋಬೋಟ್‌ ಅಭಿವೃದ್ಧಿಪಡಿಸಿದ ಅರವಿಂದ್‌ ವಿ. ಆದಿತ್ಯ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ದೇಶದ ಅತಿ ಹಗುರ ಡ್ರೋನ್‌: ಇದು ದೇಶದ ಅತಿ ಹಗುರವಾದ ಡ್ರೋನ್‌. ಮೊಬೈಲ್‌ನಂತೆ ಇದನ್ನು ನೀವು ಪಾಕೆಟ್‌ನಲ್ಲಿಟ್ಟುಕೊಂಡು ಹೋಗಬಹುದು. ಯಾವುದಾದರೂ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬರುವ ಕಡೆ ಹಾಗೇ ಮೇಲೆ ಬಿಸಾಕಿದರೆ ಸಾಕು, ಇದು ಜೇನುಹುಳುವಿ ನಂತೆ ಛಂಗನೇ ಹಾರಿ ಅಲ್ಲಿನ ಚಿತ್ರಣವನ್ನು ವಿಡಿಯೋ ಮಾಡಿ ನಿಮಗೆ ಕಳುಹಿಸುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಆರ್ಟ್‌ಪಾರ್ಕ್‌ ಸಹಯೋಗದಲ್ಲಿ ವೇಡಿನ್‌ (VayDyn)ಟೆಕ್ನಾಲಜೀಸ್‌ ಇದನ್ನು ಅಭಿವೃದ್ದಿಪಡಿಸಿದೆ. ಇದರ ಮುಖ್ಯ ಉದ್ದೇಶ ರಕ್ಷಣಾ ಕ್ಷೇತ್ರದಲ್ಲಿ ಶತ್ರುಗಳ ಮೇಲೆ ಕಣ್ಗಾವಲಿಡಲು ಆಗಿದ್ದರೂ, ನಗರಪ್ರದೇಶಗಳಲ್ಲೂ ಇದನ್ನು ಬಳಸಿಕೊಳ್ಳಲು ಅವಕಾಶ ಇದೆ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದರು.

Advertisement

ನೀರು, ಟರ್ಬೈನ್‌ ಪೈಪ್‌ಗ್ಳಲ್ಲೆಲ್ಲಾ ಈ ನ್ಯಾನೋ ಡ್ರೋನ್‌ ಅನಾಯಾಸವಾಗಿ ಹೋಗಿ, ಅಲ್ಲಿರುವ ಲೋಪದೋಷಗಳನ್ನು ಸಂಗ್ರಹಿಸಬಲ್ಲದು. ಕೇವಲ 30 ಸೆಂ.ಮೀ. ಸುತ್ತಳತೆ ಪೈಪ್‌ನಲ್ಲೂ ಇದನ್ನು ಹಾರಿಸಬಹುದಾಗಿದೆ. ಇದರ ತೂಕ ಬರೀ 180 ಗ್ರಾಂ ಆಗಿದೆ. 8 ತಿಂಗಳ ಹಿಂದಷ್ಟೇ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಒಮ್ಮೆ ರಿಚಾರ್ಜ್‌ ಮಾಡಿದರೆ, 25 ನಿಮಿಷ ನಿರಂತರ ಹಾರಾಟ ಮಾಡಬಲ್ಲದು. ಪ್ರತಿ ಸೆಕೆಂಡ್‌ಗೆ ಗರಿಷ್ಠ 25 ಮೀಟರ್‌ ವೇಗದಲ್ಲಿ ಇದು ಹಾರಾಟ ನಡೆಸುತ್ತದೆ. ಇದರ ಬೆಲೆ ಒಂದು ಲಕ್ಷ ಎಂದು ವಿವರಿಸಿದರು.

ಟಿ-2 ನೋಡಲು ಟೆಕ್‌ ಸಮಿಟ್‌ಗೆ ಬನ್ನಿ!: ಈಚೆಗೆ ಕಾರ್ಯಾರಂಭ ಮಾಡಿದ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌-2 ಹೇಗಿದೆ? – ಇದನ್ನು ತಿಳಿಯಲು ನೀವು ಟೆಕ್‌ ಸಮಿಟ್‌ಗೆ ಭೇಟಿ ಮಾಡಬೇಕು. ಹೌದು, ಸಮಿಟ್‌ನಲ್ಲಿ ಟಿ-2 ಮಾದರಿಯಲ್ಲೇ ಬಿಐಎಎಲ್‌ ಮಳಿಗೆ ತೆರೆಯಲಾಗಿದೆ. ಇದು ಎಲ್ಲರ ಗಮನಸೆಳೆಯುತ್ತಿದೆ. ಸಾವಿ ರಾರು ಜನ ಮಳಿಗೆಗೆ ಬಂದು, ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.

ಸೊಳ್ಳೆಕಾಟಕ್ಕೊಂದು ಸ್ಮಾರ್ಟ್‌ ಡಿವೈಸ್‌! : ಸಾಮಾನ್ಯವಾಗಿ ಸೊಳ್ಳೆಗಳು ಮನುಷ್ಯನ ವಾಸನೆ ಹಿಡಿದು, ಅವನ ಸುತ್ತ ಗಿರಕಿ ಹೊಡೆಯುತ್ತಾ ರಕ್ತ ಹೀರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ವಾಸನೆಯನ್ನು ಅಸ್ತ್ರವಾಗಿ ಬಳಸಿಕೊಂಡು, ಸೊಳ್ಳೆಗಳಿಂದ ಮುಕ್ತಿ ನೀಡಲು ಬಯೋ ಸ್ಮಾರ್ಟ್‌ ಡಿವೈಸ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ.

ಮನುಷ್ಯನ ಬೆವರು, ಉಸಿರಾಟ, ತಾಪಮಾನದಿಂದ ಬರುವ ವಾಸನೆಯನ್ನು ಹೋಲುವ ಅಂಶಗಳನ್ನು ಅಭಿವೃದ್ಧಿಪಡಿಸಿ, ಆ ಮೂಲಕ ಸೊಳ್ಳೆಗಳನ್ನು ಆಕರ್ಷಿಸಿ, ಕೊಲ್ಲುವ ಡಿವೈಸ್‌ ಇದಾಗಿದೆ. ಇದರ ಹೆಸರು ಬಯೋ ಟ್ರ್ಯಾಪ್ಟರ್‌. ಬೆಡ್‌ಲ್ಯಾಂಪ್‌ ಮಾದರಿಯಲ್ಲಿರುವ ಈ ಯಂತ್ರದಲ್ಲಿ ಬಯೋಟ್ರ್ಯಾಪ್ಟರ್‌ ಸ್ಯಾಚೆಟ್‌ ಹಾಕಿದರೆ ಸಾಕು, ಸೊಳ್ಳೆಗಳು ಅದನ್ನು ಹುಡುಕಿಕೊಂಡು ಬಂದು ಜಾಲದಲ್ಲಿ ಬಿದ್ದು ಸಾಯುತ್ತವೆ. ಒಂದು ಡಿವೈಸ್‌ ಸಾವಿರ ಚದರಡಿ ವ್ಯಾಪ್ತಿಯ ಲ್ಲಿನ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಇದು ಮುಖ್ಯವಾಗಿ ಆರೋಗ್ಯಕ್ಕೆ ಹಾನಿಕಾರಕವಲ್ಲ; ಸುರಕ್ಷಿತ ಮತ್ತು ಉಳಿದವುಗಳಿ ಗಿಂತ ಪರಿಣಾಮಕಾರಿಯಾಗಿದೆ ಎಂದು ಸಂಸ್ಥಾಪಕ ಪಿ.ಕೆ.ಫಾಯಿಸಲ್‌ ತಿಳಿಸುತ್ತಾರೆ.

“ಆಲ್‌ಔಟ್‌, ಗುಡ್‌ನೈಟ್‌, ಬೇವಿನಸೊಪ್ಪು ಹೀಗೆ ಸೊಳ್ಳೆಕಾಟಕ್ಕೆ ಹತ್ತಾರು ಪ್ರಯೋಗಗಳನ್ನು ಜನ ಮಾಡುತ್ತಲೇ ಇದ್ದಾರೆ. ಅದು ಫ‌ಲ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಿರಂತರ ಬಳಕೆಯಿಂದ ಅಡ್ಡಪರಿಣಾಮಗಳ ಆತಂಕವಂತೂ ಇದೆ. ಈ ಹಿನ್ನೆಲೆಯಲ್ಲಿ ಮನುಷ್ಯನ ಉಸಿರಾಟ ಮತ್ತು ಬೆವರಿನ ವಾಸನೆಯಿಂದ ಸೊಳ್ಳೆಗಳನ್ನು ಆಕರ್ಷಿಸಿ, ಕೊಲ್ಲುವ ಈ ಬಯೋ ಸ್ಮಾರ್ಟ್‌ ಡಿವೈಸ್‌ ಅಭಿವೃದ್ಧಿಪಡಿಸಲಾಗಿದೆ. ಇದರ ಬೆಲೆ 2,600 ರೂ. ಆಗಿದ್ದು, ಆನ್‌ಲೈನ್‌ನಲ್ಲಿ ಇವು ಲಭ್ಯವಿವೆ. 30 ಸ್ಯಾಚೆಟ್‌ ಗಳನ್ನು ಒಳಗೊಂಡ ಬ್ಯಾಗ್‌ ನೀಡಲಾಗುತ್ತದೆ’ ಎಂದರು.

ಚಂದ್ರಯಾನ-3 ಇಂಡಸ್ಟ್ರಿ ಪೆವಿಲಿಯನ್‌:

ಟೆಕ್‌ ಸಮಿಟ್‌ನ ಮತ್ತೂಂದು ಪ್ರಮುಖ ಆಕರ್ಷಣೆ “ಚಂದ್ರಯಾನ-3 ಇಂಡಸ್ಟ್ರಿ ಪೆವಿಲಿಯನ್‌’. ಇದೇ ಮೊದಲ ಬಾರಿಗೆ ತಲೆಯೆತ್ತಿರುವ ಈ ಪೆವಿಲಿಯನ್‌ ಒಳಹೊಕ್ಕರೆ, ಬಾಹ್ಯಾಕಾಶ ಲೋಕವೇ ತೆರೆದುಕೊಳ್ಳುತ್ತದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಈವರೆಗಿನ ಸಾಧನೆಗಳು,

ಭವಿಷ್ಯದ ಯೋಜನೆಗಳ ಸಂಪೂರ್ಣ ಚಿತ್ರಣ ಅಲ್ಲಿ ಅನಾವರಣಗೊಂಡಿದೆ. ಅಷ್ಟೇ ಅಲ್ಲ, ಈಚೆಗೆ ಚಂದ್ರನ ಮೇಲೆ ಕಾಲಿಟ್ಟು ಇತಿಹಾಸ ನಿರ್ಮಿಸಿದ ವಿಕ್ರಂ ಲ್ಯಾಂಡರ್‌ ಮತ್ತು ಅದರಿಂದ ಹೊರಬಂದು ಚಂದ್ರನ ಮೇಲ್ಮೆ„ನ ಮಾಹಿತಿ ಕಲೆಹಾಕಿದ ಪಗ್ಯಾನ್‌ ರೋವರ್‌ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಪೆವಿಲಿಯನ್‌ಗೆ ಭೇಟಿ ನೀಡಿದವರೆಲ್ಲರೂ ವಿಕ್ರಂ ಜತೆಗೊಂದು ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸುತ್ತಿರುವುದು ಕಂಡುಬಂತು. ಇದಲ್ಲದೆ, ವಿಶ್ವದ ಮೊದಲ ಫ್ಯೂಚರ್‌ ಲರ್ನಿಂಗ್‌ ಲ್ಯಾಬ್‌ ಕೂಡ ಅಲ್ಲಿ ನೋಡಬಹುದು. “ತಾರೆ ಜಮೀನ್‌ ಪರ್‌’ ಹೆಸರಿನ ಈ ಸಂಚಾರಿ ತಾರಾಲಯ ಒಳಹೊಕ್ಕರೆ, ಅಕ್ಷರಶಃ ಬಾಹ್ಯಾಕಾಶಕ್ಕೆ ಹೋದ ಅನುಭವ ಸಿಗಲಿದೆ.

ಕಡಿಮೆಯಾಗದ ಕಾಂತಾರ ಕ್ರೇಜ್‌!:

“ಕಾಂತಾರ-1′ ಶೂಟಿಂಗ್‌ಗೆ ಸಿದ್ಧತೆಗಳು ನಡೆಯುತ್ತಿದ್ದರೂ, “ಕಾಂತಾರ’ದ ಹವಾ ಮಾತ್ರ ಕಡಿಮೆ ಆಗಿಲ್ಲ. ಮಕ್ಕಳಿಗಾಗಿ ಕಾಂತಾರ ನೋಟ್‌ಬುಕ್‌ಗಳು ಬಂದಿವೆ! ನೋಟ್‌ಬುಕ್‌ ಮೇಲಿರುವ ಕಾಂತಾರದ ಪಂಜುರ್ಲಿ ದೈವವನ್ನು ಸ್ಕ್ಯಾನ್‌ ಮಾಡಿದರೆ, ಚಿತ್ರದಲ್ಲಿನ ತುಣುಕುಗಳನ್ನು ಒಳಗೊಂಡ ನೃತ್ಯ ಮೊಬೈಲ್‌ನಲ್ಲಿ ಮೂಡಲಿದೆ. ಆದರೆ, ನೋಟ್‌ಬುಕ್‌ನೊಂದಿಗೆ “ನಮ್ಮೂರ’ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗುತ್ತದೆ. ಕಾಂತಾರ ಮಾತ್ರವಲ್ಲ; ಕಬ್ಬನ್‌ ಉದ್ಯಾನ, ಸ್ಟೇಟ್‌ ಆಫ್ ಬೀನ್‌, ಇಂಡಿಯನ್‌ ಕಾಫಿ ಹೌಸ್‌, ಪಕ್ಷಿ ಹೀಗೆ ನಾನಾ ಬಗೆಯ ನೋಟ್‌ಬುಕ್‌ಗಳು, ಸ್ಕ್ಯಾನ್‌ ಮಾಡಿದರೆ, ಇತಿಹಾಸ ಹೇಳುವ ಪೋಸ್ಟ್‌ಕಾರ್ಡ್‌ಗಳೂ ಅಲ್ಲಿವೆ. “ನಮ್ಮೂರ’ ಎಂಬ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ನಮ್ಮ ಬೆಂಗಳೂರಿಗೆ ಪೂರಕವಾಗಿ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಆಕರ್ಷಕ ಉತ್ಪನ್ನಗಳನ್ನು ಸಮಿಟ್‌ನಲ್ಲಿ ಪ್ರದರ್ಶನಕ್ಕಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next