Advertisement

ಸೂರ್ಯನ ತೇಜಸ್ಸಿಗೆ ಹರಿಪ್ರಸಾದ್‌ “ಕೈ’ಅಡ್ಡಿ?

12:12 AM Apr 08, 2019 | Sriram |

ಬೆಂಗಳೂರು: ವಿದ್ಯಾವಂತ ಹಾಗೂ ಪ್ರಬುದ್ಧ ಮತದಾರರೇ ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂಬ ಹೆಗ್ಗಳಿಕೆಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಅನುಪಸ್ಥಿತಿಯಲ್ಲಿ ಹೊಸ ಮುಖ ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಎರಡು ದಶಕಗಳ ಹಿಂದೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Advertisement

ಈ ಬಾರಿ ದೊಡ್ಡ ಮೊತ್ತದ ಅಂತರದಿಂದ ಗೆಲ್ಲುವಮೂಲಕ ಅನಂತ ಕುಮಾರ್‌ಗೆ ಶ್ರದ್ಧಾಜಲಿ ಸಲ್ಲಿಸಬೇಕು ಎಂದು ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಕಾಂಗ್ರೆಸ್‌ ತೆಗೆದುಕೊಂಡು ಬೆಂಗಳೂರಿನಲ್ಲೂ “ಕೈ’ನ ಕರಾಮತ್ತು ತೋರಿಸುವ ಉದ್ದೇಶದೊಂದಿಗೆ ಹರಿಪ್ರಸಾದ್‌ ಮತಬೇಟೆ ಪ್ರಾರಂಭಿಸಿದ್ದಾರೆ.

ಬಿಜೆಪಿಯ ಭದ್ರಕೋಟೆ: ಸತತ ಆರು ಬಾರಿ ಸಂಸದರಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅನಂತ ಕುಮಾರ್‌,ಪಕ್ಷದ ಸಂಘಟನೆಯನ್ನು ಬಲಪಡಿಸಿ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಪತ್ನಿ ವರಲಕ್ಷ್ಮೀ ಗುಂಡೂರಾವ್‌, ಡಿ.ಪಿ.ಶರ್ಮಾ, ಬಿ. ಕೆ.ಹರಿಪ್ರಸಾದ್‌, ಎಂ.ಕೃಷ್ಣಪ್ಪ, ಕೃಷ್ಣ ಬೈರೇಗೌಡ, ನಂದನ್‌ ನಿಲೇಕಣಿ ಅವರನ್ನು ಸತತವಾಗಿ ಪರಾಭವಗೊಳಿಸುವ ಮೂಲಕ ವಿಜಯಯಾತ್ರೆ ಮುಂದುವರಿಸಿದ್ದರು.

ಅನಂತಕುಮಾರ್‌ ವಿಧಿವಶರಾದ ಬಳಿಕ ತೇಜಸ್ವಿನಿ ಅನಂತ ಕುಮಾರ್‌ ಅವರೇ ಸ್ಪರ್ಧಿಸುವ ನಿರೀಕ್ಷೆಯಿತ್ತು.ಅಂತಿಮವಾಗಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಅವರ ಅಣ್ಣನ ಪುತ್ರ ತೇಜಸ್ವಿ ಸೂರ್ಯ ಅಭ್ಯರ್ಥಿಯಾಗಿದ್ದಾರೆ.ಇದರಿಂದ ತೇಜಸ್ವಿನಿ, ಅವರ ಬೆಂಬಲಿಗರು, ಕಾರ್ಯಕರ್ತರು, ಕೆಲಮುಖಂಡರುಅಸಮಾಧಾನಗೊಂಡಿದ್ದರು.ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೇ ತಮ್ಮ ರೋಡ್‌ ಶೋ ನಡೆಸಿ, ಅದರಲ್ಲಿ ತೇಜಸ್ವಿನಿ ಅವರೂ ಪಾಲ್ಗೊಳ್ಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಯತ್ನ ನಡೆಸಿದರು.ಜತೆಗೆ, ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಸಹ ಅಸಮಾಧಾನ ಗೊಂಡಿದ್ದರು ಎನ್ನಲಾಗಿತ್ತಾದರೂ, ಅಮಿತ್‌ ಶಾ ಭೇಟಿಯ ನಂತರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಹರಿಪ್ರಸಾದ್‌ಗೆ ರಾಮಲಿಂಗಾರೆಡ್ಡಿ, ಕೃಷ್ಣಪ್ಪ ಸಾಥ್‌: ಎರಡು ದಶಕಗಳ ಹಿಂದೆ ಅನಂತ ಕುಮಾರ್‌ ವಿರುದಟಛಿವೇ ಸ್ಪರ್ಧಿಸಿ ಪರಾಭವಗೊಂಡಿದ್ದ ಹರಿಪ್ರಸಾದ್‌, ಅಂತಿಮ ಕ್ಷಣದಲ್ಲಿ ಅಭ್ಯರ್ಥಿ ಯಾಗಿದ್ದಾರೆ. ಒಂದೇ ಪಕ್ಷದಲ್ಲಿದ್ದರೂ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಲ್ಲಿ
ಯಶಸ್ವಿಯಾದಂತಿದೆ. ರಾಮಲಿಂಗಾರೆಡ್ಡಿ ಅವರು ಬಹಿರಂಗವಾಗಿ ಅಭ್ಯರ್ಥಿಯೊಂದಿಗೆ ಕ್ಷೇತ್ರವಾರು ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುರುಪು ತಂದಿದೆ.

ಇನ್ನೊಂದೆಡೆ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರೊಂದಿಗೆ ಪ್ರಚಾರದಲ್ಲಿ ಹೆಜ್ಜೆ ಹಾಕುವ ಮೂಲಕ ಒಕ್ಕಲಿಗ ಮತಗಳನ್ನು ಸೆಳೆಯಲು ಹರಿಪ್ರಸಾದ್‌ ಯತ್ನಿಸುತ್ತಿ‌ದ್ದಾರೆ. ಬಿಜೆಪಿ ಗೆಲುವಿಗೆ ಹೆಚ್ಚಿನ ಮುನ್ನಡೆ ನೀಡುವ ಬೊಮ್ಮನಹಳ್ಳಿ, ಬಸವನಗುಡಿ ಹಾಗೂ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತಗಳಿಕೆ ಹೆಚ್ಚಿಸಲು ತೀವ್ರ ಕಸರತ್ತು ನಡೆಸಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ರಾಜ್ಯಸಭಾ ಸದಸ್ಯ ಜೆಡಿಎಸ್‌ನ ಕುಪೇಂದ್ರ ರೆಡ್ಡಿ, ರಾಮಲಿಂಗಾರೆಡ್ಡಿ ಅವರ ಮೂಲಕ ಮತಗಳನ್ನು ಸೆಳೆಯಲಾರಂಭಿಸಿದ್ದಾರೆ. ಅನ್ಯ ಪಕ್ಷದಲ್ಲಿರುವ ಹಳೆಯ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುಕೂಲ ಪಡೆಯುವ ಪ್ರಯತ್ನವನ್ನು ಸದ್ದಿಲ್ಲದೆ ನಡೆಸಿದ್ದಾರೆ.

ನಿರ್ಣಾಯಕ ಅಂಶ
ಕ್ಷೇತ್ರದಲ್ಲಿ ಎಲ್ಲ ವರ್ಗದ ಜನರಿದ್ದರೂ ಒಕ್ಕಲಿಗರು ಹಾಗೂ ಬ್ರಾಹ್ಮಣರು ನಿರ್ಣಾಯಕರೆನಿಸಿದ್ದಾರೆ. ಹಾಗಾಗಿ, ಈ ಎರಡೂ ಸಮುದಾಯಗಳ ಮತದಾರರನ್ನು ಸೆಳೆಯಲು ಉಭಯ ಪಕ್ಷಗಳು ಕಸರತ್ತು ನಡೆಸಿವೆ. ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳ ಜತೆಗೆ ಇತರ ಸಮುದಾಯಗಳ ಮತಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ.
ಕಾಂಗ್ರೆಸ್‌ ಕೂಡ ಅಲ್ಪಸಂಖ್ಯಾತರು ಸೇರಿದಂತೆ ಆಯ್ದ ವರ್ಗದ ಮತದಾರರ ಜತೆಗೆ ಒಕ್ಕಲಿಗರ ವಿಶ್ವಾಸ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಜೆಡಿಎಸ್‌ನೊಂದಿಗೆ ಮೈತ್ರಿ ಹಿನ್ನೆಲೆಯಲ್ಲಿಜೆಡಿಎಸ್‌ ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾಗುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಇದೆ.

ಕ್ಷೇತ್ರವ್ಯಾಪ್ತಿ
ಗೋವಿಂದರಾಜ ನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ,
ಬಿ.ಟಿ.ಎಂ.ಲೇಔಟ್‌, ಜಯನಗರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳು
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಬರುತ್ತವೆ. ಸದ್ಯ ಬಿಜೆಪಿಯ ಐದು ಹಾಗೂ ಕಾಂಗ್ರೆಸ್‌ನ ಮೂರು ಶಾಸಕರಿದ್ದಾರೆ. ಕಳೆದ ಲೋಕಸಭಾ ಚುನಾವಣಾ ವೇಳೆ ಇದ್ದಂತೆ ಈ ಬಾರಿಯೂ ಬಿಜೆಪಿ, ಪಾಲಿಕೆ ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್‌ನ ಪಾಲಿಕೆ ಸದಸ್ಯರ ಸಂಖ್ಯೆ 15ರಿಂದ 14ಕ್ಕೆ ಕುಸಿದಿದೆ. ಜೆಡಿಎಸ್‌ ಸದಸ್ಯರ ಸಂಖ್ಯೆ 3ರಿಂದ 2ಕ್ಕೆ ಇಳಿದಿದೆ.

ಕಣ ಚಿತ್ರಣ
1991ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಪಾರುಪತ್ಯ ಮುಂದುವರಿದಿದ್ದು, 28ರ ಹರೆಯದ ತೇಜಸ್ವಿ ಸೂರ್ಯ, ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಎರಡೂವರೆ ದಶಕಗಳ ಬಳಿಕ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ಸೇರಿಸಲು ಹರಿಪ್ರಸಾದ್‌ ಬೆವರು ಹರಿಸುತ್ತಿದ್ದಾರೆ.
ವಾಟಾಳ್‌ ನಾಗರಾಜ್‌ ಸೇರಿದಂತೆ 25 ಮಂದಿ ಕಣದಲ್ಲಿದ್ದಾರೆ.

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next