Advertisement

ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

12:58 PM Mar 27, 2019 | Lakshmi GovindaRaju |

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌ ಮಂಗಳವಾರ ನಾಮಪತ್ರ ಸಲ್ಲಿಸಿದರು. ನಗರದ ಜಿಲ್ಲಾ ಕಚೇರಿಗಳ ಸಂಕಿರ್ಣದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅವರು ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಅವರಿಗೆ ಸಲ್ಲಿಸಿದರು.

Advertisement

ಈ ವೇಳೆ ಸಿಎಂ ಕುಮಾರಸ್ವಾಮಿ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ, ಆನೇಕಲ್‌ ಶಾಸಕ ಶಿವಣ್ಣ, ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್‌ ಸಾಥ್‌ ನೀಡಿದರು. ನಿಯಮದಂತೆ 5 ಮಂದಿಗೆ ಮಾತ್ರ ಅವಕಾಶವಿದ್ದಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್‌, ಎಂಎಲ್‌ಸಿ ಎಸ್‌.ರವಿ ಮುಂತಾದವರು ಹೊರಗುಳಿದಿದ್ದರು.

ದೇವಾಲಯ, ದರ್ಗಾ, ಚರ್ಚ್‌ಗೆ ಭೇಟಿ: ನಾಮಪತ್ರ ಸಲ್ಲಿಕೆಗೂ ಮುನ್ನ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಕನಕಪುರದಲ್ಲಿ ತಮ್ಮ ತಾಯಿ ಗೌರಮ್ಮ ಅವರ ಆಶೀರ್ವಾದ ಪಡೆದುಕೊಂಡರು. ರಾಮನಗರಕ್ಕೆ ಬಂದ ಕೆಂಗಲ್‌ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಅವರು ನಗರದ ವಿವಿಧ ದೇವಾಲಯಗಳು, ದರ್ಗಾ ಮತ್ತು ಚರ್ಚ್‌ಗೆ ಭೇಟಿ ಕೊಟ್ಟು ಪ್ರಾರ್ಥಿಸಿದರು.

ನಗರದ ಜೂನಿಯರ್‌ ಕಾಲೇಜು ಬಳಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಜಿಲ್ಲಾ ಕಚೇರಿಗಳ ಸಂಕಿರ್ಣಕ್ಕೆ ಮೆರವಣಿಗೆಯಲ್ಲಿ ಸಾಗಿದರು.

ವಾಹನ ಸಂಚಾರ ವ್ಯತ್ಯಯ: ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರು- ಮೈಸೂರು ಹೆದ್ದಾರಿಯ ಈ ಭಾಗದಲ್ಲಿ ವಾಹನ ಸಂಚಾರದಲ್ಲಿ ಭಾರಿ ವ್ಯತ್ಯಯವುಂಟಾಯಿತು. ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಗಮನಕ್ಕೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು.

Advertisement

ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣ ಬೆಳೆಸುವ ವಾಹನಗಳಿಗೆ ಬಿಡದಿ ಬಳಿಯಲ್ಲಿ ಮತ್ತು ಮೈಸೂರಿನಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳಿಗೆ ಕೆಲಕಾಲ ಮಾರ್ಗ ಬದಲಾವಣೆ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರು.

ಈ ವ್ಯವಸ್ಥೆಯಿಂದ ಹೆದ್ದಾರಿ ಪ್ರಯಾಣಿಕರು ಹೈರಾಣಾಗಿ, ಹಿಡಿ ಶಾಪ ಹಾಕಿದರು. ರಾಮನಗರದಲ್ಲಿ ಜೂನಿಯರ್‌ ಕಾಲೇಜು ಕಡೆಗೆ ಹೋಗುವ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಎಲ್ಲಾ ಅಡ್ಡ ರಸ್ತೆಗಳು, ಹೆದ್ದಾರಿಯಲ್ಲಿ ತಿರುವು ತೆಗೆದು ಕೊಳ್ಳುವ ಎಲ್ಲಾ ವ್ಯವಸ್ಥೆಯನ್ನು ಬಂದ್‌ ಮಾಡಲಾಗಿತ್ತು.

ಡಿ.ಕೆ.ಸುರೇಶ್‌ 33.06 ಕೋಟಿ ಒಡೆಯ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಚರಾಸ್ಥಿಯ ಸದ್ಯದ ಮಾರುಕಟ್ಟೆ ಮೌಲ್ಯ ರೂ. 33.0668,208 (33.06 ಕೋಟಿ) ಇದ್ದು, ಕಳೆದ 5 ವರ್ಷಗಳಲ್ಲಿ ಶೇ.50ರಷ್ಟು ವೃದ್ಧಿಸಿದೆ. ಇವರ ಸ್ಥಿರಾಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ ರೂ. 3,05,59,16,927 (ಮುನ್ನುರ ಐದು ಕೋಟಿ ಐವತ್ತೂಂಬತ್ತು ಲಕ್ಷ, ಹದಿನಾರು ಸಾವಿರದ ಒಂಬೈನೂರ ಇಪ್ಪತ್ತೇಳು ) ಕಳೆದ ಐದು ವರ್ಷಗಳಲ್ಲಿ ಚರಾಸ್ತಿ ಮೌಲ್ಯ 4 ಪಟ್ಟು ವೃದ್ಧಿಸಿದೆ.

ಚರಾಸ್ತಿ ಮೌಲ್ಯ – ಹಾಲಿ 33,0668,208 ರೂ: 2014ನೇ ಸಾಲಿನಲ್ಲಿ ಡಿ.ಕೆ.ಸುರೇಶ್‌ ಬಳಿ 15,77,44,288 ರೂ ಮಾರುಕಟ್ಟೆ ಮೌಲ್ಯದ ಚರಾಸ್ತಿ ಇತ್ತು. ಈ ಚರಾಸ್ತಿಯ ಮಾರು ಕಟ್ಟೆಯ ಮೌಲ್ಯ 2019ರ ವೇಳೆಗೆ 33,0668,208ಕ್ಕೆ ವೃದ್ಧಿಸಿದೆ. ಶೇರುಗಳು ಮುಂತಾದವುಗಳಲ್ಲಿ ಸುರೇಶ್‌ 2,55,31,330 ರೂ. ಹೂಡಿಕೆ ಮಾಡಿದ್ದಾರೆ. ಡಿ.ಕೆ.ಸುರೇಶ್‌ ಬಳಿ ಸದ್ಯ 22,35,707 ರೂ. ನಗದು ಇದೆ. 2014ರಲ್ಲಿ ನಾಮಪತ್ರ ಸಲ್ಲಿಸಿದ ವೇಳೆ ಅವರ ಬಳಿ ನಗದು 11,86,663 ರೂ.ಇತ್ತು. ಡಿ.ಕೆ.ಸುರೇಶ್‌ ಬಳಿ ಬಂಗಾರ 1260 ಗ್ರಾಂ, 4860 ಗ್ರಾಂ ಇದೆ.

ಸ್ಥಿರಾಸ್ತಿ – ಹಾಲಿ ಮೌಲ್ಯ 3,05,59,16,927 ರೂ: ಡಿ.ಕೆ.ಸುರೇಶ್‌ ಸ್ಥಿರಾಸ್ತಿ ಮೌಲ್ಯ 2014ಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚಾಗಿದೆ. 2014ರಲ್ಲಿ ಇವರ ಬಳಿ 69,96,18850 ರೂ. ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ ಇತ್ತು. ಈ ಪೈಕಿ ಅವರು ಸ್ವಯಾರ್ಜಿತವಾಗಿಗಳಿಸಿದ ಆಸ್ತಿಯ ಮಾರುಕಟ್ಟೆ ಮೌಲ್ಯ 38,55,17,300 ರೂ. ಪಿತ್ರಾರ್ಜಿತವಾಗಿ ಬಂದ ಆಸ್ತಿಯ ಮೌಲ್ಯ 31,41,01,550 ರೂ. ಇತ್ತು. 2019ರ ವೇಳೆ ಈ ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯ 3,05,59,16,927ಕ್ಕೆ ಏರಿದೆ.

ಅಂದರೆ 5 ವರ್ಷಗಳಲ್ಲಿ 235 ಕೋಟಿ 62 ಲಕ್ಷ 98 ಸಾವಿರದ ಏಪ್ಪತ್ತೇಳು ರೂ.ನಷ್ಟು ಏರಿಕೆ ಕಂಡಿದೆ. ಕಳೆದ 5 ವರ್ಷಗಳಲ್ಲಿ ತಮ್ಮ ಸ್ಥಿರಾಸ್ತಿ ಮೌಲ್ಯ 4 ಪಟ್ಟು ಹೆಚ್ಚಾಗಿದೆ ಎಂದು ಸ್ವಯಂ ಡಿ.ಕೆ.ಸುರೇಶ್‌ ಅವರೇ ಘೋಷಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಡಿ.ಕೆ.ಸುರೇಶ್‌ ತಾಯಿ 15 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ.
ಕನಕಪುರ ತಾಲೂಕು ಕೋಡಿಹಳ್ಳಿಯ ರಾಂಪುರ ದೊಡ್ಡಿ ಮತ್ತು ಬೆಂಗಳೂರು ಸದಾಶಿವನಗರ, ಅಪ್ಪರ್‌ ಪ್ಲೇಸ್‌ನಲ್ಲಿ ವಾಸದ ಮನೆಗಳಿವೆ. ಈ ಆಸ್ತಿಗಳ ಮಾರುಕಟ್ಟೆ ಮೌಲ್ಯ 16.05 ಕೋಟಿ.

ಆದಾಯದಲ್ಲಿ ಏರಿಳಿಕೆ: ಕಳೆದ 5 ವರ್ಷಗಳಲ್ಲಿ ಡಿ.ಕೆ.ಸುರೇಶ್‌ ವಾರ್ಷಿಕ ಆದಾಯ ಏರಿಳಿಕೆ ಕಂಡಿದೆ. 2014- 5,33,920 ರೂ., 2015ರಲ್ಲಿ 1,67,94,800 ರೂ., 2016ರಲ್ಲಿ 1,13,47910 ರೂ., 2017ರಲ್ಲಿ 1740070 ರೂ., 2018ರಲ್ಲಿ 1,87,81,090 ರೂ., 2014ರಲ್ಲಿ ಅವರು ನಾಮಪತ್ರ ಸಲ್ಲಿಸಿದ ವೇಳೆ 2012-13ನೇ ಸಾಲಿಗೆ ವಾರ್ಷಿಕ ಆದಾಯವನ್ನು 19,21,249ರೂ ಎಂದು ಘೋಷಿಸಿಕೊಂಡಿದ್ದರು.

ಸಾಲ ಕೊಡಬೇಕು, ಸಾಲ ಬರಲೂ ಬೇಕು: ಡಿ.ಕೆ.ಸುರೇಶ್‌ ಘೋಷಿಸಿಕೊಂಡಿರುವ ಆಸ್ತಿ ವಿವರದಲ್ಲಿ ಅವರು 51,93,20,305 ರೂ. ಸಾಲ ಕೊಡಬೇಕಾಗಿದೆ. ಇವರಿಗೆ ಬರಬೇಕಾದ ಹಣ ರೂ. 26,67,89951. ಈ ಪೈಕಿ ಅಣ್ಣ ಡಿ.ಕೆ.ಶಿವಕುಮಾರ್‌ 1,03,02,802 ಸಾಲ ಕೊಡಬೇಕು. ಅಣ್ಣನ ಮಗಳು ಐಶ್ವರ್ಯರಿಂದ 5,87,42,717 ರೂ. ಬರಬೇಕು ಎಂದು ಘೋಷಿಸಿಕೊಂಡಿದ್ದಾರೆ.

ಮೊಕದ್ದಮ್ಮೆಗಳು: ಡಿ.ಕೆ.ಸುರೇಶ್‌ ಮೇಲೆ 5 ಮೊಕದ್ದಮ್ಮೆಗಳಿವೆ. ಕನಕಪುರ ತಾಲೂಕಿನ ಸಾತನೂರು ರೇಂಜ್‌ ಫಾರೆಸ್ಟ್‌ ವ್ಯಾಪ್ತಿಯಲ್ಲಿ ಅಕ್ರಮ ಕ್ವಾರಿ ಮಾಡಿರುವ 2006-07ನೇ ಸಾಲಿನಲ್ಲಿ ದಾಖಲಾಗಿರುವ 3 ಆರೋಪಗಳು, ಇದೇ ಫಾರೆಸ್ಟ್‌ ರೇಂಜ್‌ನಲ್ಲಿ ಅಕ್ರಮವಾಗಿ ವಿದ್ಯುತ್‌ ಲೈನ್‌ ಎಳೆದಿರುವ ಒಂದು ಆರೋಪ ಮತ್ತು ಮುನೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಕ್ವಾರಿ ಮಾಡಿದ ಆರೋಪಗಳನ್ನು ಇವರು ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next