ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಉಪ ಅರಣ್ಯಾಧಿಕಾರಿ, ಇಬ್ಬರು ರೌಡಿ ಶೀಟರ್ ಸೇರಿದಂತೆ 11 ಆರೋಪಿಗಳನ್ನು ಬಂಧಿಸಿರುವ ಪೀಣ್ಯ ಪೊಲೀಸರು 45.52 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಚಿಕ್ಕಮಗಳೂರು ಮೂಲದ ದಾವಣಗೆರೆ ಜಿಲ್ಲೆ ಚನ್ನಗಿರಿ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಸುರೇಂದ್ರ(40), ತುಮಕೂರಿನ ನಿವಾಸಿ ಸುರೇಶ್ (33), ಚಿತ್ರದುರ್ಗದ ಹಣ್ಣಿನ ವ್ಯಾಪಾರಿ ಶ್ರೀಧರ್ (27), ನೆಲಮಂಗಲದ ಫೈನಾನ್ಸಿಯರ್ ವಸಂತ್ ಕುಮಾರ್ (38), ಅನಿಲ್ ಕುಮಾರ್(34), ಚಾಲಕ ನಾಗರಾಜ್(33), ರೌಡಿಶೀಟರ್‌ಗಳಾದ ನವಾಜ್ ಪಾಷಾ (27), ಶೇಕ್ ಶಹಬಾಜ್ ಖಲಂದರ್ (27), ರಾಹಿಲ್ ಪಾಷಾ (26), ಉಸ್ಮಾನ್ ಖಾನ್ (24), ಟಿ. ವಸಂತ್ ಕುಮಾರ್ (38) ಬಂಧಿತರು.
ಬಂಧಿತರಿಂದ 45.52 ಲಕ್ಷ ರೂ. ಮೌಲ್ಯದ 273 ಗ್ರಾಂ ಚಿನ್ನಾಭರಣ, 370 ಗ್ರಾಂ ಬೆಳ್ಳಿ, 23 ಲಕ್ಷ ರೂ.ನಗದು, 13 ಮೊಬೈಲ್‌ಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಎಚ್‌ಎಂಟಿ ಲೇಔಟ್ ನಿವಾಸಿ ರೂಪೇಶ್ ಕಾರ್ಖಾನೆ ನಡೆಸುತ್ತಿದ್ದಾರೆ.
ಆರೋಪಿ ನಾಗರಾಜ್ ಇವರ ಕಾರ್ಖಾನೆಯಲ್ಲಿ ಲಾರಿ ಚಾಲಕನಾಗಿದ್ದ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲಸ ತೊರೆದಿದ್ದ. ಮಾಲೀಕನ ಹಣದ ವ್ಯವಹಾರಗಳ ಬಗ್ಗೆ ನಾಗರಾಜ್ ಗಮನಿಸಿದ್ದ. ಇದೇ ವಿಷಯವನ್ನು ಸ್ನೇಹಿತ ಅನಿಲ್ ಕುಮಾರ್ ಬಳಿ ಹೇಳಿಕೊಂಡಿದ್ದ. ನಮ್ಮ ಮಾಲೀಕನ ನೋಟು ಎಣಿಸುವ ಯಂತ್ರಗಳಿರುವುದನ್ನು ಗಮನಿಸಿದರೆ ಹೆಚ್ಚಿನ ದುಡ್ಡು ಇರಬಹುದು ಎಂದು ಹೇಳಿದ್ದ. ಆರ್ಥಿಕವಾಗಿ ಹಿಂದುಳಿದಿದ್ದ ಅನಿಲ್ ಇದೇ ಸಂಗತಿಯನ್ನು ವಸಂತ್‌ಗೆ ತಿಳಿಸಿದ್ದ.
ಇತ್ತ ಫೈನಾನ್ಸಿಯರ್ ಅಗಿ ನಷ್ಟಕ್ಕೆ ಒಳಗಾಗಿದ್ದ ವಸಂತ್‌ಗೂ ದುಡ್ಡಿನ ಅಗತ್ಯತೆ ಇತ್ತು. ತನ್ನ ಸಹಚರರಾದ ಶ್ರೀಧರ್ ಹಾಗೂ ಸುರೇಶ್ ಮೂಲಕ ಉಪ ಅರಣ್ಯಾಧಿಕಾರಿ ಸುರೇಂದ್ರನನ್ನು ಕರೆಸಿಕೊಂಡಿದ್ದ. ಆರೋಪಿ ಗಳು ಜೊತೆಯಾಗಿ ಚರ್ಚಿಸಿ ರೂಪೇಶ್ ಮನೆಯಲ್ಲಿ ಡಕಾಯಿತಿ ಮಾಡಲು ಸಂಚು ರೂಪಿ ಸಿದ್ದರು. ಸುರೇಶ್ ಕೃತ್ಯ ಎಸಗಲು ತನ್ನ ಪರಿಚಿತರಾದ ಇಬ್ಬರು ರೌಡಿಶೀಟರ್‌ಗಳು ಹಾಗೂ ಇತರ ಮೂವರ ಸಹಾಯ ಕೇಳಿ ಅವರಿಗೆ ದುಡ್ಡಿನ ಆಮಿಷ ವೊಡ್ಡಿದ್ದ. ಇದಕ್ಕೆ ಇತರ ಆರೋಪಿಗಳು ಸೈ ಎಂದಿದ್ದರು.
ಖಾಕಿ ಸಮವಸ್ತ್ರ: ಸಂಚು ರೂಪಿಸಿದಂತೆ ಡಿ.4ರಂದು ಸಂಜೆ 7.30ಕ್ಕೆ ಉಪಅರಣ್ಯಾಧಿಕಾರಿ ಸುರೇಂದ್ರ ತನ್ನ ಖಾಕಿ ಸಮವಸ್ತ್ರ ಧರಿಸಿಕೊಂಡು ಸಹಚರರ ಜತೆಗೆ ಎಚ್‌ಎಂಟಿ ಲೇಔಟ್‌ನಲ್ಲಿರುವ ರೂಪೇಶ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಆ ವೇಳೆ ಮನೆಯಲ್ಲಿ ರೂಪೇಶ್ ಹಾಗೂ ಆತನ ತಾಯಿ ಇಬ್ಬರೇ ಇದ್ದರು.
ಕಾಲಿಂಗ್ ಬೆಲ್ ಒತ್ತುತ್ತಿದ್ದಂತೆ ರೂಪೇಶ್ ಬಾಗಿಲು ತೆಗೆದು ವಿಚಾರಿಸಿದಾಗ ಸುರೇಂದ್ರ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಮನೆಯೊಳಗೆ ಎಂಟ್ರಿ ಕೊಟ್ಟಿದ್ದ. ಮನೆಯ ಪ್ಯಾಸೇಜ್‌ನಲ್ಲಿ ಅಡಗಿ ಕುಳಿತಿದ್ದ ಇತರ ಆರೋಪಿಗಳೂ ಏಕಾಏಕಿ ಮನೆಗೆ ನುಗ್ಗಿದ್ದರು.
ರೂಪೇಶ್ ಆತಂಕಗೊಂಡು ನೀವು ಯಾರು ಎಂದು ಪ್ರಶ್ನಿಸುವಷ್ಟರಲ್ಲಿ ಆರೋಪಿಗಳು ಲಾಂಗು, ಮಚ್ಚು ಸೇರಿದಂತೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದರು. ತಾಯಿ-ಮಗನನ್ನು ರೂಮ್‌ಗೆ ಕರೆದುಕೊಂಡು ಹೋಗಿ ಟೇಪ್‌ನಿಂದ ಕೈ-ಕಾಲು ಕಟ್ಟಿ ಕೂಡಿ ಹಾಕಿದ್ದರು. ಬಳಿಕ ಮನೆ ಬೀರುವಿನ ಲಾಕರ್ ಒಡೆದು ಅದರಲ್ಲಿದ್ದ ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿದ್ದರು.
ಆರೋಪಿಗಳ ಸುಳಿವು ಕೊಟ್ಟ ಸಿಸಿ ಕ್ಯಾಮೆರಾ
ಆರೋಪಿಗಳು ಮನೆಯಿಂದ ಹೋದ ಬಳಿಕ ಕೈಗೆ ಕಟ್ಟಿದ್ದ ಟೇಪ್ ಬಿಡಿಸಿಕೊಂಡು ರೂಪೇಶ್ ಪೀಣ್ಯ ಠಾಣೆಗೆ ತೆರಳಿ ನಡೆದ ಘಟನೆ ವಿವರಿಸಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಡಕಾಯಿತರ ಜಾಡು ಹಿಡಿಯಲು ಸಿದ್ಧತೆ ನಡೆಸಿದ್ದರು.
ಪೀಣ್ಯ ಇನ್‌ಸ್ಪೆಕ್ಟರ್ ನೇತೃತ್ವದ ವಿಶೇಷ ತಂಡ ರಚಿಸಿ ಕೃತ್ಯ ನಡೆದ ಮನೆಯ ಸುತ್ತ-ಮುತ್ತ ಅಳವಡಿಸಲಾಗಿದ್ದ ಒಂದೊಂದೇ ಸಿಸಿ ಕ್ಯಾಮೆರಾ ಪರಿಶೀಲಿಸುತ್ತಾ ಹೋದಾಗ ಆರೋಪಿಗಳು ಕಾರಿನಲ್ಲಿ ಸಾಗಿರುವುದು ಪತ್ತೆಯಾಗಿತ್ತು. ಕೆಲವು ಆರೋಪಿಗಳ ಮುಖ ಚಹರೆಯೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಕಾರಿನ ನಂಬರ್ ಆಧಾರದಲ್ಲಿ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಕಾರಿನಲ್ಲಿ ಕುಣಿಗಲ್ ಟೋಲ್ ಗೇಟ್ ದಾಟಿರುವುದು ಗೊತ್ತಾಗಿತ್ತು. ಟವರ್ ಡಂಪ್ ಮೂಲಕ ಆರೋಪಿಗಳ ಮೊಬೈಲ್‌ಗಳು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶಗಳನ್ನು ಪರಿಶೀಲಿಸಿದಾಗ ಆರೋಪಿ ಸುರೇಂದ್ರನ ನಂಬರ್ ಆ್ಯಕ್ಟೀವ್ ಆಗಿತ್ತು.
ಆತನ ಮೊಬೈಲ್‌ಗೆ ಬರುವ ಕರೆಗಳನ್ನು (ಸಿಡಿಆರ್) ಪರಿಶೀಲಿಸಿದಾಗ ಇತರ ಆರೋಪಿಗಳಾದ ಶ್ರೀಧರ್, ವಸಂತ್ ಆತನ ಸಂಪರ್ಕದಲ್ಲಿರುವುದು ಕಂಡು ಬಂದಿತ್ತು. ಈ ಮಾಹಿತಿ ಇಟ್ಟುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಮುಖ ಆರೋಪಿಗಳು ಚಿತ್ರದುರ್ಗ, ಕೊಡೈಕೆನಾಲ್‌ನಲ್ಲಿ ತಲೆಮರೆಸಿಕೊಂಡಿರುವ ಸುಳಿವು ಸಿಕ್ಕಿತ್ತು. ಅಲ್ಲಿಗೆ ತೆರಳಿದ ಪೊಲೀಸರ ತಂಡ ಒಬ್ಬೊಬ್ಬ ಆರೋಪಿಗಳನ್ನೇ ಬಂಧಿಸಿದೆ.
ಜೂಜಿನಿಂದ ಸಾಲ: ಡಕಾಯಿತಿಗಿಳಿದ ಅರಣ್ಯಾಧಿಕಾರಿ!
ಚಿಕ್ಕಮಗಳೂರಿನ ಚೆನ್ನಗಿರಿ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಸುರೇಂದ್ರ ಜೂಜಾಟದ ಚಟ ಹೊಂದಿದ್ದ. ಜೂಜಾಟದಲ್ಲಿ ದುಡ್ಡು ಕಳೆದುಕೊಂಡಿದ್ದ ಸುರೇಂದ್ರನಿಗೆ ಹಣದ ಅಗತ್ಯವಿತ್ತು. ಹೀಗಾಗಿ ಕೃತ್ಯ ಎಸಗಲು ಆರೋಪಿಗಳೊಂದಿಗೆ ಶಾಮೀಲಾಗಿದ್ದ. ಇತರ ಆರೋಪಿಗಳೂ ದುಡ್ಡಿನ ಆಸೆಗಾಗಿ ಡಕಾಯಿತಿಗೆ ಇಳಿದಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಇನ್ನು ಡಕಾಯಿತಿಯಿಂದ ಬಂದ ದುಡ್ಡನ್ನು ಪ್ರಮುಖ ಐವರು ಆರೋಪಿಗಳು ಹಂಚಿಕೊಂಡು ಇತರ ಆರೋಪಿಗಳಿಗೆ ಅದರಲ್ಲಿ ಸ್ವಲ್ಪ ದುಡ್ಡು ಕೊಡಲು ಚಿಂತಿಸಿದ್ದರು ಎನ್ನಲಾಗಿದೆ. ಕೃತ್ಯ ಎಸಗುವ ವೇಳೆ ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಆರೋಪಿಗಳೂ ಕೆಲವೊಂದು ಮುನ್ನೆಚ್ಚರಿಕೆ ವಹಿಸಿದ್ದರು. ಆದರೆ, ಆರೋಪಿಗಳ ಆಟ ಖಾಕಿ ಮುಂದೆ ನಡೆಯಲಿಲ್ಲ. ಪ್ರಕರಣ ನಡೆದ 9 ದಿನಗಳಲ್ಲಿ ಬೆಂಗಳೂರು ಪೊಲೀಸರು 11 ಮಂದಿ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.