Advertisement

ಹ್ಯಾಪಿ ಇಎಂಐ ನವೋದ್ಯಮಕ್ಕೆ ಜಾಗತಿಕ ಮನ್ನಣೆ

09:45 AM Dec 19, 2018 | |

ಬೆಂಗಳೂರು: ನ್ಯೂಯಾರ್ಕ್‌ನ ಒನ್‌ ವರ್ಲ್ಡ್ ಟ್ರೇಡ್‌ ಸೆಂಟರ್‌ನಲ್ಲಿ ಇತ್ತೀಚಿಗೆ ನಡೆದ “ಗ್ಲೋಬಲ್‌ ಕೆ-50′ ಸಮಾವೇಶದಲ್ಲಿ ವಿಶ್ವದ ಅಗ್ರ 50 ನವೋದ್ಯಮಗಳ ಪಟ್ಟಿ ಬಿಡುಗಡೆಯಾಗಿದ್ದು, ಬೆಂಗಳೂರು ಮೂಲದ ಹ್ಯಾಪಿ ಇಎಂಐ ನವೋದ್ಯಮವು ಹಣಕಾಸು ವಿಭಾಗದಲ್ಲಿ 30ನೇ ಸ್ಥಾನ ಪಡೆದಿದೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಜತೆಗೆ 50 ಸಾವಿರ ಯು.ಎಸ್‌.ಡಾಲರ್‌ ಮೊತ್ತದ ಚೆಕ್‌ ಪಡೆದಿದೆ. ವಿಶ್ವದ ಅಗ್ರ 50 ನವೋದ್ಯಮಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹ್ಯಾಪಿ ಇಎಂಐ ನವೋದ್ಯಮಕ್ಕೆ ಸುಹಾಸ್‌ ಗೋಪಿನಾಥ್‌ ಅವರು ಸಂಸ್ಥಾಪಕರಾಗಿದ್ದರೆ, ಯುವ ಉದ್ಯಮಿ ಹಾಗೂ ವಿಆರ್‌ಎಲ್‌ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ್‌ ಸಂಕೇಶ್ವರ್‌  ಅವರು ಸಹಸಂಸ್ಥಾಪಕರಾಗಿದ್ದಾರೆ.

Advertisement

ಕೈರೋಸ್‌ ಸೊಸೈಟಿಯ ಕೆ-50 ಪಟ್ಟಿಯಲ್ಲಿ ಹ್ಯಾಪಿ ಇಎಂಐ ನವೋದ್ಯಮವು 30ನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಇದರಿಂದ ಎಲ್ಲರಿಗೂ ಸುಲಭವಾಗಿ ಸಾಲ ಸೌಲಭ್ಯ ಕಲ್ಪಿಸುವ ನಮ್ಮ ಧ್ಯೇಯೋದ್ದೇಶಕ್ಕೆ ಪ್ರೋತ್ಸಾಹ ದೊರೆತಂತಾಗಿದೆ ಎಂದು ಆನಂದ್‌ ಸಂಕೇಶ್ವರ್‌ ಹೇಳಿದ್ದಾರೆ. ಹ್ಯಾಪಿ ಇಎಂಐ ನವೋದ್ಯಮದ ಸಂಸ್ಥಾಪಕ ಸುಹಾಸ್‌ ಗೋಪಿನಾಥ್‌, ಹ್ಯಾಪಿ ಇಎಂಐ ಕ್ರೆಡಿಟ್‌ ಕಾರ್ಡ್‌ ಪರಿಕಲ್ಪನೆಗೆ ಹೊಸ ಭಾಷ್ಯ ಬರೆಯಲು ಮುಂದಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಸುಲಭ ಕಂತುಗಳ ಸಾಲ ಸೌಲಭ್ಯ ನೀಡುವ ಮೂಲಕ ಯುವಜನತೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಅನುಕೂಲ ಕಲ್ಪಿಸಿಕೊಡುತ್ತಿದೆ ಎಂದು ತಿಳಿಸಿದ್ದಾರೆ. 

ಎಲ್ಲರಿಗೂ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವುದು ಈ ಬಾರಿಯ ಕೈರೋಸ್‌ ಜಾಗತಿಕ ಸಮಾವೇಶದ ಧ್ಯೇಯವಾಗಿತ್ತು. ಈ ಧ್ಯೇಯಕ್ಕೆ ಪೂರಕವಾಗಿ ಹ್ಯಾಪಿ ಇಎಂಐ ನವೋದ್ಯಮವು ಕಾರ್ಯ ನಿರ್ವಹಿಸುತ್ತಿದ್ದು, ಒಂದು ನಿಮಿಷದಲ್ಲಿ ಸಾಲ ಸೌಲಭ್ಯ ಕಲ್ಪಿಸಲು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ವಿಭಾಗದಲ್ಲಿ ಹ್ಯಾಪಿ ಇಎಂಐ ನವೋದ್ಯಮಕ್ಕೆ ವಿಶ್ವದ ಅಗ್ರ 50 ನವೋದ್ಯಮಗಳ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಜತೆಗೆ 50 ಸಾವಿರ ಯುಎಸ್‌ ಡಾಲರ್‌ ಚೆಕ್‌ ನೀಡಿ ಗೌರವಿಸಿದೆ. ಹಣಕಾಸು, ಶಿಕ್ಷಣ, ಆರೋಗ್ಯ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ವಿಭಾಗಗಳಲ್ಲಿ ಹೊಸದಾಗಿ ಸ್ಥಾಪನೆಯಾದ ಸಂಸ್ಥೆಗಳು ತಮ್ಮದೇ ಆದ ವಿಶಿಷ್ಠ ಛಾಪು
ಮೂಡಿಸುತ್ತಿರುವ ನವೋದ್ಯಮಗಳನ್ನು ಜಾಗತಿಕ ಅಗ್ರ 50 ನವೋದ್ಯಮಗಳ ಪಟ್ಟಿಗೆ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಜಾಗತಿಕ ಮಟ್ಟದ 150 ಸಿಇಒಗಳು, ಕೈಗಾರಿಕಾ ಮುಖ್ಯಸ್ಥರು, ಮಾಧ್ಯಮ ಹಾಗೂ ಜಾಗತಿಕ ವಿ.ಸಿ.ಗಳ ಸಮ್ಮುಖಗಳ ನವೋದ್ಯಮ ಸಂಸ್ಥೆಗಳು ತಮ್ಮ ಧ್ಯೇಯೋದ್ದೇಶ ಹಾಗೂ ಕಾರ್ಯ ನಿರ್ವಹಣೆ ಕುರಿತ ವಿವರ ನೀಡಬೇಕು.

ಯಾವುದೇ ವಸ್ತುವಿನ ಖರೀದಿ ಇಲ್ಲವೆ, ಸೇವೆ ಪಡೆಯುವಾಗ ಗ್ರಾಹಕರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಈ ಎಲ್ಲ ಮಾಹಿತಿ ತೃಪ್ತಿಕರವಾಗಿದ್ದರಷ್ಟೇ ಜಾಗತಿಕ ಅಗ್ರ 50 ನವೋದ್ಯಮಗಳಲ್ಲಿ ಸ್ಥಾನ ನೀಡಿಕೆಗೆ ಪರಿಗಣಿಸಲಾಗುತ್ತದೆ. ಈವರೆಗೆ ಮನ್ನಣೆ ಪಡೆದಿರುವ ನವೋದ್ಯಮಗಳಿಗೆ ಒಂದು ಶತಕೋಟಿ ಡಾಲರ್‌ವರೆಗೆ ಬಂಡವಾಳ ಕ್ರೋಢೀಕರಿಸಲು ಅನುಕೂಲವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೈರೋಸ್‌ ಸೊಸೈಟಿ ಜಾಗತಿಕ ಯುವ ಉದ್ಯಮಿಗಳ ಸಮುದಾಯವಾಗಿದೆ. ಜಾಗತಿಕವಾಗಿ ಕ್ಲಿಷ್ಟ ಸವಾಲುಗಳನ್ನು ಸುಲಭವಾಗಿ ಪರಿಹರಿಸುವುದು ಈ ಸಮುದಾಯದ ಉದ್ದೇಶ. ಪೀಟರ್‌ ಡಯಾಮಂಡಿಸ್‌, ರಿಚರ್ಡ್‌ ಬ್ರಾನ್ಸನ್‌, ಬಿಲ್‌ಗೇಟ್ಸ್‌ ಮತ್ತು ಬಿಲ್‌ ಕ್ಲಿಂಟನ್‌
ಅವರು ಈ ಸೊಸೈಟಿಯ ಅಂತಾರಾಷ್ಟ್ರೀಯ ಮೆಂಟರ್‌ ಗಳಾಗಿದ್ದಾರೆ. ಒಟ್ಟು 10 ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯು ಪ್ರತಿ ವರ್ಷ ನ್ಯೂಯಾರ್ಕ್‌ ನಲ್ಲಿ ಜಾಗತಿಕ ಸಮಾವೇಶ ಹಮ್ಮಿಕೊಳ್ಳುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next